ದೇಶದ ಅಭ್ಯುದಯಕ್ಕೆ ಮತದಾನದಿಂದ ಯಾರೂ ಹೊರಗುಳಿಯದೆ ಎಲ್ಲ ಅರ್ಹ ಮತದಾರರು ಸಂವಿಧಾನ ಕೊಡಮಾಡಿದ ಪವಿತ್ರವಾದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು, ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹರೀಶ.ಎ ಕರೆ ನೀಡಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ದೇಶದ ಅಭ್ಯುದಯಕ್ಕೆ ಮತದಾನದಿಂದ ಯಾರೂ ಹೊರಗುಳಿಯದೆ ಎಲ್ಲ ಅರ್ಹ ಮತದಾರರು ಸಂವಿಧಾನ ಕೊಡಮಾಡಿದ ಪವಿತ್ರವಾದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು, ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹರೀಶ.ಎ ಕರೆ ನೀಡಿದರು.ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾ ನ್ಯಾಯಾಂಗ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದಲ್ಲಿ ನಗರದ ಜಿಪಂ ಸಭಾಂಗಣದಲ್ಲಿ ನನ್ನ ಭಾರತ-ನನ್ನ ಮತ ಎಂಬ ಘೋಷ ವಾಕ್ಯದಡಿ ನಡೆದ 16ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮತದಾನ ಮಾಡುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ. ನಮಗೆ ನೀಡಿರುವ ಮತದಾನದ ಹಕ್ಕನ್ನು ದುರ್ಬಳಕೆ ಮಾಡಿಕೊಳ್ಳದೇ, ಸದುಪಯೋಗ ಪಡೆದು ನಿಷ್ಠೆ, ಪ್ರಾಮಾಣಿಕತೆಯಿಂದ ಮತದಾನ ಮಾಡುವ ಮನೋಭಾವವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಯುವ ಅರ್ಹ ಮತದಾರರು ಮತದಾನದಿಂದ ವಂಚಿತರಾಗದೇ ಕಡ್ಡಾಯವಾಗಿ ತಮ್ಮ ಮತ ಚಲಾಯಿಸಬೇಕು. ನನ್ನೊಂದು ಮತದಿಂದ ಏನಾಗುತ್ತದೆ ಎಂಬ ಉದಾಸೀನತೆ ಹೊಂದದೇ ಮತದ ಮೌಲ್ಯ ಅರಿತು, ಪ್ರಜಾಪ್ರಭುತ್ವ ಹಬ್ಬದಲ್ಲಿ ಎಲ್ಲರೂ ಕಟುಂಬ ಸಮೇತರಾಗಿ ಪಾಲ್ಗೊಳ್ಳಬೇಕು. ನಮ್ಮ ಜವಾಬ್ದಾರಿ ಅರಿತು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದು ಹೇಳಿದರು.ಜಿಲ್ಲಾಧಿಕಾರಿ ಡಾ.ಆನಂದ.ಕೆ ಮಾತನಾಡಿ, ನಮ್ಮದು ಪ್ರಜಾಪ್ರಭುತ್ವ ದೇಶವಾಗಿದ್ದು, ಜಗತ್ತಿನಲ್ಲೇ ಅತೀ ದೊಡ್ಡ ಪ್ರಜಾಪ್ರಭುತ್ವವ ವ್ಯವಸ್ಥೆ ಹೊಂದಿದ ರಾಷ್ಟ್ರವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಭದ್ರ ಬುನಾದಿಯಾಗಿದೆ. ಮತದಾರರು ಚುನಾವಣೆಯಲ್ಲಿ ಅತೀ ಮುಖ್ಯವಾದ ಪಾತ್ರ ವಹಿಸುತ್ತಾರೆ. ಪ್ರಜಾಪ್ರಭುತ್ವ ದೇಶದಲ್ಲಿ ಚುನಾವಣೆಯನ್ನು ನಡೆಸುವುದು ದೊಡ್ಡ ಜವಾಬ್ದಾರಿಯಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆ ಮತದಾನ ಪ್ರಕ್ರಿಯೆಯಲ್ಲಿ ಮಹಿಳಾ ಪಾಲ್ಗೊಳ್ಳುವಿಕೆ ಪಾತ್ರ ಬಹು ಮುಖ್ಯವಾಗಿದೆ. ಮಹಿಳೆಯರು ಮತದಾನ ಮಹತ್ವ ತಿಳಿದುಕೊಳ್ಳಬೇಕು. ಸಂವಿಧಾನದ ಮೂಲಭೂತ ಕರ್ತವ್ಯಗಳನ್ನು ನಾವೆಲ್ಲರೂ ಪಾಲನೆ ಮಾಡೋಣ. ಮತದಾನ ಸಂದರ್ಭದಲ್ಲಿ ತಮ್ಮ ಕಾರ್ಯ ಕೆಲಸದ ನಿಮಿತ್ಯ ಬೇರೆಡೆ ತೆರಳದೆ ತಮಗೆ ಸಂಬಂಧಿಸಿದ ಮತಗಟ್ಟೆಗೆ ತೆರಳಿ ಕಡ್ಡಾಯ ಮತದಾನ ಮಾಡಿ, ಸಂವಿಧಾನಬದ್ಧ ಹಕ್ಕನ್ನು ನಿಷ್ಠೆಯಿಂದ ಚಲಾಯಿಸೋಣ. ಇದು ಎಲ್ಲ ನಾಗರಿಕರ ಜವಾಬ್ದಾರಿ ಹಾಗೂ ಕರ್ತವ್ಯವೂಆಗಿದೆ ಎಂದು ಹೇಳಿದರು.
ವಿ.ಎಂ.ಆಲಗೂರ ಉಪನ್ಯಾಸ ನೀಡಿದರು. ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಸ್ವಾಗತಿಸಿ, ಮತದಾರರ ಪ್ರತಿಜ್ಞಾವಿಧಿ ಬೋಧಿಸಿದರು. ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಚುನಾವಣಾ ಕರ್ತವ್ಯಗಳನ್ನು ನಿರ್ವಹಿಸಿರುವ ಬಿಎಲ್‌ಒಗೆ ಸನ್ಮಾನಿಸಲಾಯಿತು. ಮತದಾರರ ಪಟ್ಟಿಯಲ್ಲಿ ನೋಂದಣಿ ಆಗಿರುವ ಯುವ ಮತದಾರರಿಗೆ ಸಾಂಕೇತಿಕವಾಗಿ ಚುನಾವಣಾ ಗುರುತಿನ ಚೀಟಿ ವಿತರಣೆ ಮಾಡಲಾಯಿತು. ಜಿಲ್ಲಾ ಮಟ್ಟದ ವಿವಿಧ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ವಿಜಯಪುರ ತಹಸೀಲ್ದಾರ್ ಪ್ರಶಾಂತ ಚನಗೊಂಡ, ಕ್ರೀಡಾಧಿಕಾರಿ ರಾಜಶೇಖರ ಧೈವಾಡಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.