ಕೊಪ್ಪಳ ಜಿಲ್ಲೆಯಲ್ಲೂ ಇದೆ ವಕ್ಫ್‌ ಆಸ್ತಿ ರಾದ್ಧಾಂತ

| Published : Oct 31 2024, 12:48 AM IST

ಕೊಪ್ಪಳ ಜಿಲ್ಲೆಯಲ್ಲೂ ಇದೆ ವಕ್ಫ್‌ ಆಸ್ತಿ ರಾದ್ಧಾಂತ
Share this Article
  • FB
  • TW
  • Linkdin
  • Email

ಸಾರಾಂಶ

ವಕ್ಫ್‌ ಆಸ್ತಿಯ ರಾದ್ಧಾಂತ ಕೊಪ್ಪಳಕ್ಕೂ ಕಾಲಿಟ್ಟಿದ್ದು, ಇಲ್ಲಿಯೂ ರೈತರು ಸೇರಿದಂತೆ ಅನೇಕರ ಪಹಣಿಯಲ್ಲಿ ವಕ್ಫ್‌ ಆಸ್ತಿ ಎನ್ನುವ ಕಾಲಂ ನಂಬರ್ 11ರಲ್ಲಿ ನಮೂದಿಸಿರುವ ಪ್ರಕರಣಗಳು ಒಂದೊಂದಾಗಿಯೇ ಬೆಳಕಿಗೆ ಬರುತ್ತಿವೆ.

ರೈತರ ಪಹಣಿಯಲ್ಲಿ ವಕ್ಫ್‌ ಹೆಸರು

ನೋಟಿಸ್ ಸಹ ನೀಡದೆ ಸೇರಿದೆ

ಪಹಣಿ ಪಡೆದ ಮೇಲೆಯೇ ಗೊತ್ತಾಗಿದೆ

ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ವಕ್ಫ್‌ ಆಸ್ತಿಯ ರಾದ್ಧಾಂತ ಕೊಪ್ಪಳಕ್ಕೂ ಕಾಲಿಟ್ಟಿದ್ದು, ಇಲ್ಲಿಯೂ ರೈತರು ಸೇರಿದಂತೆ ಅನೇಕರ ಪಹಣಿಯಲ್ಲಿ ವಕ್ಫ್‌ ಆಸ್ತಿ ಎನ್ನುವ ಕಾಲಂ ನಂಬರ್ 11ರಲ್ಲಿ ನಮೂದಿಸಿರುವ ಪ್ರಕರಣಗಳು ಒಂದೊಂದಾಗಿಯೇ ಬೆಳಕಿಗೆ ಬರುತ್ತಿವೆ.

ಅಚ್ಚರಿ ಎಂದರೆ ಇವರ್‍ಯಾರಿಗೂ ನೋಟಿಸ್ ಸಹ ಕಳುಹಿಸಿಲ್ಲ. ಆದರೆ, 2023ರ ಮಾರ್ಚ್ ತಿಂಗಳಲ್ಲಿಯೇ ಇವರ ಪಹಣಿಯಲ್ಲಿ ವಕ್ಫ್‌ ಹೆಸರು ದಿಢೀರ್ ಪ್ರತ್ಯಕ್ಷವಾಗಿದ್ದು, ಹಲವರನ್ನು ಆತಂಕಕ್ಕೆ ದೂಡಿದೆ.

ನಗರಕ್ಕೆ ಹೊಂದಿಕೊಂಡಿರುವ ಹೂವಿನಾಳ ರಸ್ತೆಯ ಬಳಿಯೇ 75 ಎಕರೆ ಭೂಮಿಯ ಪಹಣಿಯಲ್ಲಿ ವಕ್ಫ್‌ ಹೆಸರು ಇದ್ದು, ಇದನ್ನು ಇದುವರೆಗೂ ಬಹುತೇಕರು ನೋಡಿಕೊಂಡಿಲ್ಲ.

ಹೂವಿನಾಳ ಬಳಿ ಇರುವ ಆದಿತ್ಯ ಪಟವಗಾಂವಕರ ಅವರ ಹೆಸರಿನಲ್ಲಿ ಇರುವ 33 ಗುಂಟೆ ಜಮೀನು ಈಗ ಕೋಟ್ಯಂತರ ರುಪಾಯಿ ಬೆಲೆ ಬಾಳುತ್ತದೆ. ಈಗ ದಿಢೀರ್ ಎಂದು ಇವರ ಪಹಣಿಯಲ್ಲಿ ವಕ್ಫ್‌ ಹೆಸರು ಪ್ರತ್ಯಕ್ಷವಾಗಿದೆ. ಈ ಬಗ್ಗೆ ಅವರಿಗೆ ಯಾವುದೇ ನೋಟಿಸ್ ನೀಡಿಲ್ಲ. ಆದರೆ, ಅವರು ಪಹಣಿ ಪಡೆದ ಮೇಲೆಯೇ ಗೊತ್ತಾಗಿದೆ. ಈ ಹಿಂದೆ ಯಾವ ವರ್ಷದ ಪಹಣಿಯಲ್ಲಿಯೂ ವಕ್ಫ್‌ ಹೆಸರು ಇರಲಿಲ್ಲ.

1978ರಲ್ಲಿ ಈ ಆಸ್ತಿಯನ್ನು ಮಾರಾಟ ಮಾಡುತ್ತಾರೆ. ಇದಾದ ಮೇಲೆ 1985ರಲ್ಲಿ ಮತ್ತೋರ್ವರಿಗೆ ಮಾರಾಟವಾಗುತ್ತದೆ. ಇದಾದ ಮೇಲೆ 2012ರಲ್ಲಿ ಆದಿತ್ಯ ಪಟವಗಾಂವಕರ ಖರೀದಿ ಮಾಡುತ್ತಾರೆ. 1963ರಿಂದ 2012ರ ವರೆಗೂ ಕಂದಾಯ ಇಲಾಖೆಯಲ್ಲಿ ದಾಖಲೆಯನ್ನು ಪಡೆದಿದ್ದಾರೆ. ಎಲ್ಲಿಯೂ ವಕ್ಫ್‌ ಹೆಸರು ಇಲ್ಲ. ಆದರೆ, ಈಗ ದಿಢೀರ್ ಎಂದು ಅವರ ಪಹಣಿಯ 11ನೇ ಕಾಲಂನಲ್ಲಿ ವಕ್ಫ್‌ ಎನ್ನುವ ಹೆಸರು ಪ್ರತ್ಯಕ್ಷವಾಗಿದೆ.

ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಯಾರು ಸಹ ಮಾಹಿತಿ ನೀಡುತ್ತಿಲ್ಲ. ಕಂದಾಯ, ನೋಂದಣಿ ಇಲಾಖೆಗೂ ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿದ್ದಾರೆ. ಆಗಲೂ ಈ ಬಗ್ಗೆ ಮಾಹಿತಿ ನೀಡಿಲ್ಲ. ಖುದ್ದು ವಕ್ಫ್‌ ಮಂಡಳಿಗೂ ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿದರೆ ಅವರು ಮಾಹಿತಿ ನೀಡಿಲ್ಲ.

3305 ಎಕರೆ ವಿವಾದದಲ್ಲಿ:

ಕೊಪ್ಪಳ ಜಿಲ್ಲೆಯಲ್ಲಿ ವಕ್ಫ್‌ ಆಸ್ತಿ 3305 ಎಕರೆ ವಿವಾದದಲ್ಲಿ ಇದೆ. ಇಷ್ಟು ಭೂಮಿ ವೈಯಕ್ತಿಕ ಹೆಸರಿನಲ್ಲಿದ್ದು, ಇದು ವಕ್ಫ್‌ ಆಸ್ತಿ ಎನ್ನುವುದು ವಕ್ಫ್‌ ಮಂಡಳಿಯ ವಾದ.

ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ವಿಧಾನಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ವಕ್ಫ್‌ ಮತ್ತು ಅಲ್ಪಸಂಖ್ಯಾತರ ಸಚಿವರು 2023ರ ಡಿ.13ರಂದು ಲಿಖಿತ ಉತ್ತರ ನೀಡಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ 169 ಎಕರೆ 19 ಗುಂಟೆ ವಕ್ಫ್‌ ಆಸ್ತಿ ಇದೆ ಎಂದು ಉತ್ತರಿಸಿದ್ದಾರೆ.

49 ಪ್ರಕರಣದ ವಿವಾದದಲ್ಲಿ 11 ಪ್ರಕರಣಗಳ ಕುರಿತು ಸರ್ಕಾರದ ಆದೇಶವಾಗಿದೆ. 38 ಪ್ರಕರಣಗಳು ವಿಚಾರಣೆ ಬಾಕಿ ಇವೆ. ಕೊಪ್ಪಳ ಜಿಲ್ಲೆಯಲ್ಲಿ 1083 ವಕ್ಫ್‌ ಆಸ್ತಿಗಳಿಗೆ ಬೇಲಿ ಹಾಕಲಾಗಿದೆ. 502 ವಕ್ಫ್‌ ಆಸ್ತಿಗಳಿಗೆ ಬೇಲಿ ಹಾಕಬೇಕಾಗಿದೆ.

3475.10 ಎಕರೆ ಭೂಮಿ:

ಕೊಪ್ಪಳ ಜಿಲ್ಲೆಯಲ್ಲಿ 3475.10 ಎಕರೆ ಭೂಮಿ ವಕ್ಫ್‌ ಆಸ್ತಿಯಾಗಿದೆ. ಆದರೆ, ವಾಸ್ತವದಲ್ಲಿ ಇದು ಕೇವಲ 169.19 ಗುಂಟೆ ಮಾತ್ರ ಇದೆ. ವೈಯಕ್ತಿಕ ಹೆಸರಿನಲ್ಲಿ 3305-31 ಗುಂಟೆ ಭೂಮಿ ಬೇರೆಯವರ ಹೆಸರಿನಲ್ಲಿ ಇದೆ. ಇದುವೇ ಈಗ ವಿವಾದದ ಕೇಂದ್ರವಾಗಿದ್ದು, ಇದನ್ನು ಮರಳಿ ಪಡೆಯಲು ವಕ್ಫ್‌ ಸಮಿತಿ ಮುಂದಾಗಿದೆ.