ಮತದಾನ ಪ್ರಕ್ರಿಯೆ ದೇಶ ಮುನ್ನಡೆಸುವ ಮಹತ್ಕಾರ್ಯ: ನ್ಯಾಯಾಧೀಶ ರಾಜು ಶೇಡಬಾಳ್ಕರ್

| Published : Jan 26 2024, 01:46 AM IST

ಮತದಾನ ಪ್ರಕ್ರಿಯೆ ದೇಶ ಮುನ್ನಡೆಸುವ ಮಹತ್ಕಾರ್ಯ: ನ್ಯಾಯಾಧೀಶ ರಾಜು ಶೇಡಬಾಳ್ಕರ್
Share this Article
  • FB
  • TW
  • Linkdin
  • Email

ಸಾರಾಂಶ

ಮತದಾನ ರಾಷ್ಟ್ರೀಯ ಪ್ರಕ್ರಿಯೆ. ಭಾರತದ ಪ್ರತಿಯೊಬ್ಬರಿಗೂ ಮತದಾನದ ಹಕ್ಕಿದ್ದು, ಸರಿಯಾದ ನಾಯಕನನ್ನು ಆರಿಸದಿದ್ದರೆ ದೇಶದ ಭವಿಷ್ಯ ಮಸುಕಾಗುತ್ತದೆ. ಹೀಗಾಗಿ ಈ ಕರ್ತವ್ಯದಿಂದ ಯಾರೂ ವಂಚಿತರಾಗಬಾರದು.

ಶಿರಸಿ:

ಮತದಾನ ಪ್ರಕ್ರಿಯೆ ದೇಶ ಮುನ್ನಡೆಸುವ ಮಹತ್ಕಾರ್ಯ. 18 ವರ್ಷ ತುಂಬಿದ ಎಲ್ಲರೂ ತಮ್ಮ ಹೆಸರನ್ನು ಮತದಾರರ ಯಾದಿಯಲ್ಲಿ ಸೇರಿಸಿಕೊಂಡು ಮತದಾನ ಕಾರ್ಯದಲ್ಲಿ ಭಾಗಿಯಾಗಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ರಾಜು ಶೇಡಬಾಳ್ಕರ್ ಹೇಳಿದರು.

ನಗರದ ಮಿನಿ ವಿಧಾನಸೌಧದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಮತದಾನ ರಾಷ್ಟ್ರೀಯ ಪ್ರಕ್ರಿಯೆ. ಭಾರತದ ಪ್ರತಿಯೊಬ್ಬರಿಗೂ ಮತದಾನದ ಹಕ್ಕಿದ್ದು, ಸರಿಯಾದ ನಾಯಕನನ್ನು ಆರಿಸದಿದ್ದರೆ ದೇಶದ ಭವಿಷ್ಯ ಮಸುಕಾಗುತ್ತದೆ. ಹೀಗಾಗಿ ಈ ಕರ್ತವ್ಯದಿಂದ ಯಾರೂ ವಂಚಿತರಾಗಬಾರದು ಎಂದರು.

ವಕೀಲರ ಸಂಘದ ಅಧ್ಯಕ್ಷ ಸಿ.ಎಫ್‌. ಈರೇಶ ಮಾತನಾಡಿ, ದೇಶ ಮುಂದುವರಿದ ರಾಷ್ಟ್ರ ಆಗಬೇಕೆಂದರೆ ಪ್ರತಿಯೊಬ್ಬರೂ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಬೇಕು. ಪ್ರಪಂಚದಲ್ಲಿ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿದ ನಮಗೆ ಪ್ರಜೆಗಳೇ ದೇವರು. ಇಂದು ರಾಜಕೀಯ ಪಕ್ಷಗಳಿಂದ ಮತದಾನ ಪ್ರೋತ್ಸಾಹಿಸುವಲ್ಲಿ ನಿಷ್ಕಾಳಜಿ ವಹಿಸುತ್ತಿರುವುದು ಬೇಸರ. ದೇಶದಲ್ಲಿ ಅಕ್ಷರಸ್ಥರು ಸಂಖ್ಯೆ ಜಾಸ್ತಿ ಇದ್ದರೂ ಶೇ. ೯೭ ಜನಕ್ಕೆ ಕಾನೂನುಗಳ ಅರಿವಿಲ್ಲ. ಮತದಾನ ಪ್ರಕ್ರಿಯೆಯಲ್ಲಿ ಹೆಚ್ಚು ಪಾಲ್ಗೊಳ್ಳುವ ಮೂಲಕ ಯೋಗ್ಯ ನಾಯಕನನ್ನು ಆಯ್ಕೆ ಮಾಡೋಣ ಎಂದು ಹೇಳಿದರು.

ಉಪವಿಭಾಗಾಧಿಕಾರಿ ಅಪರ್ಣಾ ರಮೇಶ ಮಾತನಾಡಿ, ಸ್ವತಂತ್ರ ಸಂಗ್ರಾಮದಲ್ಲಿ ಪಾಲ್ಗೊಂಡವರ ದೊಡ್ಡ ಬೇಡಿಕೆ ದೇಶ ಪ್ರಜಾಸತ್ತಾತ್ಮಕವಾಗಿ, ಎಲ್ಲರಿಗೂ ಮತದಾನದ ಹಕ್ಕು ನೀಡಬೇಕು ಎಂಬುದಾಗಿತ್ತು. ಮತದಾನ ಸಂವಿಧಾನಿಕ ಹೊಣೆ. ಎಲ್ಲರೂ ಹಕ್ಕನ್ನು ಉಪಯೋಗಿಸಿ, ದೇಶದ ಭವಿಷ್ಯ ರೂಪಿಸಲು ಇದು ಅನಿವಾರ್ಯ ಎಂದರು.ತಹಸೀಲ್ದಾರ್ ಶ್ರೀಧರ ಮುಂದಲಮನಿ ಮತದಾನ ವಿಧಿ ಬೋಧಿಸಿದರು. ನ್ಯಾಯಾಧೀಶರಾದ ಕಿರಣ ಕಿಣಿ, ಕಮಲಾಕ್ಷ ಡಿ., ಅಭೀಷೇಕ ಜೋಶಿ ಇತರರಿದ್ದರು.

ಇದೇ ವೇಳೆ ಮತದಾನದ ಕುರಿತಂತೆ ಆಯೋಜಿಸಲಾಗಿದ್ದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕನ್ನಡ ಪ್ರಬಂಧ ವಿಭಾಗದಲ್ಲಿ ತನುಶ್ರೀ ಹೆಗಡೆ, ಸೌಖ್ಯ ಹೆಗಡೆ, ಸ್ಫೂರ್ತಿ ಪೂಜಾರಿ, ಇಂಗ್ಲಿಷ್ ಪ್ರಬಂಧ ಸ್ಪರ್ಧೆಯಲ್ಲಿ ನಿಖಿತಾ ಬನವಾಸಿ, ಮಾನ್ಯ ಹೆಗಡೆ, ಮೇಘನಾ ನಾಯಕ ಬಹುಮಾನ ಪಡೆದರು. ಭಿತ್ತಿ ಚಿತ್ರ ಸ್ಪರ್ಧೆಯಲ್ಲಿ ಸಿಂಚನಾ ಎಂ., ಸಂಜಯ ಹೆಗಡೆ, ಭಾರತಿ ಪಟಗಾರ, ರಸ ಪ್ರಶ್ನೆ ಸ್ಪರ್ಧೆಯಲ್ಲಿ ಡಿ.ಎಸ್. ನಾಗಾನಂದ, ಪ್ರಣವ ಹೆಗಡೆ ಪ್ರಥಮ, ಮಧುರಾ ಭಟ್,ದೀಪಿಕಾ ಮರಾಠಿ ದ್ವಿತೀಯ, ಪ್ರಜ್ಣಾ ಭಟ್, ಪೂರ್ಣ ವೈದ್ಯ ಮೂರನೇ ಸ್ಥಾನ ಪಡೆದರು.