ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 24ನೇ ವಾರ್ಷಿಕ ಘಟಿಕೋತ್ಸವ ಜು.18 ರಂದು ಬೆಳಗ್ಗೆ 11.30ಕ್ಕೆ ವಿಟಿಯು ಜ್ಞಾನಸಂಗಮ ಆವರಣದ ಎಪಿಜೆ ಅಬ್ದುಲ್ ಕಲಾಂ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ವಿಟಿಯು ಕುಲಪತಿ ಪ್ರೊ.ವಿದ್ಯಾಶಂಕರ ತಿಳಿಸಿದರು.ವಿಟಿಯುನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಅಧ್ಯಕ್ಷತೆ ವಹಿಸುವರು. ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರ ನಿರ್ದೇಶಕ ಪ್ರೊ.ಗೋವಿಂದನ್ ರಂಗರಾಜನ್ ಘಟಿಕೋತ್ಸವ ಭಾಷಣ ಮಾಡುವರು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ ಉಪಸ್ಥಿತರಿರುವರು.
ಚಿಕ್ಕಬಳ್ಳಾಪುರದ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಧೆ ಸಂಸ್ಥಾಪಕ ಸದ್ಗುರು ಶ್ರೀಮಧುಸೂದನ ಸಾಯಿ, ಬೆಂಗಳೂರಿನ ಇಸ್ರೋ ಅಧ್ಯಕ್ಷ ಡಾ.ಎಸ್.ಸೋಮನಾಥ ಮತ್ತು ಬೆಂಗಳೂರಿನ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ವ್ಯವಸ್ಥಾಪಕ ನಿರ್ದೇಶಕ ಹರಿ ಕೆ.ಮರಾರ್ ಅವರಿಗೆ ಡಾಕ್ಟರ್ ಆಫ್ ಸೈನ್ಸ್ ಗೌರವ ಪದವಿ ಪ್ರದಾನ ಮಾಡಲಾಗುವುದು ಎಂದು ವಿವರಿಸಿದರು.ಬೆಳಗಾವಿಯ ಕೆಎಲ್‌ಇ ಡಾ.ಎಂ.ಎಸ್. ಶೇಷಗಿರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿ ಸಾಹಿಲ್ ಮೋಹನ ಸೋಮನಾಚೆ 12 ಚಿನ್ನದ ಪದಕ ಪಡೆದರೆ, ಬೆಂಗಳೂರಿನ ಬೆಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿನಿ ಜಿ.ವಿಷ್ಣುಪ್ರಿಯಾ 10 ಚಿನ್ನದ ಪದಕ, ಬೆಂಗಳೂರಿನ ಎಸ್‌ಜೆಬಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಾದ ರೇಷ್ಮಾ ಜಿ, ಮೋಹನ ಕುಮಾರ ಎಲ್., ಮತ್ತು ಬಳ್ಳಾರಿಯ ಬಳ್ಳಾರಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಮ್ಯಾನೇಜ್‌ಮೆಂಟ್‌ನ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿದ್ಯಾರ್ಥಿನಿ ಹೃತಿಕಾಜಿಗೆ ತಲಾ 7 ಚಿನ್ನದ ಪದಕ ಲಭಿಸಿವೆ.340 ಸಂಶೋಧನಾ ಪದವಿ ಪ್ರದಾನ:
ಘಟಿಕೋತ್ಸವದಲ್ಲಿ ಬಿಇ,ಬಿಟೆಕ್ .(ಬಿಇ.- 35697+15387(ಸ್ವಾಯತ್ತ) + ಬಿಟೆಕ್. 45), ಬಿ.ಪ್ಲಾನ್ .-08, ಬಿ. ಆರ್ಚ್.- (969 + ಸ್ವಾಯತ್ತ 169) ಹಾಗೂ ಸಂಶೋಧನಾ ಪದವಿಗಳಾದ 339 ಪಿಎಚ್‌ಡಿ., 1 ಎಂಎಸ್ಸಿ ಒಟ್ಟು 340 ಸಂಶೋಧನಾ ಪದವಿ ಪ್ರದಾನ ಮಾಡಲಾಗುವುದು. ವಿಟಿಯು ಪರೀಕ್ಷೆ ನಡೆಸಿದ 3 ಗಂಟೆಯಲ್ಲೇ ಫಲಿತಾಂಶ ಪ್ರಕಟಿಸಿದ ದೇಶದ ಏಕೈಕ ವಿಶ್ವವಿದ್ಯಾಲಯವಾಗಿದೆ. ಅಮೆರಿಕದ 50 ಐಟಿ ಕಂಪನಿಗಳನ್ನು ಕ್ಯಾಂಪಸ್‌ಗೆ ಕರೆತರುವ ಪ್ರಯತ್ನ ನಡೆದಿದೆ. ಇದರಿಂದಾಗಿ ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕುಲಸಚಿವ ಪ್ರೊ.ಬಿ.ಇ. ರಂಗಸ್ವಾಮಿ ಮತ್ತು ಟಿ.ಎನ್. ಶ್ರೀನಿವಾಸ ಉಪಸ್ಥಿತರಿದ್ದರು.