ಸಾರಾಂಶ
ಸವಣೂರು: ಇವತ್ತು ಸಮಾಜಕ್ಕೆ, ದೇಶಕ್ಕೆ ನಾವೇನು ಕೊಡುಗೆ ನೀಡಿದ್ದೇವೆ ಎಂಬುದರ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವ ಶಕ್ತಿಯನ್ನು ಮತದಾನದ ಮೂಲಕ ನಮಗೆ ನೀಡಲಾಗಿದೆ ಎಂದು ಸಂಚಾರಿ ಹಿರಿಯ ದಿವಾಣಿ ನ್ಯಾಯಾಧೀಶರಾದ ಸುನೀಲ ತಳವಾರ ಹೇಳಿದರು. ಭಾರತ ಚುನಾವಣಾ ಆಯೋಗ, ತಾಲೂಕು ಆಡಳಿತ, ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ ಸವಣೂರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಉಪ ವಿಭಾಗಾಧಿಕಾರಿಗಳ ಸಭಾಭವನದಲ್ಲಿ ಶನಿವಾರ ಏರ್ಪಡಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಸಮಾರಂಭ ಉದ್ಘಾಟಿಸಿ, ಯುವ ಮತದಾರರಿಗೆ ಗುರುತಿನ ಚೀಟಿ ವಿತರಿಸಿ ಮಾತನಾಡಿದರು.ರಾಷ್ಟ್ರೀಯ ಮತದಾರರ ದಿನಾಚರಣೆ ಆಚರಿಸುವ ಮೂಲಕ ಪ್ರತಿಜ್ಞಾವಿಧಿಯನ್ನು ಸ್ವೀಕರಿಸುತ್ತಾ ಬಂದಿರುವುದು ಪ್ರತಿ ವರ್ಷ ನಡೆಯುವ ಪ್ರಕ್ರಿಯೆಯಾಗಿದೆ. ತಾಲೂಕು ಕಾನೂನು ಸೇವೆಗಳ ಸಮಿತಿ ವತಿಯಿಂದ ಮತದಾರರಿಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಕೈಗೊಳ್ಳಲಾಗಿದೆ. ಆದರೆ ಇಂದು ಸಮಾಜ ನನಗೇನು ನೀಡಿದೆ ಎಂಬುದಕ್ಕಿಂತ, ಸಮಾಜಕ್ಕೆ ನಾವೇನು ಕೊಡುಗೆ ಕೊಟ್ಟಿದ್ದೇವೆ ಎಂಬುದನ್ನು ಅರಿತುಕೊಳ್ಳಬೇಕು.
ಯುವ ಮತದಾರರಿಗೆ ಮತದಾರರ ಗುರುತಿನ ಚೀಟಿ ವಿತರಿಸುವ ಮೂಲಕ ಮತದಾನದ ಮಹತ್ವದ ಕುರಿತು ಯುವಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಎಲ್ಲರೂ ಮತದಾನದ ಅರಿವನ್ನು ತಿಳಿದುಕೊಂಡು, ಮತದಾನದ ಕುರಿತು ಜಾಗೃತಿ ಹೊಂದುವ ಮೂಲಕ ಒಂದು ಹೆಜ್ಜೆಯನ್ನಿಟ್ಟಲ್ಲಿ ಒಂದು ಸಮಾನತೆಗೆ ಪ್ರಜಾಪಭುತ್ವ ರಾಷ್ಟ್ರ ಕಟ್ಟುವಲ್ಲಿ ನಮ್ಮೆಲ್ಲರ ಪಾತ್ರ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯಪ್ರವೃತ್ತರಾಗೋಣ ಎಂದು ಆಶಿಸುತ್ತ, ಕಂದಾಯ ಇಲಾಖೆ ಸಾಕಷ್ಟು ಚುನಾವಣೆಗಳಲ್ಲಿ ಶ್ರಮವಹಿಸಿ ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಳಿಸುವ ಕಾರ್ಯ ಶ್ಲಾಘನೀಯ ಎಂದರು.ದಿವಾಣಿ ನ್ಯಾಯಾಧೀಶರಾದ ಶ್ರೀನಿವಾಸ ಎಸ್. ಎನ್ ಅವರು ಮಾತನಾಡಿ, 18 ವರ್ಷ ತುಂಬಿದ ಪ್ರತಿಯೊಬ್ಬ ತರುಣ ತರುಣಿಯರು ಮತದಾನದ ಹಕ್ಕನ್ನು ಹೊಂದಿದ್ದಾರೆ. ಆದರೆ, ನ್ಯಾಯಾಲಯದಲ್ಲಿ ಗಮನಿಸಿದಾಗ 35 ವಯಸ್ಸಿನವರಿದ್ದರೂ ಕೂಡ ಮತದಾರರ ಗುರುತಿನ ಚೀಟಿಗಳು ಇಲ್ಲದಿರುವುದು ಕಂಡು ಬಂದಿದೆ. ಕಾರಣ ಕೇಳಿದರೆ ಪ್ರತ್ಯುತ್ತರವಿಲ್ಲ. ಆದ್ದರಿಂದ 18 ವರ್ಷ ತುಂಬಿದ ಪ್ರತಿಯೊಬ್ಬರು ಮತದಾರರ ಗುರುತಿನ ಚೀಟಿಯನ್ನು ಹೊಂದುವುದು ಅವಶ್ಯ. ನೋಟಾ ಮತವನ್ನಾದರೂ ಹಾಕುವ ಮೂಲಕ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸಿ ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ ಮತದಾರರ ಪ್ರತಿಜ್ಞಾವಿಧಿಯನ್ನು ಬೋಧಿಸಿ ನಗರ ಪ್ರದೇಶಗಳಲ್ಲಿ ಮತದಾನ ಪ್ರಮಾಣ ಕ್ಷೀಣಗೊಳ್ಳುತ್ತಿರುವ ಕುರಿತು ಬೇಸರ ವ್ಯಕ್ತಪಡಿಸಿದರು.ನ್ಯಾಯವಾದಿ ಎಸ್.ಬಿ. ಬಿಷ್ಟನಗೌಡ್ರ ಮತದಾರರ ದಿನಾಚರಣೆ ಕುರಿತು ಉಪನ್ಯಾಸ ನೀಡಿದರು.ಈ ಸಂದರ್ಭದಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನಪ್ರಸಾದ ಕಟ್ಟಿಮನಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಎಫ್. ಬಾರ್ಕಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್. ಆರ್. ಹಿರೇಮಠ, ಸಹಾಯಕ ಸಹಕಾರಿ ಅಭಿಯೋಜಕ ಎಫ್. ಎಂ. ಹಾದಿಮನಿ, ಗ್ರೇಡ್-2 ತಹಸೀಲ್ದಾರ್ ಗಣೇಶ ಸವಣೂರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.ಚುನಾವಣೆ ವಿಷಯವಾಗಿ ಪ್ರೌಢಶಾಲಾ ಮಟ್ಟದಲ್ಲಿ ಏರ್ಪಡಿಸಿದ್ದ ವಿವಿಧ ಹಂತದ ಸ್ಪರ್ಧೆಗಳಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳು: ಕನ್ನಡ ಪ್ರಬಂಧ: ಮಾಂತೇಶ ಮರಾಠ ಪ್ರಥಮ, ಪಾರ್ವತಿ ಹಾವೇರಿ ದ್ವಿತೀಯ, ಚೈತ್ರ ದಳವಾಯಿ ತೃತೀಯ. ಇಂಗ್ಲಿಷ್ ಪ್ರಬಂಧ: ಪ್ರತೀಕ್ಷಾ ಕುಂಬಾರ ಪ್ರಥಮ, ಚೈತ್ರ ಬಿಕ್ಕಣ್ಣನವರ ದ್ವಿತೀಯ, ದಾನೇಶ್ವರಿ ಪಾಟೀಲ ತೃತೀಯ. ಭಿತ್ತಿಪತ್ರ: ಕವಿತಾ ಬಂಕಾಪೂರ ಪ್ರಥಮ, ಸಜೀದಾ ನರಗುಂದ ದ್ವಿತೀಯ, ನಿಂಗಮ್ಮ ಪೂಜಾರ ತೃತೀಯ. ರಸಪ್ರಶ್ನೆ: ಲಾವಣ್ಯ ಪಾಟೀಲ ಹಾಗೂ ಭಾಗ್ಯಲಕ್ಷ್ಮಿ ಹಿರೇಮಠ ಪ್ರಥಮ, ಪ್ರೀತಂ ಹುಲಗೋಳ ಹಾಗೂ ಜುನೇದ್ ಬಿಯೋಗಿ ದ್ವಿತೀಯ, ಮಹ್ಮದಖಾಸಿಂ ಕಿಸ್ಮತಗಾರ ತೃತೀಯ ಸ್ಥಾನದೊಂದಿಗೆ ಬಹುಮಾನ ಪಡೆದರು.