ಆರೋಗ್ಯಕ್ಕಾಗಿ ಕಾಲ್ನಡಿಗೆ: ಪಾಂಡವಪುರದಿಂದ ಮೇಲುಕೋಟೆಗೆ ಪಾದಯಾತ್ರೆ

| Published : Nov 12 2025, 01:45 AM IST

ಸಾರಾಂಶ

ಯೋಗ ಸಮಿತಿಯ 14 ಮಂದಿ ಸದಸ್ಯರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಭಾಗವಹಿಸಿದ್ದ ಪ್ರತಿಯೊಬ್ಬ ಸದಸ್ಯರು ಬಹಳ ಉಲ್ಲಾಸ, ಉತ್ಸಾಹದಿಂದಲೇ ನಡಿಗೆಯಲ್ಲಿ ಪಾಲ್ಗೊಂಡು ಯೋಗದಿಂದ ಆರೋಗ್ಯ ಎಂಬುದನ್ನು ಹಳ್ಳಿ ಜನರಲ್ಲಿ ಜಾಗೃತಿ ಮೂಡಿಸಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಆರೋಗ್ಯಕ್ಕಾಗಿ ಕಾಲ್ನಡಿಗೆ ಘೋಷ ವಾಕ್ಯದಡಿ ಪಟ್ಟಣದ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಈಚೆನೆ ಪಾಂಡವಪುರದಿಂದ ಮೇಲುಕೋಟೆಗೆ ಪಾದಯಾತ್ರೆ ನಡೆಯಿತು.

ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ಹಾರೋಹಳ್ಳಿ ಎಸ್.ಜಯರಾಂ ನೇತೃತ್ವದಲ್ಲಿ ನಡೆದ ಪಾದಯಾತ್ರೆಗೆ ಬೆಳಗಿನ ಜಾವಾ 4.30ಕ್ಕೆ ಪಟ್ಟಣದ ಶಾಂತಿನಗರದ ಸಾಯಿ ಮಂದಿರದಲ್ಲಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು.

ಬಳಿಕ ಪಾದಯಾತ್ರೆಯು ಶಾಂತಿನಗರದ ಮಹಾಂಕಾಳೇಶ್ವರಿ ದೇವಸ್ಥಾನ, ಅರಳೀಕಟ್ಟೆ, ವಿಶ್ವೇಶ್ವರಯ್ಯ ನಾಲೆಯ ಏರಿ ಮೇಲೆ ಸಾಗಿ ಹಿರೇಮರಳಿ ಗೇಟ್, ಬನಘಟ್ಟ, ಟಿ.ಎಸ್.ಛತ್ರ-ಇಂಗಲಗುಪ್ಪೆ, ಮಹದೇಶ್ವರಪುರ, ಬೆಳ್ಳಾಳೆ ಮಾರ್ಗವಾಗಿ ಸಂಚರಿಸಿ ನಂತರ ಮಾಣಿಕ್ಯನಹಳ್ಳಿ, ಗೌಡಗೆರೆ ಮೂಲಕ ಮೇಲುಕೋಟೆ ತಲುಪಿತು.

ಯೋಗ ಸಮಿತಿಯ 14 ಮಂದಿ ಸದಸ್ಯರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಭಾಗವಹಿಸಿದ್ದ ಪ್ರತಿಯೊಬ್ಬ ಸದಸ್ಯರು ಬಹಳ ಉಲ್ಲಾಸ, ಉತ್ಸಾಹದಿಂದಲೇ ನಡಿಗೆಯಲ್ಲಿ ಪಾಲ್ಗೊಂಡು ಯೋಗದಿಂದ ಆರೋಗ್ಯ ಎಂಬುದನ್ನು ಹಳ್ಳಿ ಜನರಲ್ಲಿ ಜಾಗೃತಿ ಮೂಡಿಸಿದರು.

ಮಾರ್ಗ ಮಧ್ಯೆ ಟಿ.ಎಸ್.ಛತ್ರ, ಗೌಡಗೆರೆ ಗ್ರಾಮದ ಬಳಿ ಟೀ ಕುಡಿದು ರಿಲ್ಯಾಕ್ಸ್ ಮಾಡಿದರು. ಜತೆಗೆ ಗೌಡಗೆರೆಯ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಕೆಲ ಹೊತ್ತು ವೀಕ್ಷಣೆ ಮಾಡಿದರು. ಮೇಲುಕೋಟೆ ತಲುಪಿದ ಬಳಿಕ ಶ್ರೀ ಚಲುವನಾರಾಯಣಸ್ವಾಮಿ ದರ್ಶನ ಪಡೆದು ನಂತರ ಬಸ್ ಮೂಲಕ ಪಾಂಡವಪುರಕ್ಕೆ ವಾಪಸ್ಸಾದರು.

ಪಾದಯಾತ್ರೆ ಮುಕ್ತಾಯ ವೇಳೆ ಪತಂಜಲಿ ಯೋಗ ಸಮಿತಿ ಸದಸ್ಯರನ್ನು ಮೇಲುಕೋಟೆ ಚಲುವನಾರಾಯಣಸ್ವಾಮಿ ದೇವಸ್ಥಾನದ ಬಳಿ ಉಪವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್ ಭೇಟಿ ಮಾಡಿ ಶುಭಕೋರಿದರು. ಈ ವೇಳೆ ಮಾತನಾಡಿ, ಪ್ರತಿಯೊಬ್ಬ ಮನುಷ್ಯನಿಗೂ ಆರೋಗ್ಯ ಅತಿ ಮುಖ್ಯ. ದೇಹದ ಆರೋಗ್ಯ ಕೂಡ ಮುಖ್ಯವಾಗಿದೆ. ಹೀಗಾಗಿ ಯೋಗ, ನಿರಂತರ ವ್ಯಾಯಾಮ ಮಾಡಬೇಕಿದೆ. ಯೋಗ ಮಾಡುವುದರಿಂದ ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆಯಂತಹ ಇತರ ಕಾಯಿಲೆಗಳು ದೂರವಾಗುತ್ತಿವೆ ಎಂದರು.