ಸಾರಾಂಶ
ರಾಜ್ಯ ಸರ್ಕಾರ ವಕ್ಫ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿಯು ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಮತ್ತು ಅಕ್ರಮವಾಗಿ ಈಗಾಗಲೇ ವಕ್ಫ್ ಆಸ್ತಿ ಪರಭಾರೆ ನಿಷೇಧಿಸಿದೆ ಎಂದು ನಮೂದಿಸಿರುವ ಪಹಣಿಗಳನ್ನು ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಿ ಬರುವ ನ.4ರಂದು ರಾಜ್ಯಾದ್ಯಂತ ಬೃಹತ್ ಹೋರಾಟ ನಡೆಸಲು ತೀರ್ಮಾನಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯ ಸರ್ಕಾರ ವಕ್ಫ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿಯು ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಮತ್ತು ಅಕ್ರಮವಾಗಿ ಈಗಾಗಲೇ ವಕ್ಫ್ ಆಸ್ತಿ ಪರಭಾರೆ ನಿಷೇಧಿಸಿದೆ ಎಂದು ನಮೂದಿಸಿರುವ ಪಹಣಿಗಳನ್ನು ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಿ ಬರುವ ನ.4ರಂದು ರಾಜ್ಯಾದ್ಯಂತ ಬೃಹತ್ ಹೋರಾಟ ನಡೆಸಲು ತೀರ್ಮಾನಿಸಿದೆ.ಈ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪಕ್ಷದ ಹಾಲಿ/ಮಾಜಿ ಶಾಸಕರು, ಸಂಸದರು ಹಾಗೂ ಜಿಲ್ಲಾಧ್ಯಕ್ಷರಿಗೆ ಪತ್ರ ಬರೆದು, ಅಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರ್‌ಗಳ ಕಚೇರಿಗಳ ಬಳಿ ಹೋರಾಟ ನಡೆಸುವಂತೆ ಕರೆ ನೀಡಿದ್ದಾರೆ.
ರಾಜ್ಯ ಕಾಂಗ್ರೆಸ್ ನೇತೃತ್ವದ ಸರ್ಕಾರವು ರಾಜ್ಯದಲ್ಲಿ ತುಘಲಕ್ ನೀತಿಯನ್ನು ಜಾರಿಗೆ ತರುತ್ತಿದೆ. ಅಲ್ಪಸಂಖ್ಯಾತರರ ಸಚಿವ ಜಮೀರ್ ಅಹಮ್ಮದ್ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸೂಚನೆ ಮೇರೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಒತ್ತಡ ಹೇರುತ್ತಿದ್ದಾರೆ. ಇದರ ಫಲವಾಗಿ ರಾಜ್ಯದ ಬಹುತೇಕ ರೈತರು ತೀವ್ರ ಸಂಕಷ್ಟ ಮತ್ತು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.ಅಮಾಯಕರ ರೈತರ ಪಹಣಿ ಪತ್ರಗಳಲ್ಲಿ ವಕ್ಫ್ ಆಸ್ತಿ, ಪರಭಾರೆ ನಿಷೇಧಿಸಿ ಎಂದು ನಮೂದಿಸುವುದರ ಮುಖಾಂತರ ರಾಜ್ಯಾದ್ಯಂತ ರೈತರ ಜಮೀನು ಕಬಳಿಸುವ ಹುನ್ನಾರ ನಡೆದಿದೆ. ಈಗಾಗಲೇ ಸಾವಿರಾರು ರೈತರ ಪಹಣಿಗಳಲ್ಲಿ ವಕ್ಫ್ ಆಸ್ತಿ, ಪರಭಾರೆ ನಿಷೇಧಿಸಿದೆ ಎಂದು ನಮೂದಿಗಿರುವುದರಿಂದ ಕಲಬರುಗಿ, ವಿಜಯಪುರ, ಯಾದಗಿರಿ, ಬೀದರ್, ಶಿವಮೊಗ್ಗ ಸೇರಿ ಹಲವು ಜಿಲ್ಲೆಗಳಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ವಿಜಯೇಂದ್ರ ಪ್ರಸ್ತಾಪಿಸಿದ್ದಾರೆ.
ಸಚಿವ ಜಮೀರ್ ಅಹಮದ್ ಅವರನ್ನು ಕೂಡಲೇ ಸಂಪುಟದಿಂದ ವಜಾಗೊಳಿಸಬೇಕು. ಅಕ್ರಮವಾಗಿ ಈಗಾಗಲೇ ವಕ್ಫ್ ಆಸ್ತಿ ಪರಭಾರೆ ನಿಷೇಧಿಸಿದೆ ಎಂದು ನಮೂದಿಸಿರುವ ಪಹಣಿಗಳನ್ನು ತಕ್ಷಣಕ್ಕೆ ಹಿಂಪಡೆಯಲು ಒತ್ತಾಯಿಸಬೇಕು. ಈ ಮೂಲಕ ಯಾವುದೇ ರೈತರ ಆಸ್ತಿಯನ್ನು ಕಬಳಿಸುವ ಹುನ್ನಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಂಬಂಧಿತ ಅಧಿಕಾರಿಗಳ ಮುಖಾಂತರ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿ ರೈತ ಪರ ಹೋರಾಟ ಕೈಗೊಳ್ಳಬೇಕು ಎಂದು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.