ವಿವಿ ಸಾಗರ ಜಲಾಶಯ ನಾಲ್ಕನೇ ಬಾರಿ ಕೋಡಿ

| Published : Oct 20 2025, 01:02 AM IST

ಸಾರಾಂಶ

ಹಿರಿಯೂರು ತಾಲೂಕಿನ ವಿವಿ ಸಾಗರ ಜಲಾಶಯ ನಾಲ್ಕನೇ ಬಾರಿ ಕೋಡಿ ಬಿದ್ದಿದ್ದು ಜಿಲ್ಲೆಯ ಜನರ ಹರ್ಷಕ್ಕೆ ಕಾರಣವಾಗಿದೆ.

ರಮೇಶ್ ಬಿದರಕೆರೆ

ಕನ್ನಡಪ್ರಭ ವಾರ್ತೆ ಹಿರಿಯೂರು

ಜಿಲ್ಲೆಯ ಜನರಿಗೆ ಮತ್ತೊಂದು ಅವಿಸ್ಮರಣೀಯ ಕ್ಷಣ ಕಣ್ಣೆದುರು ನಿಂತಿದೆ. ಒಂದೇ ವರ್ಷದಲ್ಲಿ ಎರಡನೇ ಬಾರಿ ಕೋಡಿ ಬೀಳುವ ಮೂಲಕ ತಾಲೂಕಿನ ವಿವಿ ಸಾಗರ ಜಲಾಶಯ ನೂರು ವರ್ಷದಲ್ಲಿ ಭಾನುವಾರ ನಾಲ್ಕನೇ ಬಾರಿ ಕೋಡಿ ಹರಿದಿದೆ.

ಭಾನುವಾರದ ಹೊತ್ತಿಗೆ ಭರ್ತಿ 130 ಅಡಿ ತಲುಪಿದ ಜಲಾಶಯದ ಕೋಡಿಯಲ್ಲಿ ತೆಳ್ಳಗೆ ನೀರು ಹರಿದು ಹೊರ ಬರುತ್ತಿದೆ.

1933ರಲ್ಲಿ ಮೊದಲ ಬಾರಿಗೆ ಕೋಡಿ ಬಿದ್ದಿದ ಜಲಾಶಯ 89 ವರ್ಷಗಳ ನಂತರ 2022ರಲ್ಲಿ ಎರಡನೇ ಬಾರಿ ಕೋಡಿ ಬಿದ್ದು ಮೈದುಂಬಿ ಹರಿದಿತ್ತು. 2025 ಆರಂಭದಲ್ಲೇ ಮೂರನೇ ಬಾರಿಗೆ 130 ಅಡಿ ನೀರು ಸಂಗ್ರಹವಾಗುವ ಮೂಲಕ ಮೂರನೇ ಬಾರಿ ಕೋಡಿ ಬಿದ್ದಿತ್ತು. ಇದೀಗ ಮತ್ತೊಮ್ಮೆ ಜಲಾಶಯ ಭರ್ತಿಯಾಗಿದ್ದು ಜಿಲ್ಲೆಯ ರೈತರಲ್ಲಿ ಸಂತಸ ಮೂಡಿಸಿದೆ. ಕಳೆದ ಜನವರಿಯಲ್ಲಿ ಮೂರನೇ ಬಾರಿ ಕೋಡಿ ಬಿದ್ದಾಗ ಕೇವಲ 6 ತಿಂಗಳಲ್ಲಿ ಸುಮಾರು 17 ಅಡಿಯಷ್ಟು ನೀರು ಸಂಗ್ರಹವಾಗಿತ್ತು. ಆನಂತರ ಅಚ್ಚುಕಟ್ಟು ಪ್ರದೇಶಕ್ಕೆ ನೀರು, ಜಿಲ್ಲೆಯ ಹಲವು ತಾಲೂಕುಗಳಿಗೆ ಕುಡಿಯುವ ನೀರು ಎಂದು ಒಂದಷ್ಟು ಅಡಿ ನೀರು ತಗ್ಗಿತ್ತು. ಈಗ ಮತ್ತೆ ಜಲಾಶಯ ತುಂಬಿದ್ದು ಜಿಲ್ಲೆಯ ಜನರ ನೀರಿನ ಬವಣೆ ನೀಗಿಸಲಿದೆ.

ಬರಗಾಲದ ಪ್ರದೇಶ ಎಂದೇ ಗುರುತಿಸಿಕೊಂಡಿರುವ ಈ ಭಾಗಕ್ಕೆ ವಿವಿ ಸಾಗರ ಜಲಾಶಯವೇ ಆಧಾರಸ್ಥoಭವಾಗಿದೆ. ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು ತಾಲೂಕುಗಳ ಜನರ ಕುಡಿಯುವ ನೀರಿನ ದಾಹ ಹಿಂಗಿಸುವ ಜಲಾಶಯವು 12,135 ಹೆಕ್ಟರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುತ್ತದೆ. ಜನ ಜಾನುವಾರುಗಳಿಗೆ ಕುಡಿಯುವ ನೀರಿಗೂ ತತ್ವಾರ ಬಂದಂತಹ ಸ್ಥಿತಿಯಲ್ಲಿ ಮೈಸೂರು ಮಹಾರಾಜರು ತಾಲೂಕಿನ ಮಾರಿಕಣಿವೆ ಬಳಿ 1907 ರಲ್ಲಿ ಈ ಜಲಾಶಯ ನಿರ್ಮಿಸಿದ್ದರು.

ಜಲಾಶಯ ನಿರ್ಮಾಣದ ಕಾಲದಲ್ಲಿ ಸಂಪನ್ಮೂಲದ ಕೊರತೆ ಉಂಟಾಗಿದ್ದರಿಂದ ಮಹಾರಾಣಿಯವರ ಒಡವೆ ಅಡವಿಟ್ಟು ಹಣ ಹೊಂದಿಸಿ ಜಲಾಶಯ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗಿತ್ತು ಎನ್ನಲಾಗಿದೆ. ಮೈಸೂರು ಅರಸರ ದೂರದೃಷ್ಟಿಯ ಆಲೋಚನೆಯಿಂದ ನೂರಾರು ವರ್ಷಗಳಿಂದ ಈ ಭಾಗದ ಜನ ಜಾನುವಾರುಗಳ ಕುಡಿಯುವ ನೀರಿನ ದಾಹ ನೀಗಿ ಸಾವಿರಾರು ಎಕರೆ ಭೂಮಿ ನೀರಾವರಿ ಸೌಲಭ್ಯ ಪಡೆದಿದೆ. ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದ್ದರೂ ಸಹ ನೀರುಣಿಸುತ್ತಲೇ ಇರುವ ಜಲಾಶಯವು 129 ಕಿಮೀ ಉದ್ದದ ಕಾಲುವೆ ಹೊಂದಿದೆ. ಜಲಾಶಯ ನಿರ್ಮಾಣವಾಗಿ ಶತಮಾನ ಕಳೆದರೂ ಸಹ ಇಂದಿಗೂ ಗಟ್ಟಿ ಮುಟ್ಟಾಗಿದ್ದು ಇದರ ನಿರ್ಮಾಣಕ್ಕೆ ಕೇವಲ ಕಲ್ಲು ಮತ್ತು ಗಾರೆಯನ್ನು ಮಾತ್ರ ಬಳಸಲಾಗಿದೆ ಎಂಬುದು ಮತ್ತೊಂದು ವಿಶೇಷ. ಜಲಾಶಯ ನಿರ್ಮಾಣವಾಗಿ 26 ವರ್ಷಗಳ ನಂತರ ಅಂದರೆ 1933 ರಲ್ಲಿ ಮೊದಲ ಬಾರಿಗೆ ಕೋಡಿ ಬಿದ್ದಿತ್ತು.ಆನಂತರ 89 ವರ್ಷದ ನಂತರ 2022 ರಲ್ಲಿ ಎರಡನೇ ಬಾರಿ,2025 ರ ಜನವರಿಯಲ್ಲಿ ಮೂರನೇ ಬಾರಿ ಹಾಗೂ ಇದೀಗ 8 ತಿಂಗಳ ನಂತರ ನಾಲ್ಕನೇ ಬಾರಿ ಕೋಡಿ ಹರಿದಿದೆ.30 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದ ಕಾಮಗಾರಿಯನ್ನು 1897 ರಲ್ಲಿ ಆರಂಭಿಸಲಾಗಿತ್ತು.ಸತತ ಹತ್ತು ವರ್ಷಗಳಲ್ಲಿ ಆ ಕಾಲಕ್ಕೆ 45 ಲಕ್ಷ ವೆಚ್ಚದಲ್ಲಿ ಜಲಾಶಯ ಕಾಮಗಾರಿ ಮುಗಿಸಲಾಗಿತ್ತು. ಒಟ್ಟು 142 ಅಡಿ ಎತ್ತರದ ಜಲಾಶಯ 405.50 ಮೀ ಉದ್ದವಿದೆ. ತಾಲೂಕು ಕೇಂದ್ರದಿಂದ 25 ಕಿಮೀ ದೂರವಿರುವ ಜಲಾಶಯವು ದಿನೇ ದಿನೇ ಪ್ರವಾಸಿಗರ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಲೇ ಇದೆ.

(ಬಾಕ್ಸ್ )ವಾಣಿವಿಲಾಸ ಸಾಗರ ಜಲಾಶಯಕ್ಕೆ ಭದ್ರಾ ಮೇಲ್ದoಡೆ ಯೋಜನೆಯಿಂದ ಹರಿಸಲಾದ ನೀರಿನ ವಿವರ : 2019 - 20 ನೇ ಸಾಲಿನಲ್ಲಿ 3.44 ಟಿಎಂಸಿ,2020-21ನೇ ಸಾಲಿನಲ್ಲಿ 6.61 ಟಿಎಂಸಿ, 2021-22 ನೇ ಸಾಲಿನಲ್ಲಿ 0.605 ಟಿಎಂಸಿ ಮತ್ತು 6.80 ಟಿಎಂಸಿ, 2023-24 ನೇ ಸಾಲಿನಲ್ಲಿ 0.24 ಟಿಎಂಸಿ, 2024-25 ನೇ ಸಾಲಿನಲ್ಲಿ 6.82 ಟಿಎಂಸಿ ನೀರು ಹರಿದು ಬಂದಿದ್ದು ಒಟ್ಟು 24.515 ಟಿಎಂಸಿ ನೀರು ಜಲಾಶಯ ಸೇರಿದೆ.