, ಸಮರ್ಪಕ ಮಳೆಯ ಕೊರತೆಯಿಂದ ಬೆಳೆಗಳು ನಾಶವಾಗಿದ್ದು,
ಕನ್ನಡಪ್ರಭ ವಾರ್ತೆ ಟಿ. ನರಸೀಪುರಮುಂಗಾರು ವೈಫಲ್ಯದಿಂದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ರಾಜ್ಯ ಸರ್ಕಾರ ತಕ್ಷಣ ಬರ ಪರಿಹಾರ ಘೋಷಿಸಿ ಪ್ರತಿ ಎಕರೆಗೆ 50 ಸಾವಿರ ರು. ಗಳ ಪರಿಹಾರ ನೀಡಬೇಕು ಹಾಗೂ ರೈತರ ಸಂಪೂರ್ಣ ಕೃಷಿ ಸಾಲವನ್ನು ಮನ್ನಾ ಮಾಡಬೇಕು ಎಂದು ಭಾರತೀಯ ಕಿಸಾನ್ ಸಂಘದ ತಾಲೂಕು ಘಟಕ ಆಗ್ರಹಿಸಿದೆ.ಪಟ್ಟಣದಲ್ಲಿ ನಡೆದ ಭಾರತೀಯ ಕಿಸಾನ್ ಸಂಘದ ತಾಲೂಕು ಘಟಕದ ಮಾಸಿಕ ಸಭೆಯಲ್ಲಿ ಅಧ್ಯಕ್ಷ ಶಿವಕುಮಾರ್ ಮಾತನಾಡಿ, ಸಮರ್ಪಕ ಮಳೆಯ ಕೊರತೆಯಿಂದ ಬೆಳೆಗಳು ನಾಶವಾಗಿದ್ದು, ರೈತರು ಬಿತ್ತನೆ ಬೀಜ, ಗೊಬ್ಬರ, ಉಳುಮೆ ಸೇರಿದಂತೆ ಕೃಷಿ ಚಟುವಟಿಕೆಗಳಿಗಾಗಿ ವಿವಿಧ ಬ್ಯಾಂಕ್‌ಗಳಿಂದ ಪಡೆದಿರುವ ಸಾಲವನ್ನು ಮರುಪಾವತಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಮುಖ್ಯಮಂತ್ರಿ ತಕ್ಷಣ ಬರ ಪರಿಹಾರ ಘೋಷಿಸಿ ರೈತರ ಹಿತ ಕಾಪಾಡಬೇಕು ಎಂದು ಒತ್ತಾಯಿಸಿದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ಗಂಡತ್ತೂರು ಮಾತನಾಡಿ, ರಾಜ್ಯದ ರೈತರು ಕೃಷಿಯ ಜೊತೆಗೆ ಹೈನುಗಾರಿಕೆಯನ್ನೂ ಅವಲಂಬಿಸಿದ್ದು, ಪ್ರಸ್ತುತ ಪ್ರತಿ ಲೀಟರ್ ಹಾಲಿಗೆ 36 ರು. ಖರೀದಿ ದರ ಹಾಗೂ 4 ರು. ಪ್ರೋತ್ಸಾಹಧನ ಸೇರಿ 40 ರೂ.ಗಳು ಮಾತ್ರ ದೊರೆಯುತ್ತಿದೆ. ಆದರೆ ಮೇವು, ಪಶು ಆಹಾರ, ಹುಲ್ಲು, ನೀರು ಸೇರಿದಂತೆ ಅಗತ್ಯ ವಸ್ತುಗಳ ಬೆಲೆಗಳು ಏರಿಕೆಯಾಗಿರುವುದರಿಂದ ಈ ಮೊತ್ತ ಹೈನುಗಾರಿಕೆ ನಡೆಸಲು ಸಾಕಾಗುತ್ತಿಲ್ಲ ಎಂದು ಹೇಳಿದರು.ಮುಂಗಾರು ವೈಫಲ್ಯದಿಂದ ಸಂಕಷ್ಟದಲ್ಲಿರುವ ರೈತರ ಪರವಾಗಿ ಜಿಲ್ಲೆಯಾದ್ಯಂತ ಅಂಚೆ ಚಳವಳಿ ನಡೆಸಲಾಗುತ್ತಿದ್ದು, ಆ. 29ರಂದು ಮೈಸೂರಿನ ಮುಖ್ಯ ಹಾಲು ಮಹಾಮಂಡಳಿಯ ಕಚೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಎಲ್ಲಾ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನೆ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.ಉಪಾಧ್ಯಕ್ಷ ಪರಮೇಶ್, ಪ್ರಭು, ವಕೀಲ ಶಾಂತನಾಗರಾಜು, ಜಯಶೀಲ, ನಾಗರಾಜು, ಮಹಿಳಾ ಪ್ರಮುಖರಾದ ಮಹದೇವಮ್ಮ, ಕಾರ್ಯದರ್ಶಿ ಪ್ರಭಾಕರ್, ಮುಕುಂದ, ಜಗದೀಶ್, ಮಹೇಶ್, ಮಾದೇಗೌಡ, ಬೋರೆಗೌಡ, ಶಂಕರ್, ಮೋಹನ್ ಕುಮಾರ್, ಲಿಂಗರಾಜು, ನಿಂಗರಾಜು, ರಾಜಶೇಖರ್, ನಾಗೇಶ್, ಮಹಂತೇಶಪ್ಪ, ಪ್ರಕಾಶ್, ಬಸವರಾಜು, ಮಹದೇವಸ್ವಾಮಿ, ಶಶಿಕುಮಾರ್, ಬಸವರಾಜು, ದರ್ಶನ್, ಗುರುಮಲಪ್ಪ, ಮನು ಇದ್ದರು.