ಸಾರಾಂಶ
ವಿಧಾನಸಭೆ, ವಿಧಾನಪರಿಷತ್ ಮತ್ತು ಸಂಸತ್‌ನಲ್ಲಿ ಅಂಗವಿಕಲರಿಗೆ ಮೀಸಲಾತಿ ನೀಡಬೇಕು. ವಿಧಾನಸೌಧದಲ್ಲಿ ಅಂಗವಿಕಲರ ಪರ ಧ್ವನಿ ಎತ್ತಲು ರಾಜಕೀಯದಲ್ಲೂ ಮೀಸಲಾತಿ ಒದಗಿಸಬೇಕು
ಕನ್ನಡಪ್ರಭ ವಾರ್ತೆ ಹೊಸಪೇಟೆ
ಅಂಗವಿಕರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಹೋಂ ಗಾರ್ಡ್‌ಗಳು ಸೇರಿದಂತೆ ವಿವಿಧ ವಲಯದ ಗುತ್ತಿಗೆ ನೌಕರರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ "ಪ್ರಜಾಪ್ರಭುತ್ವ ಸಾಮಾನ್ಯ ನಾಗರಿಕ ಮತದಾರರ ಹೋರಾಟ ಸಮಿತಿ " ನೇತೃತ್ವದಲ್ಲಿ ಅಂಧರು ನಗರದ ಪುನೀತ್ ರಾಜ್‌ಕುಮಾರ ವೃತ್ತದಿಂದ ಸೋಮವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ವರೆಗೆ ಪಾದಯಾತ್ರೆ ಕೈಗೊಂಡರು.ಬರೀ ಅಂಗವಿಕಲರು, ಅಂಧರು ಅಷ್ಟೇ ಅಲ್ಲ, ಮಾನವೀಯ ನೆಲೆಯಲ್ಲಿ ಇತರೆ ವಲಯದವರ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಅಂಧರು ಪಾದಯಾತ್ರೆ ಮೂಲಕ ಒತ್ತಾಯಿಸುತ್ತಿದ್ದು, ಈ ಪಾದಯಾತ್ರೆಗೆ ಕೆಲ ಪ್ರಗತಿಪರ ಸಂಘಟನೆಗಳು ಕೂಡ ಸಾಥ್ ನೀಡಿದವು.
ಪ್ರಜಾಪ್ರಭುತ್ವ ಸಾಮಾನ್ಯ ನಾಗರಿಕ ಮತದಾರರ ಹೋರಾಟ ಸಮಿತಿ ಕಾರ್ಯದರ್ಶಿ ಸಂತೋಷ್ ಕುಮಾರ ಡಿ.ಎನ್. ಮಾತನಾಡಿ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರನ್ನಾಗಿ ನಿಯೋಜನೆ ಮಾಡಿಕೊಳ್ಳಬೇಕು. ರಾಜ್ಯಾದ್ಯಂತ ನಗರಸಭೆ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಸೇರಿದಂತೆ ವಿವಿಧೆಡೆ ಅಂಗವಿಕಲರ ಪರವಾಗಿ ಕೆಲಸ ಮಾಡುತ್ತಿರುವ ವಿಆರ್‌ಡಬ್ಲ್ಯು, ಯುಆರ್‌ಡಬ್ಲ್ಯು, ಎಂಆರ್‌ಡಬ್ಲ್ಯುಗಳನ್ನು ಕಾಯಂ ಮಾಡಿಕೊಳ್ಳಬೇಕು. ಹೋಂ ಗಾರ್ಡ್‌ಗಳನ್ನು ಕೂಡ ಸರ್ಕಾರಿ ನೌಕರರು ಎಂದು ಪರಿಗಣಿಸಬೇಕು. ಕೆಎಸ್‌ಆರ್‌ಟಿಸಿ ಸಂಸ್ಥೆಯನ್ನು ಸರ್ಕಾರಿ ಸಂಸ್ಥೆಯನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿದರು.ರಾಜಕೀಯದಲ್ಲೂ ಮೀಸಲಾತಿ ನೀಡಲಿ:
ಮಹಿಳಾ ಘಟಕದ ಅಧ್ಯಕ್ಷೆ ಧರಣೇಶ್ವರಿ ಮಾತನಾಡಿ, ವಿಧಾನಸಭೆ, ವಿಧಾನಪರಿಷತ್ ಮತ್ತು ಸಂಸತ್‌ನಲ್ಲಿ ಅಂಗವಿಕಲರಿಗೆ ಮೀಸಲಾತಿ ನೀಡಬೇಕು. ವಿಧಾನಸೌಧದಲ್ಲಿ ಅಂಗವಿಕಲರ ಪರ ಧ್ವನಿ ಎತ್ತಲು ರಾಜಕೀಯದಲ್ಲೂ ಮೀಸಲಾತಿ ಒದಗಿಸಬೇಕು ಎಂದು ಒತ್ತಾಯಿಸಿದರು.ಹತ್ತಾರು ಅಂಧರು ನಗರದಿಂದ ಪಾದಯಾತ್ರೆ ಕೈಗೊಂಡಿದ್ದು, ಮರಿಯಮ್ಮನಹಳ್ಳಿಯಲ್ಲಿ ಅ. 16ರಂದು ವಾಸ್ತವ್ಯ ಹೂಡಲಿದ್ದಾರೆ. ಅ. 17ರಂದು ಕೂಡ್ಲಿಗಿ ಸಮೀಪ ವಾಸ್ತವ್ಯ ಹೂಡಲಿದ್ದು, ಬಳಿಕ ಪಾದಯಾತ್ರೆ ಮುಂದುವರಿಸಲಿದ್ದು, 25 ದಿನಗಳವರೆಗೆ ಪಾದಯಾತ್ರೆ ನಡೆಯಲಿದೆ.
ಸಮಿತಿ ಅಧ್ಯಕ್ಷ ಎಂ. ಶರೀಫ್, ಮುಖಂಡರಾದ ಶಬ್ಬೀರ್ ಅಹಮದ್, ಉಮಾ ಶಂಕರ್, ಪಿ.ಸಿ. ಶಾಂತಾ, ರಮೇಶ್ ಛಲವಾದಿ, ಮಂಜುನಾಥ, ಅಂಜಿನಪ್ಪ ಮತ್ತಿತರರಿದ್ದರು.