ಮತದಾನ ಸಂವಿಧಾನ ನೀಡಿರುವ ವರದಾನ

| Published : Apr 19 2024, 01:00 AM IST

ಸಾರಾಂಶ

ಪ್ರಜಾಪ್ರಭುತ್ವ ಗಟ್ಟಿಗೊಳ್ಳಬೇಕಾದರೆ ಎಲ್ಲರೂ ತಪ್ಪದೇ ಮತದಾನದ ಹಕ್ಕನ್ನು ಚಲಾಯಿಸಬೇಕು

ಮುಂಡರಗಿ: ಮತದಾನ ಸಂವಿಧಾನ ನೀಡಿರುವ ವರದಾನ, ಅಂತಹ ಅತ್ಯಮೂಲ್ಯ ಹಕ್ಕನ್ನು ತಪ್ಪದೇ ಚಲಾಯಿಸುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ವಿಶ್ವನಾಥ ಹೊಸಮನಿ ಹೇಳಿದರು.

ಅವರು ಗುರುವಾರ ತಾಲೂಕಿನ ಡಂಬಳ ಗ್ರಾಮದ ಹೊರ ವಲಯದಲ್ಲಿನ ನರೇಗಾ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ ನಂತರ ಮತದಾನ ಜಾಗೃತಿ ಮೂಡಿಸಿ ಮಾತನಾಡಿದರು. ಪ್ರಜಾಪ್ರಭುತ್ವ ಗಟ್ಟಿಗೊಳ್ಳಬೇಕಾದರೆ ಎಲ್ಲರೂ ತಪ್ಪದೇ ಮತದಾನದ ಹಕ್ಕನ್ನು ಚಲಾಯಿಸಬೇಕು. ಕೇವಲ ನಾವು ಮಾತ್ರ ಮತದಾನ ಮಾಡುವುದಲ್ಲದೇ ನೆರೆಹೊರೆಯವರಿಗೂ ಸಹ ತಪ್ಪದೇ ಮತದಾನ ಮಾಡುವಂತೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ನರೇಗಾ ಕೂಲಿ ಮೊತ್ತ ಈಗ ₹349ಕ್ಕೆ ಹೆಚ್ಚಳವಾಗಿದೆ.ಅಳತೆಗೆ ತಕ್ಕಂತೆ ಕಾಮಗಾರಿಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಎಲ್ಲರೂ ಶ್ರಮಿಸಬೇಕು. ಸಾಮೂಹಿಕ ಬದು ನಿರ್ಮಾಣ ಕಾಮಗಾರಿಯಿಂದ ಮಣ್ಣಿನ ಫಲವತ್ತತೆ ಹೆಚ್ಚಳವಾಗಿ ಮಣ್ಣಿನ ಸವಕಳಿ ತಡೆಗಟ್ಟಲು ನೆರವಾಗುತ್ತದೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದರು.

ಈ ಸಂದರ್ಭದಲ್ಲಿ ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಮೋದ ತುಂಬಳ, ಪಿಡಿಓ ಶಶಿಧರ ಹೊಂಬಳ, ಟಿಸಿ ಹರೀಶ ಸೊಬರದ ಹಾಗೂ ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು‌.