ಹೂವಿನಹಡಗಲಿ: ಕನ್ನಡವೇ ಕನ್ನಡಿಗರ ಉಸಿರು; ಕರ್ನಾಟಕದ ಏಕೀಕರಣವೇ ಕನ್ನಡಿಗರ ಜೀವಾಳ ಎಂಬ ಕನ್ನಡ ಡಿಂಡಿಮವನ್ನು ನಾಡಿನ ಉದ್ದಗಲಕ್ಕೆ ಸಾರಿದ ವ್ಯಾಕರಣ ತೀರ್ಥ ಚಂದ್ರಶೇಖರ ಶಾಸ್ತ್ರಿ ಏಕೀಕರಣದ ರೂವಾರಿಯಾಗಿದ್ದರು ಎಂದು ಸಾಹಿತಿ ಡಾ.ಪಿ.ಎಂ. ಅನಿಲಕುಮಾರ ಹೇಳಿದರು.

ಇಲ್ಲಿನ ಕಸಾಪ ತಾಲೂಕು ಘಟಕ, ಇಟ್ಟಿಗಿ ಹೋಬಳಿ ಘಟಕದಿಂದ ಇಟ್ಟಿಗಿ ಗ್ರಾಮದ ಬಳಿಗಾರ ಪಾರ್ವತಮ್ಮ ಓಮಣ್ಣ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಚರಂತಪ್ಪಯ್ಯ ಸ್ವಾಮೀಜಿ ಸ್ಮರಣಾರ್ಥ ದತ್ತಿ, ವ್ಯಾಕರಣ ತೀರ್ಥ ಚಂದ್ರಶೇಖರ ಶಾಸ್ತ್ರಿ ಸ್ಮರಣಾರ್ಥ ದತ್ತಿ, ತೆಗ್ಗಿನಮಠದ ವೀರಮ್ಮ ಶಿವಶಂಕರಯ್ಯ ಸ್ಮಾರಕ ದತ್ತಿ, ಮುಂಡವಾಡ ಕಸ್ತೂರಿ ಚನ್ನಪ್ಪ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ವ್ಯಾಕರಣ ತೀರ್ಥ ಚಂದ್ರಶೇಖರ ಶಾಸ್ತ್ರಿಗಳ ಬದುಕು-ಬರಹ ವಿಷಯ ಕುರಿತು ಮಾತನಾಡಿದರು.

ಶಾಸ್ತ್ರಿಗಳು ನಾಡು- ನುಡಿಯ ಬಗ್ಗೆ ಅಭಿಮಾನ ತಳೆದು ಏಕೀಕರಣದ ಮಂತ್ರ ಜಪಿಸುತ್ತ, ನಾಡಿನ ಉದ್ದಗಲಕ್ಕೂ ಸಂಚರಿಸಿದ ಮಹಾನುಭವಿಗಳಾಗಿದ್ದಾರೆ. 105 ವರ್ಷಗಳ ಕಾಲ ಜೀವನ ನಡೆಸಿದ ಶಾಸ್ತ್ರಿ, ಬಾಲ್ಯದಲ್ಲಿ ಬಡತನ, ಹಲವು ಅನಾನುಕೂಲಗಳ ಮಧ್ಯೆ ಕಾಶಿಯ ಜಂಗಮವಾಡಿ ಮಠದಲ್ಲಿ ಆಶ್ರಯ ಪಡೆದು, ಅಭ್ಯಾಸ ಮಾಡಿ ಸಂಸ್ಕೃತದಲ್ಲಿ ವ್ಯಾಕರಣ ತೀರ್ಥ ಪದವಿ ಪಡೆದಿದ್ದರು ಎಂದರು.

ಯಾದಗಿರಿಯಲ್ಲಿ ಸಂಸ್ಕೃತ ಶಾಲಾ ಕಾಲೇಜು ಆರಂಭಿಸಿ ಅಧ್ಯಾಪನ ಮಾಡಿದರೂ, ಅವರ ಪ್ರೀತಿ ಎಂದಿಗೂ ‌ ಕನ್ನಡದ ಮೇಲೆ ಇದೆ. ಅವರ ಕನ್ನಡದ ಮೇಲಿನ ಬದ್ಧತೆ, ನಾಡಿನ ಏಕೀಕರಣ ಕುರಿತ ಅದಮ್ಯ ಹೋರಾಟ ಮನೋಭಾವ ಗುರುತಿಸಿ ಅವರನ್ನು ಏಕೀಕರಣದ ಶಾಸ್ತ್ರಿಗಳೆಂದು ಜನ ಕರೆದರು ಎಂದು ವಿವರಿಸಿದರು.

"ಬಸವ ತತ್ವ ರತ್ನಾಕರ " ಇವರು ರಚಿಸಿದ ಮಹತ್ವದ ಕೃತಿಯಾಗಿದೆ. 1940ರಲ್ಲಿ ಧಾರವಾಡದಲ್ಲಿ ಜರುಗಿದ 25ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಬದುಕು-ಬರಹ ಅನುಕರಣೀಯವೆಂದರು.


ಇಂತಹ ಬಹುದೊಡ್ಡ ವಿದ್ವಾಂಸರು ನಮ್ಮ ತಾಲೂಕಿನವರೆಂಬುದು ನಮಗೆ ಹೆಮ್ಮೆಯ ಸಂಗತಿ. ಇವರ ಬದುಕು- ಬರಹದ ಕುರಿತು ತಮ್ಮ ಬಸವಳಿಯದ ಬದುಕು ಗ್ರಂಥದಲ್ಲಿ ಹಾಗೂ ಎಂ.ಎಂ. ಶಿವಪ್ರಕಾಶರ ವ್ಯಾಕರಣ ತೀರ್ಥ ಚಂದ್ರಶೇಖರ ಶಾಸ್ತ್ರಿ ಕೃತಿಯಲ್ಲಿ ಹೆಚ್ಚಿನ ವಿವರಗಳನ್ನು ದಾಖಲಿಸಿದ್ದು, ಆಸಕ್ತರು ಪರಾಮರ್ಶಿಸಲು ತಿಳಿಸಿದರು. ಇಂತಹ ಅಪರೂಪದ ವಿದ್ವಾಂಸರ ನಿತ್ಯ ಸ್ಮರಣೆಗಾಗಿ ಟಿ.ವೀರೇಂದ್ರ ಪಾಟೀಲರ ನೇತೃತ್ವದ ಕಸಾಪ ತಾಲೂಕು ಘಟಕವು ಪುರಸಭೆಯ ಅನುಮೋದನೆಯೊಂದಿಗೆ ಹೂವಿನಹಡಗಲಿ ಪಟ್ಟಣದ ಪ್ರಮುಖ ರಸ್ತೆಗೆ ಇವರ ಹೆಸರನ್ನು ನಾಮಕರಣ ಮಾಡಿ, ನಾಮಫಲಕ ಅನಾವರಣಗೊಳಿಸಿ ಇವರ ಸೇವೆ ಸ್ಮರಣೀಯವಾಗಿಸಿದೆ ಎಂದರು.

ನಿವೃತ್ತ ಉಪಪ್ರಾಚಾರ್ಯ ಕೆ.ಎನ್. ಚಂದ್ರಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಸಂಗೀತ ಶಿಕ್ಷಕ ಬಿ.ಸೋಮಶೇಖರ ಗವಾಯಿ ನಾಡ-ನುಡಿಯ ಮಹತ್ವ ತಿಳಿಸಿ, ಸಂಗೀತ ಕಾರ್ಯಕ್ರಮ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಪ್ರಭಾರಿ ಮುಖ್ಯಗುರು ಡಿ.ಕರಿಬಸವನಗೌಡ, ಶಿಕ್ಷಕ ಸಿಬ್ಬಂದಿ, ಕಸಾಪ ಸಂಘಟನಾ ಕಾರ್ಯದರ್ಶಿ ಎಂ‌.ನಿಂಗರಾಜ ಇದ್ದರು. ವಿದ್ಯಾರ್ಥಿನಿಯರಾದ ಎ.ಶಾರದ, ಉಮಾ, ಎನ್.ಪುಷ್ಪಾ ಕವನ ವಾಚಿಸಿದರು. ಅಧ್ಯಕ್ಷತೆಯನ್ನು ಕಸಾಪ ಇಟ್ಟಗಿ ಹೋಬಳಿ ಘಟಕದ ಅಧ್ಯಕ್ಷ ಜಿ‌.ಬಿ. ವಿನಯರಾಜ ಆಚಾರ್ಯ ವಹಿಸಿದ್ದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕ ಶಶಿಧರ ಸ್ವಾಗತಿಸಿದರು. ಶಿಕ್ಷಕ ರವೀಂದ್ರಗೌಡ ವಂದಿಸಿದರು. ಕನ್ನಡ ಶಿಕ್ಷಕ ಮಲ್ಲಯ್ಯ ನಿರ್ವಹಿಸಿದರು.