ಲೋಕಸಭಾ ಕ್ಷೇತ್ರದ ರಾಜಕೀಯ ನಾಯಕರ ಮತದಾನ

| Published : Apr 27 2024, 01:01 AM IST

ಸಾರಾಂಶ

ಬೈರಮಂಗಲ ಮತಗಟ್ಟೆಯಲ್ಲಿ ಮಾಜಿ ಶಾಸಕ ಎ.ಮಂಜುನಾಥ್ ರವರು ಪತ್ನಿ ಲಕ್ಷ್ಮಿ ಮತ್ತು ಪುತ್ರಿಯರೊಂದಿಗೆ ಅವರೊಂದಿಗೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರೆ, ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಂ.ಲಿಂಗಪ್ಪ ಇಟ್ಟಮಡು ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು.

ಕನ್ನಡಪ್ರಭ ವಾರ್ತೆ ರಾಮನಗರ

ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ನಾಯಕರು ಶುಕ್ರವಾರ ಮತದಾನ ಮಾಡಿದರು.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿರವರು ಪತ್ನಿ ಅನಿತಾ, ಪುತ್ರ ನಿಖಿಲ್ ಅವರೊಂದಿಗೆ ಬೆಳಿಗ್ಗೆ ಮಾಗಡಿ ವಿಧಾನಸಭಾ ಕ್ಷೇತ್ರದ ಕೇತಗಾನಹಳ್ಳಿಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಎಚ್.ಡಿ.ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಅವರು ಕೇತಗಾನಹಳ್ಳಿಯಲ್ಲಿನ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರೆ, ಆನಂತರ ನಿಖಿಲ್ ಕುಮಾರಸ್ವಾಮಿ ಮತದಾನ ಮಾಡಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಪತ್ನಿ ಉಷಾ, ಪುತ್ರಿಯರಾದ ಐಶ್ವರ್ಯ, ಆಭರಣ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರು ಕನಕಪುರ ತಾಲೂಕಿನ ದೊಡ್ಡಆಲಹಳ್ಳಿಯ ಮತಗಟ್ಟೆ, ವಿಧಾನ ಪರಿಷತ್ ಸದಸ್ಯ ಎಸ್.ರವಿ ಮಳಗಾಳು ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು.

ಮಾಗಡಿ ವಿಧಾನಸಭಾ ಕ್ಷೇತ್ರದ ಹುಟ್ಟೂರು ಹುಲಿಕಟ್ಟೆ ಗ್ರಾಮದಲ್ಲಿ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ , ಪತ್ನಿ ರಾಧಾ , ಚಿಕ್ಕಪ್ಪ ನಾರಾಯಣಸ್ವಾಮಿ ಅವರೊಂದಿಗೆ ಆಗಮಿಸಿ ಮತ ಚಲಾಯಿಸಿದರೆ, ತಡವಾಗಿ ಆಗಮಿಸಿ ತಾಯಿ ಶಾರದಮ್ಮ , ಪುತ್ರಿ ರಚನಾ ಜೊತೆಗೆ ಮತಕೇಂದ್ರಕ್ಕೆ ಆಗಮಿಸಿ ಮತ ಚಲಾವಣೆ ಮಾಡಿದರು.

ಬೈರಮಂಗಲ ಮತಗಟ್ಟೆಯಲ್ಲಿ ಮಾಜಿ ಶಾಸಕ ಎ.ಮಂಜುನಾಥ್ ರವರು ಪತ್ನಿ ಲಕ್ಷ್ಮಿ ಮತ್ತು ಪುತ್ರಿಯರೊಂದಿಗೆ ಅವರೊಂದಿಗೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರೆ, ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಂ.ಲಿಂಗಪ್ಪ ಇಟ್ಟಮಡು ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು.

ರಾಮನಗರ ವಿಧಾನ ಸಭಾ ಕ್ಷೇತ್ರದ ಮರಳವಾಡಿಯಲ್ಲಿನ ಮತಗಟ್ಟೆಯಲ್ಲಿ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಮಧ್ಯಾಹ್ನ ತಮ್ಮ ಮತ ಚಲಾಯಿಸಿದ್ದಾರೆ. ಚನ್ನಪಟ್ಟಣ ಕ್ಷೇತ್ರ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ತಮ್ಮ ಸ್ವ ಗ್ರಾಮ ಚಕ್ಕರೆ, ರಾಮನಗರ ಕ್ಷೇತ್ರ ಶಾಸಕ ಇಕ್ಬಾಲ್ ಹುಸೇನ್ ರವರು ಕನಕಪುರ ಕ್ಷೇತ್ರ ವ್ಯಾಪ್ತಿಯ ಹೂಕುಂದ ಮತಗಟ್ಟೆ , ಕೆಪಿಸಿಸಿ ಉಪಾಧ್ಯಕ್ಷ ಸೈಯದ್ ಜಿಯಾವುಲ್ಲಾ ನಗರದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.