ಬೆಳೆ ನಷ್ಟ, ಕೃಷಿ ವೆಚ್ಚಗಳ ಏರಿಕೆ ಹಾಗೂ ನೈಸರ್ಗಿಕ ವಿಕೋಪಗಳಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳು ಹಾಗೂ ಸಹಕಾರ ಸಂಘಗಳಲ್ಲಿ ರೈತರು ಪಡೆದಿರುವ ಕೃಷಿ ಸಾಲವನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ಮನ್ನಾ ಮಾಡಬೇಕು.
ಹುಬ್ಬಳ್ಳಿ:
ರೈತರ ಕೃಷಿ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಹಾಗೂ ಮಹದಾಯಿ, ಕಳಸಾ-ಬಂಡೂರಿ ನಾಲಾ ಯೋಜನೆಗೆ ಸಂಬಂಧಿಸಿದ ತೊಡಕುಗಳನ್ನು ಕೇಂದ್ರ ಸರ್ಕಾರ ಶೀಘ್ರ ಬಗೆಹರಿಸಿ ಯೋಜನೆಗೆ ಚಾಲನೆ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ಕಳಸಾ-ಬಂಡೂರಿ ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ರೈತರು ಶನಿವಾರ ಇಲ್ಲಿನ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಬೆಳೆ ನಷ್ಟ, ಕೃಷಿ ವೆಚ್ಚಗಳ ಏರಿಕೆ ಹಾಗೂ ನೈಸರ್ಗಿಕ ವಿಕೋಪಗಳಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳು ಹಾಗೂ ಸಹಕಾರ ಸಂಘಗಳಲ್ಲಿ ರೈತರು ಪಡೆದಿರುವ ಕೃಷಿ ಸಾಲವನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.ಉತ್ತರ ಕರ್ನಾಟಕದ ಕುಡಿಯುವ ನೀರು ಹಾಗೂ ನೀರಾವರಿ ಸಮಸ್ಯೆಗೆ ಪ್ರಮುಖವಾಗಿರುವ ಮಹದಾಯಿ ಮತ್ತು ಕಳಸಾ-ಬಂಡೂರಿ ನಾಲಾ ಯೋಜನೆಗೆ ಸಂಬಂಧಿಸಿದ ಆಡಳಿತಾತ್ಮಕ ಹಾಗೂ ತಾಂತ್ರಿಕ ತೊಡಕುಗಳನ್ನು ಶೀಘ್ರವಾಗಿ ನಿವಾರಿಸಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂದರು.ಸಂಘಟನೆಯ ಜಿಲ್ಲಾಧ್ಯಕ್ಷ ಸಿದ್ದಣ್ಣ ತೇಜಿ ಮಾತನಾಡಿ, ಕಳೆದ ವರ್ಷ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಕಚೇರಿ ಎದುರು ಮಹದಾಯಿ ವಿಚಾರವಾಗಿ ಹೋರಾಟ ನಡೆಸಿದ ಸಂದರ್ಭದಲ್ಲಿ ಹೋರಾಟಗಾರರೊಂದಿಗೆ ಚರ್ಚಿಸಿ ದೆಹಲಿಗೆ ಬರುವಂತೆ ಜೋಶಿ ಅವರು ಆಹ್ವಾನಿಸಿದ್ದರು. ಹೋರಾಟಗಾರರು ತಮ್ಮ ಪ್ರತಿನಿಧಿಯಾಗಿ ಈ ಸಮಸ್ಯೆಯನ್ನು ಇತ್ಯರ್ಥಪಡಿಸುವಂತೆ ಮನವಿ ಸಲ್ಲಿಸಿದ್ದರು. ಆದರೆ, ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಕೇಂದ್ರ ಸಚಿವರು ವಿಫಲರಾಗಿದ್ದಾರೆ. ಇದೀಗ ಕಬ್ಬು ಬೆಳೆಗಾರರ ಹಾಗೂ ಸ್ವಾಮಿನಾಥನ್ ಆಯೋಗದ ವರದಿ ಕುರಿತ ವಿಚಾರಕ್ಕಾಗಿ ದೆಹಲಿಗೆ ಆಹ್ವಾನಿಸಿರುವ ಸಂದರ್ಭದಲ್ಲಿ ಮಹದಾಯಿ ವಿಚಾರವನ್ನೂ ಪ್ರಸ್ತಾಪಿಸಿ ಇತ್ಯರ್ಥಪಡಿಸಬೇಕು ಎಂದು ಒತ್ತಾಯಿಸಿದರು.ನಂತರ ತಹಸೀಲ್ದಾರ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷ ಬಾಬಾಜಾನ್ ಮುಧೋಳ, ರಾಜಶೇಖರ್ ಮಣಸಿಕಾಯಿ, ಬಶೀರ್ ಮುಧೋಳ, ಜಿ.ಎಸ್. ಮಾದಾಪೂರ, ಬಸಣ್ಣ ನೆಲುಗಿ, ಮುತ್ತಣ್ಣ ಬಾಡಿನ, ರಮೇಶ ಬೋಸ್ಲೆ, ಯುಸೂಫ್ ಬಳ್ಳಾರಿ, ಸಮೀರ್ ಮುಲ್ಲಾ, ಪೀರಸಾಬ್ ನದಾಫ, ಹುಸೇನ್ ತಳೇವಾಡ, ಸಮೀಮ್ ಮುಲ್ಲಾ, ಸೂರ್ಯಕಾಂತ್ ಘೋಡಕೆ, ಜಾಕಿರ್ ಬೇಪಾರಿ, ಗಂಗಾಧರ ಪೆರೂರು, ಈರಣ್ಣ ಎಮ್ಮಿ, ಡಾ. ಸತೀಶ್ ಕಳ್ಳಿಮನಿ, ಮೌಲಾಸಾಬ ಮುಲ್ಲಾ, ರಮೇಶ್ ಒಡಪಲ್ಲಿ, ವಿಶ್ವನಾಥ್ ಸೇರಿ ಹಲವರಿದ್ದರು.