ನಾಡಿದ್ದು ವಿಟಿಯು ಘಟಿಕೋತ್ಸವ

| Published : Jul 02 2025, 12:24 AM IST

ಸಾರಾಂಶ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 25ನೇ ವಾರ್ಷಿಕ ಘಟಿಕೋತ್ಸವ-ಭಾಗ-1 ವಿಟಿಯು ಜ್ಞಾನಸಂಗಮದ ಆವರಣದಲ್ಲಿರುವ ಡಾ.ಎ.ಪಿ.ಜೆ.ಅಬ್ದುಲ್‌ ಕಲಾಂ ಸಭಾಂಗಣದಲ್ಲಿ ಜು.4 ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ ಎಂದು ವಿಟಿಯು ಕುಲಪತಿ ಪ್ರೊ.ವಿದ್ಯಾಶಂಕರ.ಎಸ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 25ನೇ ವಾರ್ಷಿಕ ಘಟಿಕೋತ್ಸವ-ಭಾಗ-1 ವಿಟಿಯು ಜ್ಞಾನಸಂಗಮದ ಆವರಣದಲ್ಲಿರುವ ಡಾ.ಎ.ಪಿ.ಜೆ.ಅಬ್ದುಲ್‌ ಕಲಾಂ ಸಭಾಂಗಣದಲ್ಲಿ ಜು.4 ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ ಎಂದು ವಿಟಿಯು ಕುಲಪತಿ ಪ್ರೊ.ವಿದ್ಯಾಶಂಕರ.ಎಸ್‌ ಹೇಳಿದರು.

ನಗರದ ವಿಟಿಯು ದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲ ಥಾವರ ಚಂದ ಗೆಹ್ಲೋಟ್ ಅಧ್ಯಕ್ಷತೆ ವಹಿಸುವರು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಗೌರವ ಅತಿಥಿಯಾಗಿದ್ದಾರೆ. ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ, ಪದ್ಮಶ್ರೀ ಪುರಸ್ಕೃತ ಪ್ರೊ.ಅಜಯಕುಮಾರ ಸೂದ್‌ ಘಟಿಕೋತ್ಸವ ಭಾಷಣ ಮಾಡುವರು ಎಂದರು.ಮೂವರು ಗಣ್ಯರಿಗೆ ಗೌಡಾ ಪದವಿ:

ವಿಜ್ಞಾನ, ತಾಂತ್ರಿಕ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿ ಸಾಧನೆ ಮಾಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ( ಇಸ್ರೋ) ಮತ್ತು ಬಾಹ್ಯಾಕಾಶ ಇಲಾಖೆ ಕಾರ್ಯದರ್ಶಿ ಡಾ.ವಿ.ನಾರಾಯಣನ್‌, ಎಕ್ಸೆಲ್‌ ಇಂಡಿಯಾ ಸಂಸ್ಥಾಪಕ, ಪದ್ಮಶ್ರೀ ಪುರಸ್ಕೃತ ಪ್ರಶಾಂತ ಪ್ರಕಾಶ ಮತ್ತು ಬೆಂಗಳೂರು ಎಟ್ರಿಯ ವಿಶ್ವವಿದ್ಯಾಲಯ ಕುಲಾಧಿಪತಿ ಸಿ.ಎಸ್‌.ಸುಂದರ ರಾಜು ಅವರಿಗೆ ಡಾಕ್ಟರ್‌ ಆಫ್‌ಸೈನ್‌ ಗೌರವ ಡಾಕ್ಟರೇಟ್‌ ಪದವಿ ಪ್ರದಾನ ಮಾಡಲಾಗುವುದು ಎಂದರು.ಘಟಿಕೋತ್ಸವದಲ್ಲಿ 60,052 ವಿದ್ಯಾರ್ಥಿಗಳಿಗೆ ಸ್ನಾತಕ ಪದವಿ ಪ್ರದಾನ ಮಾಡಲಾಗುವುದು. ಘಟಿಕೋತ್ಸವದಲ್ಲಿ ಬಿಇ-58861, ಬಿಟೆಕ್‌- 117, ಬಿ.ಪ್ಲಾನ್‌- 10 ಬಿ.ಆರ್ಚ್- 1040, ಬಿಎಸ್‌ಸಿ- 24 ಹೀಗೆ ಒಟ್ಟು 60,052 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. ಸಂಶೋಧನಾ ಪದವಿಗಳಾದ ಪಿಎಚ್‌ಡಿ-262 ಹಾಗೂ ಇಂಟಿಗ್ರೇಟೆಡ್‌ ಡುಯಲ್‌ ಡಿಗ್ರಿ-2 ಪದವಿಯನ್ನು ನೀಡಲಾಗುವುದು.ನರ್ಮತಾಗೆ 13 ಚಿನ್ನದ ಪದಕ:

ಬೆಂಗಳೂರಿನ ಜೆಪಿ ನಗರದ ಆಕ್ಸಪರ್ಡ್ ಕಾಲೇಜ್ ಆಫ್‌ ಎಂಜಿನಿಯರಿಂಗ್‌ ವಿದ್ಯಾರ್ಥಿನಿ ನರ್ಮತಾ ಪ್ರಭು ಅವರಿಗೆ 13 ಚಿನ್ನದ ಪದಕ ದೊರೆತಿವೆ. ಬೆಂಗಳೂರಿನ ಆರ್‌.ವಿ.ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಆ್ಯಂಡ್ ಮ್ಯಾನೆಜ್ಮೆಂಟ್ ವಿದ್ಯಾರ್ಥಿನಿ ನವ್ಯಶ್ರೀ ಗಣಪಶೆಟ್ಟಿ ಅವರಿಗೆ 11 ಚಿನ್ನದ ಪಡಕ ದೊರೆತಿವೆ. ಬೆಂಗಳೂರಿನ ಬೆಂಗಳೂರ ಇನ್‌ಸ್ಟಿಟ್ಯೂಟ್ ಆಫ್‌ ಟೆಕ್ನಾಲಜಿ ವಿದ್ಯಾರ್ಥಿ ಕಾರ್ತಿಕ ಎಲ್‌ ಮತ್ತು ಮೈಸೂರಿನ ಜಿಎಸ್‌ಎಸ್‌ಎಸ್‌ ಇನ್‌ಸ್ಟಿಟ್ಯೂಟ್ ಆಫ್‌ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಫಾರ್ ವುಮೇನ್‌ ವಿದ್ಯಾರ್ಥಿನಿ ಕವನ ಎ ಅವರಿಗೆ ತಲಾ 7 ಚಿನ್ನದ ಪದಕ ಪಡೆದಿದ್ದಾರೆ. ಬೆಂಗಳೂರಿನ ದಯಾನಂದ ಸಾಗರ ಅಕಾಡೆಮಿ ಆಫ್‌ ಟೆಕ್ನಾಲಜಿ ಆ್ಯಂಡ್‌ ಮ್ಯಾಮೆಜ್ಮೆಂಟ್ ವಿದ್ಯಾರ್ಥಿನಿ ಮೋಹಿನಿ ವಿ ಅವರಿಗೆ 6 ಚಿನ್ನದ ಪದಕ ಪಡೆದಿದ್ದಾರೆ ಎಂದು ತಿಳಿಸಿದರು.ಪಠ್ಯಕ್ರಮ ಪರಿಷ್ಕರಣೆಗೆ ಕ್ರಮ:

2025–26ನೇ ಸಾಲಿನಿಂದಲೇ ಸ್ನಾತಕ ಕೋರ್ಸ್‌ಗಳ ಪಠ್ಯಕ್ರಮ ಪರಿಷ್ಕರಿಸಲಾಗುವುದು. ಪ್ರಸ್ತುತ ದಿನಗಳಲ್ಲಿ ಕೈಗಾರಿಕೆಗಳು ಬಯಸುವ, ಕೌಶಲ ಆಧಾರಿತವಾದ ಈ ಪಠ್ಯಕ್ರಮ ದೇಶದಲ್ಲೇ ಮಾದರಿಯಾಗಿದೆ. ಕೈಗಾರಿಕೋದ್ಯಮಿಗಳು ಸೇರಿ ವಿವಿಧ ಕ್ಷೇತ್ರಗಳ ಜತೆಗೆ ಚರ್ಚಿಸಿ ಇದನ್ನು ರೂಪಿಸಲಾಗಿದೆ. ಈ ಪಠ್ಯಕ್ರಮ ಬೋಧನೆ ಮಾಡುವವರಿಗೂ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.ಸಂಶೋಧನೆ ಮತ್ತು ನಾವೀನ್ಯತೆಗೆ ಒತ್ತು ನೀಡಲಾಗಿದೆ. ಹೊಸ ಬೋಧನಾ ಆಯಾಮಗಳ ಬಗಗೆ ಚಿಂತನೆ ನಡೆಸಲಾಗುತ್ತಿದೆ. ಉತ್ತಮ ಗುಣಮಟ್ಟದ ವಿದೇಶಿ ಉನ್ನತ ಶಿಕ್ಷಣ ಸಂಸ್ಥೆಗಳೊಂದಿಗೆ ಹಾಗೂ ಔದ್ಯೋಗಿಕ ರಂಗದ ದಿಗ್ಗಜರೊಂದಿಗೆ ಇಂಟರ್ನ್‌ ಶಿಪ್‌, ತರಬೇತಿ ರೀತಿಯಲ್ಲಿ ಅಧ್ಯಾಪಕರು, ವಿದ್ಯಾರ್ಥಿ ವಿನಿಮಯದಂತೆಹ ಅನೇಕ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.ವಿದೇಶಿ ವಿಶ್ವವಿದ್ಯಾಲಯಗಳಲ್ಲಿ, ಉನ್ನತ ವ್ಯಾಸಂಗಕ್ಕಾಗಿ ಪ್ರಯತ್ನ ಪಡೆಯುವ ನಮ್ಮ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆಯಲ್ಲಿ ಯಾವುದೇ ವಿಳಂಬ, ಅಡೆತಡೆ, ತೊಂದರೆ ಎದುರಾಗದಂತೆ ವಿಟಿಯು ಅಂತಾರಾಷ್ಟ್ರೀಯ ಶೈಕ್ಷಣಿಕ ಕ್ಯಾಲೆಂಡರ್‌ನೊಂದಿಗೆ ವಿಟಿಯು ಶೈಕ್ಷಣಿಕ ಕ್ಯಾಲೆಂಡರ್‌ನ್ನು ಸರಿ ಹೊಂದುವಂತೆ ಮಾಡಿ ದಾಖಲೆ ಸಮಯದಲ್ಲಿ ಪರೀಕ್ಷಾ ಫಲಿತಾಂಶವನ್ನು ನೀಡುತ್ತಿದ್ದೇವೆ. ಈ ಮೂಲಕ ಉನ್ನತ ಅಧ್ಯಯನಕ್ಕಾಗಿ ವಿದೇಶಕ್ಕೆ, ಪ್ರತಿಷ್ಠಿತ ಸಂಸ್ಥೆಗಳಿಗೆ ಹೋಗಲು ಬಯಸುವ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದರು.

ಪದವೀಧರರಿಗೆ ತ್ವರಿತವಾಗಿ ಪ್ರಮಾಣ ಪತ್ರ ನೀಡಲಾಗುತ್ತಿದೆ. ಕ್ಯಾಂಪಸ್‌ ಆಯ್ಕೆ ಮೂಲಕ ಉದ್ಯೋಗ ಸೇರುವ ಪದವಿಧರಿಗೆ ಹಲವಾರು ಕಂಪನಿಗಳು ಮತ್ತು ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ವಲಯದ ಸಂಸ್ಥೆಗಳು ಉದ್ಯೋಗಕ್ಕೆ ಸೇರಿಕೊಳ್ಳುವ ಸಮಯದಲ್ಲೇ ಪದವಿ ಪ್ರಮಾಣ ಪತ್ರಗಳನ್ನು ಸಲ್ಲಿಸಲು ಸೂಚಿಸಿದೆ. ಇದರಿಂದಾಗಿ ವಿಶ್ವವಿದ್ಯಾಲಯವು ಒಂದು ಶೈಕ್ಷಣಿಕ ವರ್ಷದಲ್ಲಿ ಎರಡು ಘಟಿಕೋತ್ಸವಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕಳೆದೆರಡು ಘಟಿಕೋತ್ಸವಗಳಿಂದ ಸ್ನಾತಕ ಪದವಿ ಪ್ರಧಾನಕ್ಕೆ ಭಾಗ ಒಂದು ಹಾಗೂ ಸ್ನಾತಕೋತ್ತರ ಪದವಿಗಳಿಗೆ ಭಾಗ ಎರಡು ಒಟ್ಟು ಒಂದು ಶೈಕ್ಷಣಿಕ ವರ್ಷದಲ್ಲಿ ಎರಡು ಘಟಿಕೋತ್ಸವಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ವಿಟಿಯು ಮೌಲ್ಯಮಾಪನ ಕುಲಸಚಿವ ಪ್ರೊ.ಟಿ.ಎನ್‌.ಶ್ರೀನಿವಾಸ ಉಪಸ್ಥಿತರಿದ್ದರು.