ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ರೈತರು ಹಾಗೂ ಸರ್ಕಾರಿ ಜಾಗಗಳ ದಾಖಲೆಗಳಲ್ಲಿ ವಕ್ಫ್ ಬೋರ್ಡ್ ಹೆಸರು ನಮೂದಾಗಿರುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ಶ್ರೀರಂಗಪಟ್ಟಣ ಬಂದ್ ಸಂಪೂರ್ಣ ಯಶಸ್ವಿಯಾಯಿತು.ಔಷಧಿ ಸೇರಿದಂತೆ ಅಗತ್ಯ ವಸ್ತುಗಳ ಮಾರಾಟದ ಅಂಗಡಿಗಳು ಹೊರತುಪಡಿಸಿ ಉಳಿದ ಎಲ್ಲಾ ವ್ಯಾಪಾರ, ವಹಿವಾಟಿನ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಮುಚ್ಚುವ ಮೂಲಕ ಬಂದ್‌ಗೆ ಬೆಂಬಲ ಸೂಚಿಸಿದರು.
ತಾಲೂಕು ರೈತ ಹಿತರಕ್ಷಣಾ ವೇದಿಕೆ ಹೆಸರಿನೊಂದಿಗೆ ವಕ್ಫ್ ಬೋರ್ಡ್ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಹಿಂದೂ ಜಾಗರಣಾ ವೇದಿಕೆ, ಆರ್.ಎಸ್.ಎಸ್, ರೈತಸಂಘ, ಕನ್ನಡ ರಕ್ಷಣಾ ವೇದಿಕೆ, ಮಂಡ್ಯ ರಕ್ಷಣಾ ವೇದಿಕೆ, ಕಸಾಪ, ಪತ್ರಕರ್ತರ ಸಂಘ, ವಕೀಲರ ಸಂಘ, ಬ್ರಾಹ್ಮಣರ ಸಂಘ, ಸವಿತ ಸಮಾಜ, ಬೀದಿ ಬದಿ, ರಸ್ತೆ ವ್ಯಾಪಾರಸ್ಥರ ಸಂಘ, ಪುರಸಭೆ ಸದಸ್ಯರು, ಶ್ರೀರಂಗನಾಥ ವ್ಯಾಪಾರಸ್ಥರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ನೀಡಿದ್ದವು.ಶ್ರೀರಂಗಪಟ್ಟಣ ಬಂದ್ ಮಾಡಿ ಸಂಘಟನೆಗಳ ಮುಖಂಡರು, ಸಾರ್ವಜನಿಕರು, ರೈತರು ವಕ್ಫ್ ಬೋರ್ಡ್ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಪಟ್ಟಣದ ಬೆಂಗಳೂರು-ಮೈಸೂರು ಹೆದ್ದಾರಿಯ ಕುವೆಂಪು ವೃತ್ತದಲ್ಲಿ ಪ್ರತಿಭಟನಾಕಾರರು, ತಮ್ಮ ಜಾನುವಾರು, ಎತ್ತಿನ ಗಾಡಿ, ಟ್ರ್ಯಾಕ್ಟರ್ ಸೇರಿದಂತೆ ಕೃಷಿ ಚಟುವಟಿಕೆಗಳ ಪರಿಕರಗಳೊಂದಿಗೆ ಕಬ್ಬಿನ ಜಲ್ಲೆ ಹಿಡಿದು ಕೆಲ ಕಾಲ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.ನಂತರ ಪ್ರಮುಖ ರಸ್ತೆ ಮೂಲಕ ತಾಲೂಕು ಕಚೇರಿ ವರೆವಿಗೂ ಪ್ರತಿಭಟನಾ ಮೆರವಣಿಗೆ ನಡೆಸಿ ತಾಲೂಕು ಕಚೇರಿ ಎದುರು ಧರಣಿ ನಡೆಸಿ ಶಾಸಕರು, ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕಾಗಮಿಸುವಂತೆ ಆಗ್ರಹಿಸಿದರು.
ರೈತರು, ಸರ್ಕಾರಿ ಜಾಗಗಳು, ಕಟ್ಟಡಗಳ ದಾಖಲಾತಿಗಳಲ್ಲಿ ನಮೂದಾಗಿರುವ ವಕ್ಫ್ ಬೋರ್ಡ್ ಹೆಸರು ರದ್ದು ಮಾಡುವ ಜೊತೆಗೆ ವಕ್ಫ್ ಬೋರ್ಡ್ ವಜಾ ಮಾಡಬೇಕು. ಒಂದು ವೇಳೆ ಪ್ರತಿಭಟನಾ ಸ್ಥಳಕ್ಕೆ ಅವರು ಬಾರದಿದ್ದರೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೋಡಿದರು.ವಕೀಲರ ಬೆಂಬಲ:
ವಕ್ಫ್ ಮಂಡಳಿ ವಿರುದ್ಧ ನಾನಾ ಸಂಘಟನೆಗಳು ಪಟ್ಟಣದಲ್ಲಿ ನಡೆಸುತ್ತಿದ್ದ ಪ್ರತಿಭಟನೆಗೆ ವಕೀಲರ ಸಂಘದ ಸದಸ್ಯರು ಸಹ ಬೆಂಬಲ ಸೂಚಿಸಿ ಬಂದ್‌ಗೆ ಸಹಕಾರ ನೀಡಿದರು. ರೈತ ಹಿತರಕ್ಷಣಾ ವೇದಿಕೆ ಬೆಂಬಲಕ್ಕೆ ಮುಂದಾದ ವಕೀಲರು ಮೊದಲಿಗೆ ಸಂಘದಲ್ಲಿ ಸಭೆ ನಡೆಸಿ ಕಲಾಪದಿಂದ ದೂರ ಉಳಿಯುವಂತೆ ತೀರ್ಮಾನಿಸಿ ನಂತರ ಹೊರಬಂದು ನ್ಯಾಯಾಲಯದಿಂದ ಪ್ರತಿಭಟನಾ ಸ್ಥಳದವರೆಗೆ ಕಾಲ್ನಡುಗೆಯಲ್ಲಿ ಬಂದು ಪ್ರತಿಭಟನೆ ಸಹಕಾರ ನೀಡಿದರು.ತಾಲೂಕು ಕಚೇರಿಗೆ ಮುತ್ತಿಗೆ ಯತ್ನ:
ತಾಲೂಕು ಕಚೇರಿ ಮುಂಭಾಗ ರೈತರು ಸೇರಿದಂತೆ ನಾನಾ ಸಂಘಟನೆಗಳು ವಕ್ಫ್ ಬೋರ್ಡ್ ವಿರುದ್ಧ ಹೋರಾಟ ನಡೆಸುತ್ತಿದ್ದರೆ, ತಾಲೂಕು ಕಚೇರಿಯಲ್ಲಿ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿದ್ದರಿಂದ ಪ್ರತಿಭಟನಾಕಾರರು ಅಸಮಾಧಾನಗೊಂಡು ತಾಲೂಕು ಕಚೇರಿಗೆ ಮುತ್ತಿಗೆ ಹಾಕಲು ಯತ್ನಸಿದರು. ಇದನ್ನು ತಡೆಯಲು ಮುಂದಾದ ಪೊಲೀಸರು ಹಾಗೂ ಪ್ರತಿಭಟನಾಕಾರರ ವಿರುದ್ಧ ಕೆಲ ಕಾಲ ಮಾತಿನ ಚಕಮಕಿ ನಡೆಯಿತು.ಮಸೀದಿಗೆ ಬಿಗಿ ಭದ್ರತೆ:
ಶ್ರೀರಂಗಪಟ್ಟಣ ಬಂದ್ ಹಿನ್ನೆಲೆಯಲ್ಲಿ ಪಟ್ಟಣದ ಜಾಮಿಯಾ ಮಸೀದಿ ಸುತ್ತಮುತ್ತಲಿನ ಪ್ರದೇಶವನ್ನು ಪೊಲೀಸರು ಬ್ಯಾರಿಕೇಟ್‌ನಿಂದ ಬಿಗಿಭದ್ರತೆ ಒದಗಿಸಿ ಸಾರ್ವಜನಿಕರ ಪ್ರವೇಶ ನಿರ್ಬಂಧ ಹೇರಿದ್ದರು. ಮಸೀದಿ ಸುತ್ತ ನೂರಾರು ಪೊಲೀಸರನ್ನು ನಿಯೋಜಿಸಿ ಮಸೀದಿಗೆ ಭದ್ರತೆ ಒದಗಿಸಿದರು. ಪ್ರತಿಭಟನೆಗೆ 1 ಎಸ್‌ಪಿ, 1 ಎಎಸ್‌ಪಿ, 1 ಡಿವೈಎಸ್‌ಪಿ ಸೇರಿದಂತೆ ನೂರಾರು ಪೊಲೀಸರನ್ನು ನಿಯೋಜಿಸಲಾಗಿತ್ತು.ಅಂಗಡಿ ಮುಂಗ್ಗಟ್ಟುಗಳು ಬಹುತೇಕ ಬಂದ್:
ಶ್ರೀರಂಗಪಟ್ಟಣ ಬಂದ್‌ಗೆ ಪಟ್ಟಣದ ಎಲ್ಲಾ ಅಂಗಡಿ ಮುಂಗ್ಗಟ್ಟುಗಳು ಸ್ವಯಂ ಪ್ರೇರಿತರಾಗಿ ಮುಚ್ಚಿದ್ದು ಬಂದ್‌ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ಪಟ್ಟಣದ ಶ್ರೀಲಕ್ಷ್ಮಿ ದೇವಸ್ಥಾನ ಬಳಿ ಪ್ರತಿಭಟನಾಕಾರರು ಟೈರ್‌ಗೆ ಬೆಂಕಿ ಹಾಕಿ ತಮ್ಮ ಆಕ್ರೋಶ ಹೊರ ಹಾಕಿದರು. ಈ ವೇಳೆ ಪೊಲೀಸರು ಆಗಮಿಸಿ ಹೊತ್ತಿ ಉರಿಯುತ್ತಿದ್ದ ಟೈರನ್ನು ನಂದಿಸಿದರು.ಲಘು ಉಪಾಹಾರ:
ಶ್ರೀರಂಗಪಟ್ಟಣ ಬಂದ್ ವೇಳೆ ವೇದಿಕೆ ವತಿಯಿಂದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಎಲ್ಲರಿಗೂ ಪ್ರತಿಭಟನಾ ಸ್ಥಳದಲ್ಲೇ ಬಾತ್ ತಯಾರಿಸಿ ಉಣಬಡಿಸಿದರು.ರೈತ ಹೋರಾಟಗಾರ ಕೆ.ಎಸ್ ನಂಜುಂಡೇಗೌಡ ಮಾತನಾಡಿ, ರೈತರ ಆತಂಕಕ್ಕೆ ಮೂಲ ಕಾರಣ ಕಾಂಗ್ರೆಸ್ ಸರ್ಕಾರ. ವಕ್ಫ್ ಬೋರ್ಡ್‌ನಿಂದ ಶ್ರೀರಂಗಪಟ್ಟಣದ ಎಲ್ಲಾ ರೈತರಲ್ಲೂ ಆತಂಕಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಯಾವೊಬ್ಬ ರೈತರ ಆರ್‌ಟಿಸಿಗಳಲ್ಲಿ ವಕ್ಫ್ ಬೋರ್ಡ್ ಎಂದು ನಮೂದಾಗಿರುವುದು ಕಂಡು ಬಂದಲ್ಲಿ, ರೈತರ ಪರವಾಗಿ ಜಿಲ್ಲಾದ್ಯಂತ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರೈತ ಹಿತರಕ್ಷಣಾ ವೇದಿಕೆ ಜಿಲ್ಲಾ ಸಂಚಾಲಕ ಚಂದನ್ ಮಾತನಾಡಿ, ಶ್ರೀರಂಗಪಟ್ಟಣ ಬಂದ್‌ಗೆ ಆಗಮಿಸುವಂತೆ ಶಾಸಕ ರಮೇಶ ಬಂಡಿಸಿದ್ದೇಗೌಡ ಅವರಿಗೆ ತಿಳಿಸಲಾಗುತ್ತು. ಆದರೆ, ಬಂದಿಲ್ಲ. ಇದರಿಂದ ಕ್ಷೇತ್ರದ ರೈತರ ಬಗ್ಗೆ ಅವರಲ್ಲಿ ಕಾಳಜಿ ಇಲ್ಲ ಎಂಬುದು ತೋರುತ್ತಿದೆ ಎಂದು ಕಿಡಿಕಾರಿದರು.ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಡಳಿತದ ಪರ ಉಪವಿಭಾಗಾಧಿಕಾರಿ ಶ್ರೀನಿವಾಸ್ ಆಗಮಿಸಿ ಮನವಿ ಸ್ವೀಕರಿಸಿ, ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಅಮರಣಾಂತರ ಉಪವಾಸವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಜ.30ರ ವರೆಗೆ ಅಧಿಕಾರಿಗಳ ಕಾರ್ಯವೈಖರಿಯನ್ನು ಗಮನಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಎಸಿ ಶ್ರೀನಿವಾಸ್ ಮಾತನಾಡಿ, ಈ ಸಂಬಂಧ ಜಿಲ್ಲಾಧಿಕಾರಿಗಳು ಸಭೆ ಕರೆದಿದ್ದಾರೆ. ತಮ್ಮ ಎಲ್ಲಾ ಬೇಡಿಕೆಗಳನ್ನು ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ ಪ್ರತಿಭಟನಾಕಾರರ ಮನವೊಲಿಸಿ ಪ್ರತಿಭಟನೆ ಹಿಂಪಡೆಯುವಲ್ಲಿ ಯಶಸ್ವಿಯಾದರು.ಇದೇ ವೇಳೆ ಅಮರಣಾಂತರ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಮೂರ್‍ನಾಲ್ಕು ಮಂದಿಗೆ ಸ್ವತಃ ತಾವೇ ನೀರು ಕುಡಿಸಿದರು. ಬಳಿಕ ಪ್ರತಿಭಟನಾಕಾರರು ಸಚಿವ ಜಮೀರ್ ಅಹಮದ್ ಖಾನ್ ಭಾವಚಿತ್ರಕ್ಕೆ ಬೆಂಕಿ ಹಾಕಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ ನಂತರ ಪ್ರತಿಭಟನೆಯನ್ನು ಮುಂದೂಡಿದರು.
ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ನೂರಾರು ಕಾರ್ಯಕರ್ತರು, ಮುಖಂಡರು ಭಾಗವಹಿಸಿದ್ದರು.