ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಬಸವಾದಿ ಶಿವಶರಣರು 12ನೇ ಶತಮಾನದಲ್ಲಿ ರಚನೆಯಾಗಿರುವ ವಚನ ಸಾಹಿತ್ಯ ಎಂದೂ ಕ್ಷೀಣಿಸದು ಮತ್ತು ಯಾರಿಂದಲೂ ಅಳಿಸಲಾಗದು. ಏಕೆಂದರೆ ಸರ್ವಕಾಲಕ್ಕೂ ತುಳಿತಕ್ಕೆ ಒಳಗಾದ ಸಮಾಜಕ್ಕೆ ಮಾರ್ಗದರ್ಶನ ಮಾಡುವ ಅಪಾರಜ್ಞಾನ ಇದರಲ್ಲಿದೆ. ವಚನಸಾಹಿತ್ಯ ಮನುಕುಲದ ಉದ್ಧಾರಕ್ಕಾಗಿ ಶರಣರು ನಮಗೆ ಕಟ್ಟಿಕೊಟ್ಟ ಪುಣ್ಯದ ಗಂಟು ಎಂದು ಧಾರವಾಡ ಆಕಾಶವಾಣಿ ಕೇಂದ್ರದ ನಿರ್ದೇಶಕ ಡಾ.ಬಸು ಬೇವಿನಗಿಡದ ಅಭಿಪ್ರಾಯಪಟ್ಟರು.ನಗರದ ಪ್ರಭುದೇವ ಸಭಾಗೃಹದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆ ಹಾಗೂ ನಾಗನೂರು ರುದ್ರಾಕ್ಷಿ ಮಠದ ಸಹಯೋಗದೊಂದಿಗೆ ಶನಿವಾರ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ 12ನೇ ಶತಮಾನದ ಮಹಿಳಾ ವಚನಗಾರ್ತಿಯರು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಸ್ತ್ರೀಯರಿಗೆ ಸ್ವಾತಂತ್ರ್ಯವೇ ಇಲ್ಲದ ಕಾಲದಲ್ಲಿ ವಚನಗಾರ್ತಿಯರು ಧೈರ್ಯದಿಂದ ಸಮಾಜವನ್ನು ಎದುರಿಸಿ ಪುರುಷರಿಗೆ ಸರಿ ಸಮಾನವಾಗಿ ಮುಂದೆ ಬಂದು, ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಿದರು. ಹಣ್ಣಿನೊಳಗೆ ಅಡಗಿರುವ ರುಚಿಯಂತೆ, ಧಾನ್ಯದೊಳಗೆ ಅಡಗಿರುವ ಎಣ್ಣೆಯಂತೆ ತೆರೆಮರೆಯಲ್ಲಿ ಇದ್ದುಕೊಂಡೆ ವಚನಗಾರ್ತಿಯರು ಆಧ್ಯಾತ್ಮಿಕ ಸಾಧನೆ ಮಾಡುತ್ತಾ ಕನ್ನಡ ಭಾಷೆಯ ಸೌಂದರ್ಯವನ್ನು ಹೆಚ್ಚಿಸಿದರು ಎಂದು ಬಣ್ಣಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಗದಗ, ಡಂಬಳ, ಯಡಿಯೂರು ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಡಾ.ತೋಂಟದ ಸಿದ್ದರಾಮ ಸ್ವಾಮೀಜಿ ಮಾತನಾಡಿ, 12ನೇ ಶತಮಾನದಲ್ಲಿ ಅರಸರು ತಮ್ಮ ಅರಸೊತ್ತಿಗೆ ಬಿಟ್ಟು ಕಾಯಕ ಜೀವಿಗಳಾಗಲು ಕಾರಣ ಬಸವಣ್ಣ ನೀಡಿದ ಧಾರ್ಮಿಕ ಸ್ವಾತಂತ್ರ್ಯ. ಈ ಧಾರ್ಮಿಕ ಸ್ವಾತಂತ್ರ್ಯದ ಫಲವಾಗಿಯೇ ವಚನಗಳು ಶರಣರ ಮನದ ಮಾತುಗಳಾದವು. ಸಮಾಜಕ್ಕೆ ದಾರಿ ದೀಪವಾದವು. ಬಸವಣ್ಣ ಈ ನೆಲ ಮೂಲದ ಶ್ರಮ ಸಂಸ್ಕೃತಿ ಪರಿಚಯಿಸಿದ ಪ್ರಪ್ರಥಮ ಸ್ವತಂತ್ರ ವಿಚಾರವಾದಿ. ಅವರು ನೀಡಿದ ಕಾಯಕ, ದಾಸೋಹ ಧರ್ಮದಲ್ಲಿ ದಯೆ ಅಂತಹ ಆದರ್ಶಗಳು ಇಂದಿಗೂ ಸಮಾಜವನ್ನು ಮುನ್ನಡೆಸುತ್ತಿವೆ ಎಂದು ಹೇಳಿದರು.ಹಂದಿಗುಂದ ಸಿದ್ದೇಶ್ವರ ಮಠದ ಶಿವಾನಂದ ಸ್ವಾಮೀಜಿ ಮಾತನಾಡಿ, ಬಸವಣ್ಣ ಎಂದರೆ ಎತ್ತಲ್ಲ, ಕೆಳಗೆ ಬಿದ್ದವರನ್ನು ಮೇಲೆತ್ತಿದ ಪುಣ್ಯಾತ್ಮ. ಅವರ ಜಯಂತಿಯ ಅಂಗವಾಗಿ ಬಸವಣ್ಣನವರನ್ನು ವೈಭವೀಕರಿಸುವುದಕ್ಕಿಂತ ಅವರ ತತ್ವಗಳ ಆಚರಣೆ ಅನುಷ್ಠಾನವಾಗಬೇಕಿದೆ. ಭಾರತದ ಮೊದಲ ಪಾರ್ಲಿಮೆಂಟ್ ಎಂದು ಕರೆಸಿಕೊಳ್ಳುವ ಅನುಭವ ಮಂಟಪದಲ್ಲಿ ಆಚಾರ ವಿಚಾರಗಳು ಪರಸ್ಪರ ವಿಮರ್ಶೆಗೆ ಒಳಪಡುತ್ತಿದ್ದವು. ಯಾರ ಮೇಲೂ ಬಲವಂತವಾಗಿ ವಿಚಾರಗಳನ್ನು ಹೇರುತ್ತಿರಲಿಲ್ಲ. ಆದರೆ ಆಧುನಿಕ ಪಾರ್ಲಿಮೆಂಟ್ ಇಂದು ಪೇಪರ್ ಮೆಂಟಾಗಿದ್ದು, ಸಮಾಜದ ಸಮಸ್ಯೆಗಳಿಗೆ ಇಲ್ಲಿ ಪರಿಹಾರವೇ ಇಲ್ಲದಂತಾಗಿದೆ ಇದು ವಿಷಾದಿಸಿದರು.
ಕಾರ್ಯಕ್ರಮದ ನೇತೃತ್ವವನ್ನು ನಾಗನೂರು ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ವಹಿಸಿದ್ದರು. ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ನಾಡಿನ ಜನತೆ ಶರಣರ ತತ್ವಗಳನ್ನು ತಮ್ಮ ನಿಜ ಜೀವನದಲ್ಲಿ ಅನುಸರಿಸಿಕೊಂಡು ಕಾಯಕ ಜೀವಿಗಳಾಗಲಿ ಎಂಬ ಆಶಯದಿಂದ ಬಸವ ಜಯಂತಿ ಆಚರಿಸಲಾಗುತ್ತಿದೆ. ಸಮಾಜದ ಬಂಧುಗಳು ಇದರ ಸದುಪಯೋಗ ಪಡೆದುಕೊಳ್ಳಲಿ ಎಂದರು.ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾ ಕಾರ್ಯದರ್ಶಿ ಅಶೋಕ ಮಳಗಲಿ ಸ್ವಾಗತಿಸಿದರು. ಮಹಾನಗರ ಕಾರ್ಯದರ್ಶಿ ಸಿ.ಎಂ.ಬೂದಿಹಾಳ ವಂದಿಸಿದರು. ರಾಜಶೇಖರ ಪಾಟೀಲ ನಿರೂಪಿಸಿದರು.---------
ಕೋಟ್ಬಸವಣ್ಣನವರನ್ನು ವೈಭವೀಕರಿಸುವುದಕ್ಕಿಂತ ಅವರ ತತ್ವಗಳ ಆಚರಣೆ ಅನುಷ್ಠಾನವಾಗಬೇಕಿದೆ. ಭಾರತದ ಮೊದಲ ಪಾರ್ಲಿಮೆಂಟ್ ಎಂದು ಕರೆಸಿಕೊಳ್ಳುವ ಅನುಭವ ಮಂಟಪದಲ್ಲಿ ಆಚಾರ ವಿಚಾರಗಳು ಪರಸ್ಪರ ವಿಮರ್ಶೆಗೆ ಒಳಪಡುತ್ತಿದ್ದವು. ಯಾರ ಮೇಲೂ ಬಲವಂತವಾಗಿ ವಿಚಾರಗಳನ್ನು ಹೇರುತ್ತಿರಲಿಲ್ಲ. ಆದರೆ ಆಧುನಿಕ ಪಾರ್ಲಿಮೆಂಟ್ ಇಂದು ಪೇಪರ್ ಮೆಂಟಾಗಿದೆ. ಸಮಾಜದ ಸಮಸ್ಯೆಗಳಿಗೆ ಇಲ್ಲಿ ಪರಿಹಾರವೇ ಇಲ್ಲದಂತಾಗಿದೆ.
ಶಿವಾನಂದ ಸ್ವಾಮೀಜಿ,ಹಂದಿಗುಂದ ಸಿದ್ದೇಶ್ವರ ಮಠ