ಆರೋಗ್ಯ ಜಾಗೃತಿಗಾಗಿ ಘಾಟಿಕ್ಷೇತ್ರಕ್ಕೆ ಪಾದಯಾತ್ರೆ

| Published : Dec 23 2024, 01:04 AM IST

ಸಾರಾಂಶ

ದೊಡ್ಡಬಳ್ಳಾಪುರ: ನಿಯಮಿತ ನಡಿಗೆಯ ಅಭ್ಯಾಸದಿಂದ ಎಲ್ಲ ಅಂಗಾಂಗಗಳಿಗೂ ಶುದ್ಧರಕ್ತ ಸಂಚಾರವಾಗಿ ಒಟ್ಟಾರೆ ದೇಹದಲ್ಲಿ ನವಚೈತನ್ಯ ಮೂಡುತ್ತದೆ. ಆದರೆ ಇಂದಿನ ಪೀಳಿಗೆ ಸಹಜ ನಡಿಗೆ ಮರೆತು ಅತಿಯಾಗಿ ವಾಹನಗಳನ್ನು ಅವಲಂಬಿಸಿರುವುದರ ಜೊತೆಗೆ, ಜಂಕ್‌ ಫುಡ್ಸ್‌ ಹಾಗೂ ದುಶ್ಚಟಗಳಿಗೆ ದಾಸರಾಗಿ ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿರುವುದು ದುರಂತ ಎಂದು ನಾಗದಳ ಸಂಚಾಲಕ ಸಿ.ನಟರಾಜ ಹೇಳಿದರು.

ದೊಡ್ಡಬಳ್ಳಾಪುರ: ನಿಯಮಿತ ನಡಿಗೆಯ ಅಭ್ಯಾಸದಿಂದ ಎಲ್ಲ ಅಂಗಾಂಗಗಳಿಗೂ ಶುದ್ಧರಕ್ತ ಸಂಚಾರವಾಗಿ ಒಟ್ಟಾರೆ ದೇಹದಲ್ಲಿ ನವಚೈತನ್ಯ ಮೂಡುತ್ತದೆ. ಆದರೆ ಇಂದಿನ ಪೀಳಿಗೆ ಸಹಜ ನಡಿಗೆ ಮರೆತು ಅತಿಯಾಗಿ ವಾಹನಗಳನ್ನು ಅವಲಂಬಿಸಿರುವುದರ ಜೊತೆಗೆ, ಜಂಕ್‌ ಫುಡ್ಸ್‌ ಹಾಗೂ ದುಶ್ಚಟಗಳಿಗೆ ದಾಸರಾಗಿ ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿರುವುದು ದುರಂತ ಎಂದು ನಾಗದಳ ಸಂಚಾಲಕ ಸಿ.ನಟರಾಜ ಹೇಳಿದರು.

ನಾಗದಳ ನೇತೃತ್ವದಲ್ಲಿ ದೊಡ್ಡಬಳ್ಳಾಪುರದಿಂದ ಘಾಟಿಕ್ಷೇತ್ರಕ್ಕೆ ಆರೋಗ್ಯ ಜಾಗೃತಿಗಾಗಿ ಆಯೋಜಿಸಿದ್ದ 29ನೇ ವರ್ಷದ ಸ್ವಯಂ ಪ್ರೇರಿತ ಪಾದಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಯಾಣಕ್ಕೆ ಮೋಟಾರು ವಾಹನಗಳ ಅವಲಂಬನೆಯಿಂದ ಸಹಜ ನಡಿಗೆಯನ್ನು ನಾವು ಕಡೆಗಣಿಸಿರುವುದು ಅನಾರೋಗ್ಯದ ಮೂಲವಾಗಿದೆ. ಆಧುನಿಕ ಔಷಧದ ಪಿತಾಮಹ ಎಂದು ಪರಿಗಣಿಸಲಾಗಿರುವ ಹಿಪ್ಪೊಕ್ರೇಟ್ಸ್ ಕೂಡಾ ನಡೆಯುವುದು ಮನುಷ್ಯನ ಒಳ್ಳೆಯ ಔಷಧಿ ಎಂದು ಹೇಳಿದ್ದಾನೆ. ಭಾರತೀಯ ಪುರಾತನ ವೈದ್ಯಕೀಯ ಪದ್ಧತಿಗಳು ಕೂಡಾ ನಡಿಗೆಯನ್ನು ಪ್ರಕೃತಿ ಸಹಜ ಚಿಕಿತ್ಸೆ ಎಂದೇ ಪರಿಗಣಿಸಿವೆ ಎಂದು ತಿಳಿಸಿದರು.

ವಿಶ್ವಾದ್ಯಂತ ನಡೆದ ಹಲವಾರು ಸಮೀಕ್ಷೆಗಳು ದೃಢಪಡಿಸಿರುವಂತೆ ಕ್ರಮಬದ್ಧ ನಡಿಗೆ ಹವ್ಯಾಸ ಇರುವವರ ರೋಗನಿರೋಧಕ ಶಕ್ತಿ ಹಾಗೂ ಆಯಸ್ಸು ಚಟುವಟಿಕೆ ರಹಿತರಿಗೆ ಹೋಲಿಸಿದರೆ ಹೆಚ್ಚಿರುತ್ತದೆ. ನಡಿಗೆಯು ಯಾವುದೇ ಖರ್ಚುವೆಚ್ಚವಿಲ್ಲದೆ ಮಾಡಬಹುದಾದ ದೈಹಿಕ ಮಾನಸಿಕ ಶಕ್ತಿಯನ್ನು ವೃದ್ಧಿಸುವ ಸುಲಭದ ವ್ಯಾಯಾಮವಾಗಿದೆ ಎಂದರು.

ಪಾದಯಾತ್ರಿ ಪಾಂಡುರಂಗ ಮಾತನಾಡಿ, ಕೆಲವು ವರ್ಷಗಳ ಹಿಂದೆ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿ ಹತಾಶರಾಗಿದ್ದ ತಮಗೆ ಪ್ರತಿನಿತ್ಯ ನಾಗರಕೆರೆ ಕಟ್ಟೆಯ ಮೇಲೆ ತಪ್ಪದೆ ಮಾಡುವ ನಡಿಗೆ ಪರಿಣಾಮ ಮರು ಚೈತನ್ಯ ದೊರೆತು ಆರೋಗ್ಯ, ಜೀವನೋತ್ಸಾಹ ಇಮ್ಮಡಿಯಾಗಿದೆ ಎಂದು ಹೇಳಿದರು.

ನಾಗದಳದ ಎ.ವಿ. ರಘು, ನುನ್ನ ನಾಗರಾಜ್ ಮತ್ತಿತರರು ಮಾತನಾಡಿ, ಪರಿಸರ ಹಾಗೂ ಮನುಷ್ಯನ ಸಹಜ ಸಂಬಂಧಗಳ ಅನನ್ಯತೆಯನ್ನು ವಿವರಿಸಿದರು. ಕೊಂಗಾಡಿಯಪ್ಪ ಮುಖ್ಯರಸ್ತೆಯ ನೇಯ್ಗೆಯವರ ಬೀದಿ ಶಾಲೆ ಬಳಿಯಿಂದ ಪ್ರಾರಂಭವಾದ ಪಾದಯಾತ್ರೆ ಕಂಟನಕುಂಟೆ, ವಡ್ಡರಹಳ್ಳಿ, ಹಾಡೋನಹಳ್ಳಿ, ಪಾಲ್ ಪಾಲ್ ದಿನ್ನೆ ಮಾರ್ಗವಾಗಿ ಘಾಟಿ ದೇವಸ್ಥಾನ ತಲುಪಿತು. ನೂರಕ್ಕೂ ಹೆಚ್ಚು ಪಾದಯಾತ್ರಿಗಳಿದ್ದ ತಂಡದಲ್ಲಿ ಮಕ್ಕಳು, ಮಹಿಳೆಯರು ಹಾಗೂ ಹಿರಿಯ ನಾಗರೀಕರೂ ಉತ್ಸಾಹದಿಂದ ಭಾಗವಹಿಸಿದ್ದರು. ದೇವಸ್ಥಾನದಲ್ಲಿ ವಿಶೇಷ ದರ್ಶನಕ್ಕೆ ಅವಕಾಶ ನೀಡಲಾಗಿತ್ತು.

ನಾಗದಳದ ‌ಟಿ.ಎ.ವೆಂಕಟೇಶ್, ಎಸ್.ವಿಜಯೇಂದ್ರಪ್ರಸಾದ್‌, ಎಂ.ಪಿ.ಶಂಕರ್‌, .ಎಲ್.ಜನಾರ್ಧನ್, ರವಿರಾಮಪ್ಪ, ಕೆ.ನಂಜುಂಡಮೂರ್ತಿ, ರಾಘವೇಂದ್ರ, ವೆಂಕಟೇಶ್‌, ನರಸಿಂಹ, ಗೋಪಿ, ಉಮೇಶ್‌, ಸುರೇಶ್‌, ಸುಧೀರ್‌, ಶಿವಾನಂದ್‌, ಶ್ರೀನಾಥ್‌, ಸಿದ್ದಣ್ಣ, ಅಭಯಚೌಡೇಶ್ವರಿ ಮಹಿಳಾ ಸದಸ್ಯರೂ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.

22ಕೆಡಿಬಿಪಿ3-

ನಾಗದಳದ ನೇತೃತ್ವದಲ್ಲಿ ದೊಡ್ಡಬಳ್ಳಾಪುರದಿಂದ ಘಾಟಿ ಕ್ಷೇತ್ರಕ್ಕೆ 29ನೇ ವರ್ಷದ ಪಾದಯಾತ್ರೆಯಲ್ಲಿ ನೂರಾರು ಪಾದಯಾತ್ರಿಗಳು ಭಾಗವಹಿಸಿದ್ದರು.