ಸಾರಾಂಶ
ಹಾವೇರಿ: ಭಾರತದ ಉಕ್ಕಿನ ಮನುಷ್ಯರೆಂದೇ ಖ್ಯಾತಿಯಾಗಿರುವ ಸರ್ದಾರ್ ವಲ್ಲಭಭಾಯಿ ಪಟೇಲ್‌ರ 150ನೇ ಜನ್ಮದಿನದ ನಿಮಿತ್ತ ನಗರದಲ್ಲಿ ನ.10ರಂದು ಸರ್ದಾರ್ 150 ಏಕತಾ ನಡಿಗೆ ಅಂಗವಾಗಿ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮೇರಾ ಯುವ ಭಾರತ್ ಕೇಂದ್ರದ ಅಧಿಕಾರಿ ಬುಕ್ಯಾ ಸಂಜೀವ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಕತಾ ಹರಿಕಾರ ಸರ್ದಾರ್ ವಲ್ಲಭಭಾಯಿ ಪಟೇಲ್‌ರ ಜನ್ಮದಿನೋತ್ಸವ ಪ್ರಯುಕ್ತ ಜನ ಭಾಗಿದಾರಿ ಇನ್ ರಾಷ್ಟ್ರ ನಿರ್ಮಾಣ ಘೋಷ ವಾಕ್ಯದೊಂದಿಗೆ ಕೇಂದ್ರ ಸರ್ಕಾರದ ಯುವ ವ್ಯವಹಾರಗಳು ಹಾಗೂ ಕ್ರೀಡಾ ಸಚಿವಾಲಯವು ದೇಶಾದ್ಯಂತ ಸರ್ದಾರ್ 150 ಏಕತಾ ನಡಿಗೆಯನ್ನು ಹಮ್ಮಿಕೊಂಡಿದೆ. ಯುವಕರಲ್ಲಿ ಏಕತೆ, ದೇಶಭಕ್ತಿ ಮತ್ತು ನಾಗರೀಕ ಜವಾಬ್ದಾರಿ ಮನೋಭಾವನೆಯಲ್ಲಿ ಬೆಳೆಸಲು ಮುಂದಡಿ ಇಟ್ಟಿದೆ. ಈ ಅಭಿಯಾನದ ಮೂಲಕ ಯುವಕರಿಗೆ ಏಕ್ ಭಾರತ್ ಆತ್ಮನಿರ್ಭರ ಭಾರತ್ ಎಂಬ ಆದರ್ಶಗಳನ್ನು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರೇರೇಪಿಸಲಾಗುತ್ತಿದೆ ಎಂದರು.ಅಭಿಯಾನ ಕಳೆದೊಂದು ತಿಂಗಳ ಹಿಂದೆಯೇ ಆರಂಭವಾಗಿದ್ದು, ಯುವಜನತೆಯಲ್ಲಿ ಜಾಗೃತಿ ಮೂಡಿಸಲು ಪ್ರಬಂಧ, ಚರ್ಚಾಸ್ಪರ್ಧೆ, ಸರ್ದಾರ್ ಪಟೇಲರ ಜೀವನ ಕುರಿತ ವಿಚಾರ ಸಂಕಿರಣಗಳು, ಬೀದಿನಾಟಕ, ಪಾದಯಾತ್ರೆ ಹೀಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರಲಾಗುತ್ತಿದೆ. ಈ ಹಿನ್ನೆಲೆ ನೆಹರು ಯುವ ಕೇಂದ್ರದಿಂದ ನ. 10ರಂದು ಬೆಳಗ್ಗೆ 9ಕ್ಕೆ ಜಿ.ಎಚ್ ಕಾಲೇಜಿನಲ್ಲಿ ಅಭಿಯಾನದ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಅವರು ಪಾಲ್ಗೊಳ್ಳಲಿದ್ದಾರೆ. ನಂತರ ಬೆಳಗ್ಗೆ 10.30ಕ್ಕೆ ಜಿ.ಎಚ್.ಕಾಲೇಜಿನಿಂದ ಏಕತಾ ನಡಿಗೆ ಅಂಗವಾಗಿ ಪಾದಯಾತ್ರೆ ನಡೆಸಲಾಗುವುದು. ಈ ನಡಿಗೆಯು ಇಜಾರಿಲಕಮಾಪುರ ದುಂಡಿ ಬಸವೇಶ್ವರ ದೇವಸ್ಥಾನ, ಮುನ್ಸಿಪಲ್ ಹೈಸ್ಕೂಲ್ ರೋಡ್, ಜೆ.ಎಚ್ ಪಟೇಲ್ ವೃತ್ತ, ಜೆ.ಪಿ. ವೃತ್ತ, ಹೊಸಮನಿ ಸಿದ್ದಪ್ಪ ವೃತ್ತ ಮಾರ್ಗವಾಗಿ ಸಂಚರಿಸಿ ಮರಳಿ ಜಿ.ಎಚ್. ಕಾಲೇಜು ತಲುಪುತ್ತದೆ ಎಂದರು.ಪಾದಯಾತ್ರೆಯಲ್ಲಿ ಜಿ.ಎಚ್. ಕಾಲೇಜು ವಿದ್ಯಾರ್ಥಿಗಳು, ಎನ್‌ಎಸ್‌ಎಸ್, ಎನ್‌ಸಿಸಿ, ಹಾವೇರಿ ವಿಶ್ವವಿದ್ಯಾಲಯ ವ್ಯಾಪ್ತಿಯ ಆಯ್ದ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಪಾದಯಾತ್ರೆ ನಡೆಯುವ ಮಾರ್ಗದುದ್ದಕ್ಕೂ ಮುನ್ನೆಚ್ಚರಿಕೆಯಾಗಿ ಕುಡಿಯುವ ನೀರು, ಜ್ಯೂಸ್, ಹಣ್ಣುಹಂಪಲು, ಚಾಕಲೇಟ್ ನೀಡುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.ಮಂಜುನಾಥ ಗಾಣಿಗೇರ ಮಾತನಾಡಿದರು. ಎನ್‌ಎಸ್‌ಎಸ್ ಜಿಲ್ಲಾ ಸಂಯೋಜನಾಧಿಕಾರಿ ಶಮಂತಕುಮಾರ ಕೆ.ಎಸ್., ಸಂತೋಷ ಆಲದಕಟ್ಟಿ, ನಂಜುಂಡೇಶ ಕಳ್ಳೇರ, ಗಣೇಶ ರಾಯ್ಕರ, ಹೇಮಗಿರಿ ಅಂಗಡಿ ಇದ್ದರು.