ವಚನಗಳು ಮನುಕುಲಕ್ಕೆ ದಾರಿ ದೀಪಗಳಾಗಿವೆ : ಗಾಣಗೇರ

| Published : Apr 05 2024, 01:11 AM IST / Updated: Apr 05 2024, 10:28 AM IST

ಸಾರಾಂಶ

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಹಾವೇರಿ ಜಿಲ್ಲಾ ಹಾಗೂ ತಾಲೂಕು ಕದಳಿ ಮಹಿಳಾ ಘಟಕಗಳ ಆಶ್ರಯದಲ್ಲಿ ವಚನ ಚಿಂತನ ಮಂಥನ ಮತ್ತು ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಸ್ಥಳೀಯ ಶಿವಾಜಿ ನಗರದ ಸ್ವ ಧಾರಾ ಮಹಿಳಾ ವಸತಿ ನಿಲಯದಲ್ಲಿ ಆಯೋಜಿಸಲಾಗಿತ್ತು.

ಹಾವೇರಿ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಹಾವೇರಿ ಜಿಲ್ಲಾ ಹಾಗೂ ತಾಲೂಕು ಕದಳಿ ಮಹಿಳಾ ಘಟಕಗಳ ಆಶ್ರಯದಲ್ಲಿ ವಚನ ಚಿಂತನ ಮಂಥನ ಮತ್ತು ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಸ್ಥಳೀಯ ಶಿವಾಜಿ ನಗರದ ಸ್ವ ಧಾರಾ ಮಹಿಳಾ ವಸತಿ ನಿಲಯದಲ್ಲಿ ಆಯೋಜಿಸಲಾಗಿತ್ತು. 

ಜಿಲ್ಲಾ ಕದಳಿ ವೇದಿಕೆಯ ಅಧ್ಯಕ್ಷ ದಾಕ್ಷಾಯಿಣಿ ಗಾಣಗೇರ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಚನಗಳು ಕಾಲ ಮತ್ತು ಅನುಭವ ಬದಲಾದಂತೆ ಹೊಸ ಹೊಸ ಅರ್ಥ ಹೊಳಹುಗಳನ್ನು ನೀಡುತ್ತವೆ. ಅವು ಸದಾ ಕಾಲ ಮನು ಕುಲಕ್ಕೆ ದಾರಿ ದೀಪಗಳಾಗಿವೆ ಎಂದರು. 

ಮುಖ್ಯ ಅತಿಥಿಯಾಗಿದ್ದ ಇಡಾರಿ ಸಂಸ್ಥೆಯ ಮುಖ್ಯಸ್ಥೆ ಪರಿಮಳಾ ಜೈನ್ ಮಾತನಾಡಿ, ವಚನಕಾರ್ತಿ ಅಕ್ಕಮಹಾದೇವಿ ಲೌಕಿಕದ ಜೊತೆಗೆ ಆಧ್ಯಾತ್ಮವನ್ನು ತನ್ನ ವಚನಗಳ ಮೂಲಕ ಬೋಧಿಸಿ ಹೆಣ್ಣು ಮಕ್ಕಳ ವ್ಯಕ್ತಿತ್ವಕ್ಕೆ ಅಸ್ತಿತ್ವವನ್ನು ಹಾಕಿ ಕೊಟ್ಟವಳು ಎಂದರು. ಹಿರಿಯ ಲೇಖಕಿ ಲೀಲಾವತಿ ಪಾಟೀಲ ವಚನಗಳನ್ನು ಓದುವ, ಅರ್ಥೈಸುವ ಹಾಗೂ ಜೀವನದಲ್ಲಿ ಅವುಗಳನ್ನು ಅಳವಡಿಸಿಕೊಳ್ಳುವ ರೀತಿಯ ಬಗ್ಗೆ ವಚನ ಚಿಂತನ ಮಂಥನದ ಅರ್ಥ ವ್ಯಾಪ್ತಿಯನ್ನು ಉದಾಹರಣೆ ಸಹಿತ ವಿವರಿಸಿದರು. 

ಈ ಸಂದರ್ಭದಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ಹಾವೇರಿ ತಾಲೂಕಾ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷರಾದ ಅಕ್ಕಮಹಾದೇವಿ ನೀರಲಗಿ ಮತ್ತು ಜೈನ ಬ್ರಹ್ಮಚಾರಣಿ ಸಾದ್ವಿ ಜ್ವಾಲಾಮಾಲಿನಿ ಅವರನ್ನು ವೇದಿಕೆಯ ಸದಸ್ಯರು ಸನ್ಮಾನಿಸಿದರು. ಸಮಾರಂಭದಲ್ಲಿ ಅಮೃತಕ್ಕಾ ಶೀಲವಂತರ, ಅಕ್ಕಮಹಾದೇವಿ ಕಬ್ಬಿಣಕಂತಿಮಠ, ಶೈಲಾ ಕೋರಿಶಟ್ಟರ, ಮಮತಾ ಪಾಟೀಲ, ಲಲಿತಕ್ಕಾ ಹೊರಡಿ, ಜ್ಯೋತಿ ಬಶೆಟ್ಟಿಯವರ ಮುಂತಾದವರು ಪಾಲ್ಗೊಂಡಿದ್ದರು.