ಮತದಾರರನ್ನು ನೋಂದಾಯಿಸಿ ಅವರು ಕಡ್ಡಾಯ, ನಿಷ್ಪಕ್ಷಪಾತ ಹಾಗೂ ಪ್ರ್ರಾಮಾಣಿಕವಾಗಿ ಮತದಾನ ಮಾಡುವುದು, ಹಾಗೆಯೇ ಸ್ವೀಪ್ ಚಟುವಟಿಕೆಗಳ ಮೂಲಕ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹಲವು ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಮತದಾರರನ್ನು ಸೆಳೆಯುವುದಕ್ಕೆ ಇಂತಹ ಕಾರ್ಯಕ್ರಮಗಳು ಹೆಚ್ಚು ಅನುಕೂಲವಾಗಿವೆ.

ಕನ್ನಡಪ್ರಭ ವಾರ್ತೆ ಮೈಸೂರು

ಮತದಾನ ಎನ್ನುವುದು ಪ್ರತಿಯೊಬ್ಬ ಪ್ರಜೆಯ ಹಾಗೂ ಸಮುದಾಯಗಳ ಧ್ವನಿಯಾಗಿದೆ ಎಂದು ಎಚ್.ಡಿ. ಕೋಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಬೋರಮ್ಮ ಎಚ್‌. ಅಂಗಡಿ ತಿಳಿಸಿದರು.

ನಗರದ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ, ಚುನಾವಣಾ ಸಾಕ್ಷರತಾ ಕ್ಲಬ್ ಹಾಗೂ ರಾಜ್ಯಶಾಸ್ತ್ರ ವಿಭಾಗವು ಜಂಟಿಯಾಗಿ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಮತದಾನದ ಪ್ರಾಮುಖ್ಯತೆ ಮತ್ತು ಪ್ರಜೆಗಳ ಮೇಲಿರುವ ಜವಾಬ್ದಾರಿ ಕುರಿತು ಜಾಗೃತಿ ಮೂಡಿಸುವುದೇ ಈ ಮತದಾರ ದಿನಾಚರಣೆಯ ಉದ್ದೇಶವಾಗಿದೆ ಎಂದರು.

ಮತದಾರರನ್ನು ನೋಂದಾಯಿಸಿ ಅವರು ಕಡ್ಡಾಯ, ನಿಷ್ಪಕ್ಷಪಾತ ಹಾಗೂ ಪ್ರ್ರಾಮಾಣಿಕವಾಗಿ ಮತದಾನ ಮಾಡುವುದು, ಹಾಗೆಯೇ ಸ್ವೀಪ್ ಚಟುವಟಿಕೆಗಳ ಮೂಲಕ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹಲವು ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಮತದಾರರನ್ನು ಸೆಳೆಯುವುದಕ್ಕೆ ಇಂತಹ ಕಾರ್ಯಕ್ರಮಗಳು ಹೆಚ್ಚು ಅನುಕೂಲವಾಗಿವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಮರೀಗೌಡ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಚುನಾವಣೆಗಳು ಹೇಗೆ ನಡೆಯುತ್ತಿವೆ ಎಂಬುದು ಎಲ್ಲರಿಗೂ ತಿಳಿದಿದೆ. ಪ್ರಾಮಾಣಿಕತೆಯಿಂದ ಮತ ಚಲಾವಣೆಯಾಗಬೇಕಾಗಿತ್ತು, ಆದರೆ ಇಂದಿನ ಮತದಾರರು ಹಲವು ಆಸೆ ಆಮಿಷಗಳಿಗೆ ಬಲಿಯಾಗಿ ಮತವನ್ನು ಚಲಾಯಿಸುತ್ತಿದ್ದಾರೆ ಎಂದು ವಿಷಾದಿಸಿದರು.

ಹಿಂದೆ ಯೋಗ್ಯ ಅಭ್ಯರ್ಥಿಗೆ ಜನರೇ ಚುನಾವಣಾ ವೆಚ್ಚಕ್ಕೆ ಹಣ ನೀಡಿ ಗೆಲ್ಲಿಸಿ ಆಶೀರ್ವದಿಸುತ್ತಿದ್ದರು. ಆದುದರಿಂದ ಯುವ ಮತದಾರರಾದ ನೀವು ಗ್ರಾಮಗಳ ಮಟ್ಟದಲ್ಲಿ ಚಿಕ್ಕ ಚಿಕ್ಕ ಗುಂಪುಗಳನ್ನು ರಚಿಸಿ, ಉತ್ತಮ ಕೆಲಸ ನಿರ್ವಹಿಸುವ ಪ್ರಾಮಾಣಿಕ ಅಭ್ಯರ್ಥಿಗಳನ್ನು ಗೆಲ್ಲಿಸಿ, ಮಾದರಿ ಗ್ರಾಮ ಪಂಚಾಯ್ತಿಗಳ ರಚನೆ ಮಾಡಿಕೊಳ್ಳಿ. ಮತದಾನದಿಂದ ಯುವ ಮತದಾರರು, ಮಹಿಳೆಯರು, ನಗರದ ಮತದಾರರು ಮತಚಲಾಯಿಸದೇ ಹೊರಗುಳಿಯುತ್ತಿದ್ದಾರೆ. ಹೀಗಾದರೇ ಸಧೃಢ ಭಾರತವನ್ನು ನಿರ್ಮಿಸಲು ಹೇಗೆ ಸಾಧ್ಯ? ಇಂತಹ ಸಾಕ್ಷರತಾ ಕ್ಲಬ್‌ ಗಳು ಮತದಾರರಲ್ಲಿ ಅರಿವು ಮೂಡಿಸಿ ಬಲಿಷ್ಟ ದೇಶದ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಅವರು ಕರೆ ನೀಡಿದರು.

ಇದೇ ವೇಳೆ ಸಾಕ್ಷರತಾ ಕ್ಲಬ್‌ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕ್ಲಬ್‌ ಸಂಯೋಜಕಿ ಕೆ.ಎನ್. ಆಶಾ ಸ್ವಾಗತಿಸಿದರು. ಸಿ.ಎನ್. ಐಶ್ವರ್ಯ ನಿರೂಪಿಸಿದರು. ಡಾ. ಅರ್ಪುದರಾಜು ವಂದಿಸಿದರು.ಮತದಾನ ಜಾಗೃತಿ ಗೀತೆ ರಚಿಸಿದ ಎಡಿಸಿ

ಮೈಸೂರು: ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು ಅವರು, ಮತದಾನ ಜಾಗೃತಿ ಗೀತೆಯೊಂದನ್ನು ರಚಿಸಿದ್ದಾರೆ.

ಕಳೆದ ವರ್ಷವೂ ಮತದಾನ ಜಾಗೃತಿ ಗೀತೆ, ದಸರಾ ಗೀತೆಯನ್ನು ರಚಿಸಿದ್ದ ಅವರು ಈ ಬಾರಿಯೂ ಮತದಾನ ಜಾಗೃತಿ ಗೀತೆ ರಚಿಸಿ, ಅದಕ್ಕೆ ರಾಗ ಮತ್ತು ಸಂಗೀತ ಸಂಯೋಜಿಸಿ ವೀಡಿಯೋ ಒಂದನ್ನು ಸಿದ್ಧಪಡಿಸಿದ್ದಾರೆ.

ಗೀತೆ ಹೀಗಿದೆ...

ಮತದಾನವೆಂದರೆ ಜವಬ್ದಾರಿಯುತ ಕರ್ತವ್ಯ

ಪ್ರಜಾಪ್ರಭುತ್ವಕ್ಕೆ ಮತದಾನವೇ ಆಂತರ್ಯ

ಮಾಡೋಣ ಬನ್ನಿ ಮತದಾನ

ನೀಡೋಣ ಬನ್ನಿ ವಾಗ್ದಾನ

ಮತದಾನ ಎಲ್ಲಿದೆಯೋ ಅಲ್ಲಿ ಸಮಾಧಾನ.

ಮತದಾನ ದಿನಕ್ಕೆ ಅವಧಾನ

ಮತಗಟ್ಟೆಗೆ ತೆರಳಲು ವ್ಯವಧಾನ

ಮತದಾನ ಮಾಡಿದರೆ ನಿಮಗದೆ ಸನ್ಮಾನ.

ಬೇಡ ಯಾವುದೇ ಅನುಮಾನ

ನಮ್ಮ ಮತವೇ ನಮ್ಮ ಅಭಿಮಾನ

ಮಾಡೋಣ ಬನ್ನಿ ಮತದಾನದ ಅಭಿಯಾನ.