ಸಾರಾಂಶ
ಕಸ್ತೂರ್ಬಾ ಆಸ್ಪತ್ರೆಯ ಉಪಶಾಮಕ ಔಷಧ ಮತ್ತು ಸಹಾಯಕ ಆರೈಕೆ ವಿಭಾಗವು ಮಾಹೆ ವಿದ್ಯಾರ್ಥಿ ವ್ಯವಹಾರಗಳ ಸಹಯೋಗದೊಂದಿಗೆ ಶನಿವಾರ ಜಾಗೃತಿ ವಾಕಾಥಾನ್ ಕಾರ್ಯಕ್ರಮ ಆಯೋಜಿಸಿ, ಜನರಲ್ಲಿ ಜಾಗೃತಿ ಮೂಡಿಸಿತು.
ಕನ್ನಡಪ್ರಭ ವಾರ್ತೆ ಉಡುಪಿ
ಪ್ರತಿ ವರ್ಷ ಅಕ್ಟೋಬರ್‌ನ 2ನೇ ಶನಿವಾರದಂದು, ಉಪಶಾಮಕ ಆರೈಕೆ ಅಗತ್ಯವಿರುವ ಜನರಿಗಾಗಿ ವಿಶ್ವ ಉಪಶಾಮಕ ದಿನವನ್ನು ಆಚರಿಸಲಾಗುತ್ತದೆ. ಅದರಂತೆ ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯ ಉಪಶಾಮಕ ಔಷಧ ಮತ್ತು ಸಹಾಯಕ ಆರೈಕೆ ವಿಭಾಗವು ಮಾಹೆ ವಿದ್ಯಾರ್ಥಿ ವ್ಯವಹಾರಗಳ ಸಹಯೋಗದೊಂದಿಗೆ ಶನಿವಾರ ಜಾಗೃತಿ ವಾಕಾಥಾನ್ ಕಾರ್ಯಕ್ರಮ ಆಯೋಜಿಸಿ, ಜನರಲ್ಲಿ ಜಾಗೃತಿ ಮೂಡಿಸಿತು.ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ, ಈ ದಿನವು ಜಾಗೃತಿ ಮೂಡಿಸುವುದಷ್ಟೇ ಅಲ್ಲ, ವಿಶ್ವಾದ್ಯಂತ ಉಪಶಾಮಕ ಆರೈಕೆ ಸೇವೆಗಳನ್ನು ಹೆಚ್ಚಿಸುವ ನೀತಿಗಳನ್ನು ಜಾರಿಗೊಳಿಸುವುದನ್ನು ಪ್ರತಿಪಾದಿಸುತ್ತದೆ ಎಂದರು.ವಾಕಥಾನ್‌ಗೆ ಚಾಲನೆ ನೀಡಿದ ಅದಾನಿ ಪವರ್ ಲಿಮಿಟೆಡ್‌ನ ಸ್ಟೇಷನ್ ಹೆಡ್ ಶ್ರೀಧರ್ ಗಣೇಶನ್, ಒಟ್ಟಾಗಿ, ಗಂಭೀರವಾದ ಆರೋಗ್ಯ ಸವಾಲುಗಳನ್ನು ಎದುರಿಸುತ್ತಿರುವವರ ಜೀವನದಲ್ಲಿ ನಾವು ಬದಲಾವಣೆಯನ್ನು ಮಾಡಬಹುದು ಎಂದು ಹೇಳಿದರು.ಕಾರ್ಯಕ್ರಮದ ಗೌರವ ಅಥಿತಿಯಾಗಿದ್ದ ನಾಡೋಜ ಡಾ.ಜಿ.ಶಂಕರ್, ಮಾಹೆಯಿಂದ ಆರಂಭಿಸುತ್ತಿರುವ ಪಾಲಿಯೇಟಿವ್ ಕೇಂದ್ರದ ನಿರ್ಮಾಣಕ್ಕೆ ಗಣನೀಯ ದೇಣಿಗೆ ನೀಡುವುದಾಗಿ ಘೋಷಿಸಿದರು.ಅಧ್ಯಕ್ಷತೆ ವಹಿಸಿದ್ದ ಮಾಹೆಯ ಆರೋಗ್ಯ ವಿಜ್ಞಾನಗಳ ಸಹಕುಲಪತಿ ಡಾ. ಶರತ್ ರಾವ್, ಮಾಹೆ ಮಣಿಪಾಲವು ಕರ್ನಾಟಕದ ಅತಿ ದೊಡ್ಡ ಪಾಲಿಯೇಟಿವ್ ಕೇಂದ್ರವನ್ನು ನಿರ್ಮಿಸುತ್ತಿದ್ದು, ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ ಎಂದು ಹೇಳಿದರು.ಮಾಹೆ ಮಣಿಪಾಲ ಬೋಧನಾ ಆಸ್ಪತ್ರೆಯ ಸಿಓಓ ಡಾ. ಆನಂದ್ ವೇಣುಗೋಪಾಲ್ ಉಪಸ್ಥಿತರಿದ್ದರು. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಸ್ವಾಗತಿಸಿದರು. ಉಪಶಾಮಕ ಔಷಧ ವಿಭಾಗದ ಮುಖ್ಯಸ್ಥ ಡಾ.ನವೀನ್ ಎಸ್. ಸಾಲಿನ್ಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಡುಪಿಯ ಡಾ.ಟಿ.ಎಂ.ಎ.ಪೈ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶಶಿಕಿರಣ್ ಉಮಾಕಾಂತ್ ವಂದಿಸಿದರು. ಉಪಶಾಮಕ ವೈದ್ಯಶಾಸ್ತ್ರದ ಸಹ ಪ್ರಾಧ್ಯಾಪಕರಾದ ಡಾ.ಕೃತಿಕಾ ರಾವ್ ಕಾರ್ಯಕ್ರಮ ನಿರೂಪಿಸಿದರು.ವಾಕಾಥಾನ್ ಉಡುಪಿಯ ಬೋರ್ಡ್ ಹೈಸ್ಕೂಲ್‌ನಲ್ಲಿ ಆರಂಭವಾಗಿ ಕೆ.ಎಂ. ಮಾರ್ಗ, ನ್ಯಾಯಾಲಯ ಮತ್ತು ಜೋಡುಕಟ್ಟೆ ವೃತ್ತದ ಮಾರ್ಗವಾಗಿ ಉಡುಪಿಯ ಡಾ.ಟಿಎಂಎ ಪೈ ಆಸ್ಪತ್ರೆಯಲ್ಲಿ ಮುಕ್ತಾಯಗೊಂಡಿತು. ವೈದ್ಯರು, ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಉಪಶಾಮಕ ಆರೈಕೆ ರೋಗಿಗಳ ಕುಟುಂಬಗಳು ಸೇರಿದಂತೆ 500ಕ್ಕೂ ಹೆಚ್ಚು ಜನರು ಪಾಲ್ಗೊಂಡರು.