ಸಾರಾಂಶ
ಕನ್ನಡಪ್ರಭ ವಾರ್ತೆ ಶಹಾಪುರ
ಚುನಾವಣೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಬ್ಬಗಳಿದ್ದಂತೆ ಎಲ್ಲರು ಸಂಭ್ರಮದಿಂದ ಪಾಲ್ಗೊಳ್ಳುವ ಮೂಲಕ ತಪ್ಪದೇ ಮತದಾನ ಮಾಡುವುದು ನಮ್ಮೆಲ್ಲರ ಹಕ್ಕು ಮತ್ತು ಜವಾಬ್ದಾರಿ ಎಂದು ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಪ್ರವೀಣ ಕುಮಾರ ಅವರು ಹೇಳಿದರು.ತಾಲೂಕಿನ ದೋರನಹಳ್ಳಿ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ, ತಾಲೂಕು ಸ್ವೀಪ್ ಸಮಿತಿ ಹಾಗೂ ಗ್ರಾಮ ಪಂಚಾಯ್ತಿ ದೊರನಹಳ್ಳಿ ಸಹಯೋಗದಲ್ಲಿ ಹೋಬಳಿ ಮಟ್ಟದ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಚುನಾವಣೆಯಲ್ಲಿ ಓಟ್ ಹಾಕುವ ಪ್ರತಿಯೊಬ್ಬರ ಮತವು ಅಮೂಲ್ಯವಾಗಿದ್ದು, ಎಲ್ಲರೂ ಚುನಾವಣಾ ವ್ಯವಸ್ಥೆಯಲ್ಲಿ ಪಾಲ್ಗೊಳ್ಳಬೇಕು. ತಮ್ಮ ಕುಟುಂಬ, ಸ್ನೇಹಿತರು ನೆರೆಹೊರೆಯವರಿಗೂ ನೈತಿಕ ಮತದಾನದ ಬಗ್ಗೆ ಜಾಗೃತಿ ಮೂಡಿಸಿ ತಮ್ಮ ಹಕ್ಕು ಚಲಾಯಿಸಲು ಪ್ರೇರೇಪಿಸಬೇಕು ಮತದಾನ ಕೇವಲ ಹಕ್ಕಷ್ಟೇ ಅಲ್ಲ, ಕರ್ತವ್ಯ ಕೂಡ ಹೌದು. ಯಾವುದೇ ಆಮಿಷಗಳಿಗೆ ಒಳಗಾಗದೆ ಮತದಾನ ಮಾಡಬೇಕು ಎಂದರು.ಸದೃಢ ಸರಕಾರ ರಚನೆ ಮಾಡಲು ಭಾರತೀಯ ಸಂವಿಧಾನ 18 ವರ್ಷ ತುಂಬಿದ ಪ್ರತಿಯೊಬ್ಬ ಪ್ರಜೆಗೂ ಚುನಾವಣೆಗಳಲ್ಲಿ ಯಾವುದೇ ಆಮಿಷಕ್ಕೆ ಒಳಗಾಗದೇ ನಿರ್ಭಿತಿಯಿಂದ ಮತದಾನ ಮಾಡಲು ಹಕ್ಕು ನೀಡಿದೆ. ಮತದಾನದ ಹಕ್ಕುನ್ನು ಚಲಾಯಿಸುವದು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರ ಜವಾಬ್ದಾರಿ. ಎಲ್ಲರೂ ತಪ್ಪದೆ ತಮ್ಮ ಹತ್ತಿರದ ಮತದಾನ ಕೇಂದ್ರಕ್ಕೆ ತೆರಳಿ ಮತದಾನ ಮಾಡಬೇಕು ಮನವಿ ಮಾಡಿದರು.
ಹಿರಿಯ ನಾಗರಿಕರ ಸಬಲೀಕರಣ ಹಾಗೂ ವಿಶೇಷಚೇತನರ ಕಲ್ಯಾಣಾಧಿಕಾರಿ ಶರಣಗೌಡ ಪಾಟೀಲ್ ಮಾತನಾಡಿ, ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ಜಿಲ್ಲೆಯಾದ್ಯಂತ ವಿವಿಧ ಸ್ವೀಪ್ ಚಟುವಟಿಕೆಗಳ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮತದಾರರಿಗೆ ಮತದಾನದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಮೇ 7ರಂದು ನಡೆಯುವ ಚುನಾವಣೆಯಲ್ಲಿ ಅರ್ಹ ಮತದಾರರು ತಮ್ಮ ಮತದಾನದ ಹಕ್ಕನ್ನು ತಪ್ಪದೇ ಚಲಾಯಿಸುವಂತೆ ಮಾಡಲು (ಸ್ವೀಪ್) ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣಾ ಭಾಗವಹಿಸುವಿಕೆ ಚಟುವಟಿಕೆಗಳಡಿ ಮತದಾರರಿಗೆ ಮತದಾನದ ಕುರಿತು ಜಾಗೃತಿ ಮೂಡಿಸಲು ಕಾಲ್ನಡಿಗೆ ಜಾಥ, ರಂಗೋಲಿ, ಕ್ರೀಡಾ ಚಟುವಟಿಕೆ ಹಮ್ಮಿಕೊಳ್ಳುವ ಮೂಲಕ ಮತದಾನದ ಹಕ್ಕು ಚಲಾಯಿಸುವಂತೆ ಮತದಾರರಲ್ಲಿ ಮನವರಿಕೆ ಮಾಡುವ ವಿನೂತನ ಪ್ರಕ್ರಿಯೆ ಎಂದರು.
ಜಿಲ್ಲಾ ಚುನಾವಣಾ ರಾಯಭಾರಿ ಮಾಯಾ ಎಸ್. ಆರ್. ನಾಯಕ ಅವರು ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಮಲ್ಲಯ್ಯ ದೇವಸ್ಥಾನದಿಂದ ವಿಶೇಷಚೇತನರ ತ್ರಿಚಕ್ರ ವಾಹನ ಹಾಗೂ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳೊಂದಿಗೆ ಕಾಲ್ನಡಿಗೆ ಮೂಲಕ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆವರೆಗೆ ಜಾಗೃತಿ ಜಾಥ ಮಾಡಲಾಯಿತು.ಪ್ರಶಸ್ತಿ ಪತ್ರ ವಿತರಣೆ: ಗ್ರಾಮೀಣ ಪ್ರದೇಶದ ಮತದಾರರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲು ಸ್ವೀಪ್ ಕಾರ್ಯಕ್ರಮದಡಿ ರಂಗೋಲಿ, ಲೆಮನ್ ಸ್ಪೂನ್ ಓಟ, ಗೋಣಿ ಚೀಲ ಓಟ ಹಾಗೂ ಸ್ಕಿಪ್ಪಿಂಗ್ ಓಟದ ಕ್ರೀಡಾ ಚಟುವಟಿಕೆ ಆಯೋಜಿಸಿತ್ತು. ವಿಜೇತರಿಗೆ ಪ್ರಶಸ್ತಿ ಪತ್ರ ನೀಡಿ, ಗೌರವಿಸಲಾಯಿತು.
ಚುನಾವಣಾ ರಾಯಭಾರಿ ಗಂಗಾಧರ ಹೊಟ್ಟಿ ಅವರ ಸ್ವರಚಿತ ಮತದಾನ ಜಾಗೃತಿ ಹಾಡು ಹಾಡಿದರು. ತಾಲೂಕು ಪಂಚಾಯ್ತಿ ಸಹಾಯಕ ನಿರ್ದೇಶಕ ಭೀಮಣ್ಣಗೌಡ ಬಿರಾದಾರ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾವುತಪ್ಪ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕಿ ದೀಪಾ, ಕ್ರೀಡಾ ಇಲಾಖೆ ಅಧಿಕಾರಿ ರಾಜು ಬಾವಿಹಳ್ಳಿ, ಅಕ್ಷರದಾಸೋಹ ಇಲಾಖೆಯ ಸಹಾಯಕ ನಿರ್ದೇಶಕ ಸೂರ್ಯವಂಶಿ, ವಯಸ್ಕರ ಶಿಕ್ಷಣ ಇಲಾಖೆ ಅಧಿಕಾರಿ ಜಟ್ಟೆಪ್ಪ, ಬಿಆರ್‌ಸಿ ರೇಣುಕಾ, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಗುರು ಸಿದ್ದಪ್ಪ ಸಿಂಘೆ ಸೇರಿದಂತೆ ಇತರರಿದ್ದರು.