ಮತದಾನವು ಪ್ರತಿ ನಾಗರಿಕನ ಅಮೂಲ್ಯ ಹಕ್ಕು-ಸುರೇಶ ಹುಗ್ಗಿ

| Published : Nov 28 2024, 12:32 AM IST

ಮತದಾನವು ಪ್ರತಿ ನಾಗರಿಕನ ಅಮೂಲ್ಯ ಹಕ್ಕು-ಸುರೇಶ ಹುಗ್ಗಿ
Share this Article
  • FB
  • TW
  • Linkdin
  • Email

ಸಾರಾಂಶ

ಮತದಾನವು ಪ್ರತಿ ನಾಗರಿಕನ ಅಮೂಲ್ಯ ಹಕ್ಕು ಹಾಗೂ ಪ್ರಬಲವಾದ ಸಾಧನವಾಗಿದೆ. ಪ್ರಜಾಪ್ರಭುತ್ವದ ಜೀವಾಳವಾದ ಈ ಹಕ್ಕನ್ನು ಪರಿಣಾಮಕಾರಿಯಾಗಿ ಚಲಾಯಿಸುವುದರ ಮೂಲಕ ದೇಶದ ಆಡಳಿತದಲ್ಲಿ ಭಾಗವಹಿಸಲು ಸಂವಿಧಾನ ಭಾರತದ ಪ್ರತಿ ಪ್ರಜೆಗೂ ಸಮಾನ ಅವಕಾಶ ನೀಡಿದ್ದು, ನಿಸ್ಪಕ್ಷಪಾತವಾಗಿ ಮತ ಚಲಾಯಿಸಿ ದೇಶದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಹುಗ್ಗಿ ಹೇಳಿದರು.

ಹಾವೇರಿ: ಮತದಾನವು ಪ್ರತಿ ನಾಗರಿಕನ ಅಮೂಲ್ಯ ಹಕ್ಕು ಹಾಗೂ ಪ್ರಬಲವಾದ ಸಾಧನವಾಗಿದೆ. ಪ್ರಜಾಪ್ರಭುತ್ವದ ಜೀವಾಳವಾದ ಈ ಹಕ್ಕನ್ನು ಪರಿಣಾಮಕಾರಿಯಾಗಿ ಚಲಾಯಿಸುವುದರ ಮೂಲಕ ದೇಶದ ಆಡಳಿತದಲ್ಲಿ ಭಾಗವಹಿಸಲು ಸಂವಿಧಾನ ಭಾರತದ ಪ್ರತಿ ಪ್ರಜೆಗೂ ಸಮಾನ ಅವಕಾಶ ನೀಡಿದ್ದು, ನಿಸ್ಪಕ್ಷಪಾತವಾಗಿ ಮತ ಚಲಾಯಿಸಿ ದೇಶದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಹುಗ್ಗಿ ಹೇಳಿದರು.ನಗರದ ಗುರುಭವನದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ ಹಾವೇರಿ, ಜಿಲ್ಲಾ ಪಂಚಾಯತ್, ಸ್ವೀಪ್‌ ಸಮಿತಿ, ಉಪನಿರ್ದೇಶಕರ ಕಾರ್ಯಾಲಯ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಜಿಲ್ಲೆಯ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.ಪ್ರೌಢಶಾಲೆ ಹಂತದಿಂದಲೇ ಪ್ರಜಾಪ್ರಭುತ್ವ ಮತ್ತು ಮತದಾನದ ಬಗ್ಗೆ ಅರಿವು ಮೂಡಿಸಲು ಮತದಾರರ ದಿನ ಆಚರಿಸುತ್ತಿದ್ದು, ಎಲ್ಲಾ ಚುನಾವಣೆಯಲ್ಲಿ ಅತೀ ಹೆಚ್ಚು ಮತದಾನವಾಗುವಂತೆ ಪ್ರೇರೇಪಿಸಲಾಗುತ್ತಿದೆ. ಸುಶಿಕ್ಷಿತ ಜನರೇ ಈ ಅಮೂಲ್ಯ ಕರ್ತವ್ಯದಿಂದ ವಿಮುಖರಾಗುತ್ತಿದ್ದಾರೆ. ಸಂವಿಧಾನದ ಆಶಯವು ಸಾಕಾರಗೊಳ್ಳಬೇಕಾದರೆ ಹೊಸ ಮತದಾರರನ್ನು ನೋಂದಾಯಿಸುವ ಹಾಗೂ ಎಲ್ಲರ ಸಾಮೂಹಿಕ ಸಹಭಾಗಿತ್ವದ ಜವಾಬ್ದಾರಿಯನ್ನು ನೆನಪಿಸುವ ಮಹತ್ತರ ಕಾರ್ಯವಾಗಬೇಕಾಗಿದೆ ಎಂದು ಹೇಳಿದರು.ವಿಷಯ ಪರಿವೀಕ್ಷಕ ಸುರೇಶ ಮೂಡಲದವರ ಮಾತನಾಡಿ, ಭಾರತವು ಜಗತ್ತಿನಲ್ಲಿಯೇ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗಳು ದೇಶದ ಘನತೆ ಹಾಗೂ ಸಾರ್ವಭೌಮತೆಯನ್ನು ಎತ್ತಿ ಹಿಡಿಯುತ್ತವೆ. ಮುಂದಿನ ಮತದಾರರಾಗುವ ವಿದ್ಯಾರ್ಥಿಗಳು ಯಾವದೇ ಧರ್ಮ, ಜಾತಿ, ಜನಾಂಗದ ಪ್ರಚೋದನೆಗೆ ಒಳಗಾಗದೇ ನಿರ್ಭೀತಿಯಿಂದ ಮತ ಚಲಾಯಿಸಿ, ಸಶಕ್ತ ದೇಶ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು. ಇಎಲ್‌ಸಿಯ ನೋಡಲ್ ಅಧಿಕಾರಿ ಆಮೀರ ಭಾಷಾ ಮಾತನಾಡಿ, ತಾಲೂಕು ಹಂತದ ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ ಬಂದ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದಲ್ಲಿ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ. ಇಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗುತ್ತಾರೆ. ವಿಜೇತರಿಗೆ ನಗದು ಬಹುಮಾನ ಮತ್ತು ಪಾರಿತೋಷಕ ನೀಡಲಾಗುವದು. ಸ್ಪರ್ಧಾಳುಗಳು ಕ್ರೀಡಾ ಮನೋಭಾವದಿಂದ ಭಾಗವಹಿಸಿ ಪ್ರತಿನಿಧಿಸುವ ಜಿಲ್ಲೆಗೆ ಹೆಸರು ತರಬೇಕು ಹಾಗೂ ಚುನಾವಣೆಗಳಲ್ಲಿ ಹೆಚ್ಚು ಮತದಾನವಾಗುವಂತೆ ನೆರೆಹೊರೆಯವರ, ಬಂಧುಗಳ ಮನ ಒಲಿಸಬೇಕು ಎಂದು ಹೇಳಿದರು.ಸಮಾರಂಭದಲ್ಲಿ ಮಂಜಪ್ಪ ಆರ್, ದೇವೇಂದ್ರಪ್ಪ ಬಸಮ್ಮನವರ, ಷೇಕ್‌ಇಮಾಮ್ ಹಾನಗಲ್ಲ, ಆರ್.ಎಸ್. ಹೆಸರೂರ, ಶಿವಬಸವ ಮರಳಿಹಳ್ಳಿ, ಇಸ್ಮಾಯಿಲ್ ತಡಕನಹಳ್ಳಿ, ಎಸ್.ಆರ್. ಮಳವಳ್ಳಿ, ಶಿವಾನಂದ ಪುರದ, ಗಿರೀಶ ಮತ್ತಿಹಳ್ಳಿ, ಇರ್ಪಾನ ಬಾಳಿಕಾಯಿ, ಗೋವಿಂದರಾಜ್ ಕಡಕೋಳ, ಅಶೋಕ ಯಣ್ಣಿ, ಮತ್ತಿತರರು ಇದ್ದರು.ಅಬ್ದುಲಖಾದರ ಕಡೇಕೊಪ್ಪ ಸ್ವಾಗತಿಸಿದರು. ಹಜ್ಜು ನದಾಫ ನಿರೂಪಿಸಿದರು. ಎಸ್.ಎಸ್. ರಟ್ಟಿಹಳ್ಳಿ ವಂದಿಸಿದರು.ರಾಜ್ಯಮಟ್ಟಕ್ಕೆ ಆಯ್ಕೆ: ಭಿತ್ತಿಚಿತ್ರ ಸ್ಪರ್ಧೆಯಲ್ಲಿ ಹಿರೇಕೆರೂರಿನ ಸರ್ಕಾರಿ ಕನ್ನಡ ಪ್ರೌಢಶಾಲೆಯ ಅಕ್ಷತಾ ಎಂ.ವಿ. ಪ್ರಥಮ, ಕನ್ನಡ ಪ್ರಬಂಧದಲ್ಲಿ ಕಾಕೋಳದ ಸರ್ಕಾರಿ ಪ್ರೌಢ ಶಾಲೆಯ ಯಶಸ್ವಿನಿ ಸೂರಣಗಿ, ಇಂಗ್ಲಿಷ್ ಪ್ರಬಂಧದಲ್ಲಿ ಹಾವೇರಿಯ ಸಾಯಿಚಂದ್ರ ಗುರುಕುಲದ ಸ್ವಾತಿ ಹಬೀಬ, ರಸಪ್ರಶ್ನೆಯಲ್ಲಿ ವರ್ದಿಯ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದರು.