ಸಾರಾಂಶ
ಕೊಟ್ಟೂರು: ಬಯಲುನಾಡಿನ ಶಕ್ತಿದೇವತೆ ಎಂದೇ ಹೆಸರಾದ ಪಕ್ಕದ ಜಗಳೂರು ತಾಲೂಕಿನ ಮಡ್ರಳ್ಳಿ ಚೌಡಮ್ಮದೇವಿಯ ರಥೋತ್ಸವ ಮಾ.೨೨ರಂದು ನಡೆಯಿಲಿರುವ ಹಿನ್ನೆಲೆಯಲ್ಲಿ ಮಡ್ರಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಸುಮಾರು ೫೦೦ಕ್ಕೂ ಹೆಚ್ಚು ಜನರು ಪಾದಯಾತ್ರೆ ಮೂಲಕ ಮಾ.೧೪ರಂದು ಕೊಟ್ಟೂರಿಗೆ ಆಗಮಿಸಿ ಜಾತ್ರೆಗೆ ಬೇಕಾದ ಧಾರ್ಮಿಕ ವಿಧಿ ವಿಧಾನ ಗಳೊಂದಿಗೆ ಸಾಮಾನುಗಳನ್ನು ಖರೀದಿಸಿದರು.ಸುಮಾರು ವರ್ಷಗಳಿಂದ ಮಡ್ರಳ್ಳಿಯಿಂದ ಈ ಕಾರಣಕ್ಕಾಗಿ ಪಾದಯಾತ್ರೆ ಮೂಲಕ ಕೊಟ್ಟೂರಿಗೆ ಬಂದು ಪೂಜಾ ಬಳಕೆಯ ಸಾಮಾನುಗಳನ್ನು ಖರೀದಿಸುವುದನ್ನು ಪದ್ಧತಿ ಮಾಡಿಕೊಂಡಿದ್ದು, ಅದರಂತೆಯೇ ಈ ಪದ್ಧತಿ ಮುಂದುವರಿಸಿದರು. ಚೌಡಮ್ಮ ದೇವಿಗೆ ಕೊಟ್ಟೂರಿನಿಂದ ಖರೀದಿಸಿದ ಕುಂಕುಮ, ಬಳೆ, ಭಂಡಾರ ಸಾಮಾನುಗಳಿಂದಲೇ ಪೂಜೆ ಮಾಡುವ ಕೈಂಕರ್ಯವನ್ನು ನೆರವೇರಿಸಲಿದ್ದಾರೆ.ಈ ದೇವಿಗೆ ಈ ಬಗೆಯ ಪೂಜಾ ಕೈಂಕರ್ಯದ ಮಡಿಲಕ್ಕಿ ಮಾಡಿಕೊಂಡು ಕೊಟ್ಟೂರು ಜನರ ಪೂಜಾಗಳೊಂದಿಗೆ ಗುರುವಾರ ರಾತ್ರಿ ೧೨ರ ನಂತರ ಪಾದಯಾತ್ರೆ ಮೂಲಕವೇ ಮಡ್ರಳ್ಳಿಗೆ ತೆರಳುವತ್ತ ಮುಂದಾದರು. ಶುಕ್ರವಾರ ಬೆಳಿಗ್ಗೆ ೫-೬ರ ಸುಮಾರಿಗೆ ಪಾದಯಾತ್ರಿಗಳು ಮಡ್ರಳ್ಳಿಗೆ ಪ್ರವೇಶ ಪಡೆಯುತ್ತಿದ್ದಂತೆ ಗ್ರಾಮದ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ವಿವಿಧ ಬಗೆಯ ವಾದ್ಯಗಳೊಂದಿಗೆ ಮಡ್ರಳ್ಳಿಗೆ ಬರಮಾಡಿಕೊಂಡು ಚೌಡಮ್ಮ ದೇವಸ್ಥಾನಕ್ಕೆ ತೆಗೆದುಕೊಂಡು ಹೋದರು.ಚೌಡಮ್ಮ ದೇವಸ್ಥಾನದ ಪೂಜಾ ಬಳಗದವರೊಂದಿಗೆ ಪುರುಷರು, ಮಹಿಳೆಯರು ಪಾದಯಾತ್ರೆ ಕೈಗೊಂಡು ಶ್ರೀದೇವಿಗೆ ತಮ್ಮ ಭಕ್ತಿ ಸಮರ್ಪಿಸಿದರು.ಮಡ್ರಳ್ಳಿ ಚೌಡಮ್ಮದೇವಿಯ ರಥೋತ್ಸವ ಮಾ.೨೨ರಂದು ನಡೆಯಲಿದೆ. ದೇವಿಗೆ ಮಡಿಲಕ್ಕಿಯ ಸಾಮಾನುಗಳನ್ನು ಖರೀದಿಸಲು ಕೊಟ್ಟೂರಿನ ಸಂತೆಗೆ ಬಂದಿದ್ದೇವೆ. ಕೊಟ್ಟೂರಿನಿಂದ ಪ್ರತಿವರ್ಷ ಈ ಬಗೆಯ ಸಾಮಾನುಗಳನ್ನು ಖರೀದಿಸಿ ದೇವಿಗೆ ಅರ್ಪಣೆ ಮಾಡುವುದು ಬಹು ವರ್ಷಗಳಿಂದ ನಡೆದುಕೊಂಡು ಬಂದಿದೆ. ಮಡ್ರಳ್ಳಿ ಮತ್ತು ಸುತ್ತಮುತ್ತಲಿನಿಂದ ನೂರಾರು ಸಂಖ್ಯೆಯ ಭಕ್ತರು ಪಾದಯಾತ್ರೆ ಮೂಲಕವೇ ಬಂದಿದ್ದು ಪುನಃ ಪಾದಯಾತ್ರೆ ಮೂಲಕವೇ ಮಡ್ರಳ್ಳಿಗೆ ತೆರಳುತ್ತೇವೆ ಎನ್ನುತ್ತಾರೆ ಮಡ್ರಳ್ಳಿ ಭಕ್ತ ಚೌಡಪ್ಪ.