ಸಾರಾಂಶ
- ಪಿಡಿಒ ಮರುಳಸಿದ್ದಪ್ಪ ಸಲಹೆ । ಬಿದರಕೆರೆ ಗ್ರಾಪಂನಲ್ಲಿ ವಿಕಲಚೇತನ ಮತದಾರರ ಜಾಗೃತಿ ಸಭೆ
- - - ಕನ್ನಡಪ್ರಭ ವಾರ್ತೆ ಜಗಳೂರುವಿಕಲಚೇತನರು ನಮ್ಮ ಸಮಾಜದ ಬಹುಮುಖ್ಯ ಅಂಗ. ಅವರೆಲ್ಲರೂ ಮತದಾನದಿಂದ ವಂಚಿತರಾಗಬಾರದೆಂದು 85 ವರ್ಷದ ಮೇಲ್ಪಟ್ಟ ವಯೋವೃದ್ಧರು ಮತ್ತು ವಿಶೇಷಚೇತನ ಮತದಾರರಿಗೆ ಮನೆಯಿಂದಲೇ ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ನೀಡಿದೆ ಎಂದು ಗ್ರಾಮ ಪಂಚಾಯಿತಿ ಅಧಿಕಾರಿ ಮರುಳಸಿದ್ದಪ್ಪ ಹೇಳಿದರು.
ತಾಲೂಕಿನ ಬಿದರಕೆರೆ ಗ್ರಾಮ ಪಂಚಾಯಿತಿಯಲ್ಲಿ ಶನಿವಾರ ಸಾರ್ವತ್ರಿಕ ಲೋಕಸಭಾ ಚುನಾವಣೆ- 2024ರ ಪ್ರಯುಕ್ತ ವಿಕಲಚೇತನ ಮತದಾರರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಬೂತ್‌ಮಟ್ಟದ ಅಧಿಕಾರಿಗಳಾದ ಅಂಗನವಾಡಿ ಕಾರ್ಯಕರ್ತೆಯರ ಜೊತೆ ಆಶಾ ಕಾರ್ಯಕರ್ತೆಯರು ಸೇರಿ ಬಿದರಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ 38 ವಿಶೇಷಚೇತನರರಿಂದ ಮತದಾನ ಮಾಡಿಸಬೇಕು. ಆಗ ಮಾತ್ರ ಇಂದಿನ ವಿಕಲಚೇತನ ಮತದಾರರ ಜಾಗೃತಿ ಕಾರ್ಯಕ್ರಮ ಯಶಸ್ವಿಯಾಗುತ್ತದೆ ಎಂದು ಸಲಹೆ ನೀಡಿದರು.
ವಿಕಲಚೇತನರ ಅಭಿವೃದ್ಧಿ ಸಂಘದ ರಾಜ್ಯಾಧಕ್ಷ ಮಹಾಂತೇಶ್ ಬ್ರಹ್ಮ ಮಾತನಾಡಿ, ಸಂವಿಧಾನಶಿಲ್ಪಿ ಡಾ. ಅಂಬೇಡ್ಕರ್ ಅವರು ದೇಶದ ಪ್ರತಿಯೊಬ್ಬ ನಾಗರಿಕನಿಗೆ ಮೂಲಭೂತ ಹಕ್ಕುಗಳ ಜೊತೆ ಕರ್ತವ್ಯದ ಜವಾಬ್ದಾರಿಗಳನ್ನು ನೀಡಿದ್ದಾರೆ. ಪ್ರತಿಯೊಬ್ಬರು ಮತದಾನ ಮಾಡಿದಾಗ ಮಾತ್ರ ನಮ್ಮ ಮೂಲಭೂತ ಕರ್ತವ್ಯ ನೆರವೇರಿಸಿದಂತಾಗುತ್ತದೆ ಎಂದರು.ವಿಕಲಚೇತನರು ಮನೆಯಿಂದಲೇ ಮತದಾನ ಮಾಡಲೆಂದು ಮೇಲಾಧಿಕಾರಿಗಳ ಆದೇಶದ ಮೇರೆಗೆ ತಾಲೂಕಿನ 22 ಗ್ರಾಮ ಪಂಚಾಯಿತಿಗಳಲ್ಲಿ ವಿಕಲಚೇತನ ಮತದಾನ ಜಾಗೃತಿ ಕಾರ್ಯಕ್ರಮ ನಡೆಯುತ್ತಿದೆ. ವಿಕಲಚೇತನರು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಸಂತಸದ ಸಂಗತಿಯಾಗಿದೆ. ತಾಲೂಕಿನಲ್ಲಿ 100ಕ್ಕೆ 100ರಷ್ಟು ವಿಶೇಷಚೇತನರು ಮತದಾನ ಮಾಡಲು ವಿಕಲಚೇತನರ ಅಭಿವೃದ್ಧಿ ಸಂಘ ಸ್ವಯಂಪ್ರೇರಿತವಾಗಿ ಪ್ರೇರೇಪಣೆ ನೀಡುವ ಕೆಲಸ ಮಾಡುತ್ತಿದೆ ಎಂದು ಮಹಾಂತೇಶ್ ಬ್ರಹ್ಮ ತಿಳಿಸಿದರು.
ಈ ಸಂದರ್ಭ ಗ್ರಾಮೀಣ ಪುನಶ್ಚೇತನ ಕಾರ್ಯಕರ್ತ ರಾಮಚಂದ್ರಪ್ಪ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯತಿ ಸಿಬ್ಬಂದಿ ಹೇಮಣ್ಣ, ಗಿರೀಶ್ ಹಾಗೂ ವಿಕಲಚೇತನ ಮತದಾರರು, ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.- - - -21:
ಜಗಳೂರು ತಾಲೂಕಿನ ಬಿದರಕೆರೆ ಗ್ರಾಮ ಪಂಚಾಯಿತಿಯಲ್ಲಿ ಶನಿವಾರ ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರ ಪ್ರಯುಕ್ತ ವಿಕಲಚೇತನ ಮತದಾರರ ಜಾಗೃತಿ ಕಾರ್ಯಕ್ರಮ ನಡೆಯಿತು.