ನಡಿಗೆ ಆರೋಗ್ಯ ರಕ್ಷಣೆಗೆ ಪೂರಕ: ನಟರಾಜ

| Published : Jan 02 2024, 02:15 AM IST

ಸಾರಾಂಶ

ದೊಡ್ಡಬಳ್ಳಾಪುರ: ನಡಿಗೆ ಆರೋಗ್ಯ ರಕ್ಷಣೆಗೆ ಸಹಕಾರಿ. ನಡೆಯುವುದರಿಂದ ದೇಹದಲ್ಲಿ ನವಚೈತನ್ಯ ಮೂಡುತ್ತದೆ. ಯುವಪೀಳಿಗೆ ಸಹಜ ನಡಿಗೆಯನ್ನು ಮರೆತ ಪರಿಣಾಮ ಚಟುವಟಿಕೆರಹಿತ ಜೀವನದಿಂದ ಹಲವು ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ನಾಗದಳ ಸಂಚಾಲಕ ಸಿ.ನಟರಾಜ ಹೇಳಿದರು.

ದೊಡ್ಡಬಳ್ಳಾಪುರ: ನಡಿಗೆ ಆರೋಗ್ಯ ರಕ್ಷಣೆಗೆ ಸಹಕಾರಿ. ನಡೆಯುವುದರಿಂದ ದೇಹದಲ್ಲಿ ನವಚೈತನ್ಯ ಮೂಡುತ್ತದೆ. ಯುವಪೀಳಿಗೆ ಸಹಜ ನಡಿಗೆಯನ್ನು ಮರೆತ ಪರಿಣಾಮ ಚಟುವಟಿಕೆರಹಿತ ಜೀವನದಿಂದ ಹಲವು ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ನಾಗದಳ ಸಂಚಾಲಕ ಸಿ.ನಟರಾಜ ಹೇಳಿದರು.

ನಾಗದಳ ನೇತೃತ್ವದಲ್ಲಿ ದೊಡ್ಡಬಳ್ಳಾಪುರದಿಂದ ಘಾಟಿಕ್ಷೇತ್ರಕ್ಕೆ ಆರೋಗ್ಯ ಜಾಗೃತಿಗಾಗಿ ಭಾನುವಾರ ನಡೆದ 28ನೇ ವರ್ಷದ ಸ್ವಯಂ ಪ್ರೇರಿತ ಪಾದಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಗತ್ತಿನಲ್ಲಿ ಬದಲಾದ ಆಧುನಿಕ ಜೀವನ ಶೈಲಿಯಲ್ಲಿ ಅತಿಯಾದ ಮೊಬೈಲ್‌, ಟಿವಿ, ಕಂಪ್ಯೂಟರ್‌ ನಂತಹ ತಾಂತ್ರಿಕ ಉಪಕರಣಗಳ ಬಳಕೆಯಿಂದ ಗಂಟೆಗಟ್ಟಲೆ ಕುಳಿತೇ ಮಾಡುವಂತಹ ಕೆಲಸಗಳು ಹೆಚ್ಚಾಗಿವೆ, ಜೊತೆಗೆ ಮನುಷ್ಯ ಸಹಜವಾದ ನಡಿಗೆಯನ್ನು ಕಡೆಗಣಿಸಿ ಎಲ್ಲರೀತಿಯ ಪ್ರಯಾಣಕ್ಕೆ ಮೋಟಾರು ವಾಹನಗಳಿಗೆ ದಾಸರಾಗಿರುವುದರಿಂದ, ಇಂದು ಬಹುಪಾಲು ಜನರು ಸಿಟ್ಟಿಂಗ್‌ ಡಿಸೀಸ್‌ ಎಂಬ ಘೋರ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದರು.

ಚಟುವಟಿಕೆರಹಿತರಿಗೆ ಹೋಲಿಸಿದರೆ ಕ್ರಮಬದ್ಧ ನಡಿಗೆ ಹವ್ಯಾಸ ಇರುವವರಲ್ಲಿ ಸಾವಿನ ಪ್ರಮಾಣ ಕೂಡ ಕಡಿಮೆ. ನಡೆಯುವುದು ಯಾವುದೇ ಖರ್ಚು ವೆಚ್ಚವಿಲ್ಲದೆ ಮಾಡಬಹುದಾದ ದೈಹಿಕ ಮಾನಸಿಕ ಶಕ್ತಿಯನ್ನು ವೃದ್ಧಿಸುವ ಸುಲಭದ ವ್ಯಾಯಾಮವಾಗಿದೆ. ಶ್ವಾಸಕೋಶದ ಶಕ್ತಿಯನ್ನು ವೃದ್ಧಿಸಿಕೊಳ್ಳಲು ನಡಿಗೆ ದಿವ್ಯೌಷಧಿ ಆಗಿದೆ ಎಂದರು.

ಡಾ.ಎನ್.ಕೆ. ಮುಕುಂದ, ನಾಗದಳದ ಹಿರಿಯ ಸದಸ್ಯ ಎ.ವಿ.ರಘು ಮಾತನಾಡಿ, ಹಿಂದಿನ ಕಾಲದಲ್ಲಿ ದೇವಾಲಯಗಳಿಗೆ ಹೋಗಲು ಪಾದಯಾತ್ರೆಯಲ್ಲಿ ಹೋಗುವುದು ಶ್ರೇಷ್ಠವೆಂಬ ಅಭಿಪ್ರಾಯ ಇತ್ತು. ಅದು ಆರೋಗ್ಯ ಸ್ನೇಹಿ ಬದುಕಿಗೆ ಕಂಡುಕೊಂಡ ಮಾರ್ಗವಾಗಿತ್ತು ಎಂದರು.

ಕೊಂಗಾಡಿಯಪ್ಪ ಮುಖ್ಯರಸ್ತೆಯ ನೇಯ್ಗೆಯವರ ಬೀದಿ ಪಾಠಶಾಲೆ ಬಳಿಯಿಂದ ಆರಂಭವಾದ ನಡಿಗೆ 16 ಕಿ.ಮೀ. ಕ್ರಮಿಸಿ ಘಾಟಿ ದೇವಸ್ಥಾನ ತಲುಪಿತು. ತಂಡದಲ್ಲಿ ಮಕ್ಕಳು, ಮಹಿಳೆಯರು ಹಾಗೂ ಹಿರಿಯ ನಾಗರಿಕರೂ ಉತ್ಸಾಹದಿಂದ ಭಾಗವಹಿಸಿದ್ದರು.

ನಾಗದಳದ ನುನ್ನ ನಾಗರಾಜ್, ‌ಟಿ.ಎ.ವೆಂಕಟೇಶ್, ಎಸ್.ವಿಜಯೇಂದ್ರಪ್ರಸಾದ್‌, ಎ.ಎಲ್.ಜನಾರ್ಧನ್, ಕೆ.ಎಸ್.ರಾಜ, ರವಿರಾಮಪ್ಪ, ಶ್ರೀಕಾಂತ್‌, ಕೆ.ನಂಜುಂಡಮೂರ್ತಿ, ರಾಘವೇಂದ್ರ, ವೆಂಕಟೇಶ್‌, ಎಸ್.‌ ಜನಾರ್ಧನ್‌, ಗೋಪಿ, ಉಮೇಶ್‌, ಸುಧೀರ್‌, ಪುಷ್ಪಶಿವಶಂಕರ್‌, ನಗರಸಭಾ ಸದಸ್ಯೆ ಎಸ್.‌ ವತ್ಸಲ ಮತ್ತಿತರರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.31ಕೆಡಿಬಿಪಿ2-

ದೊಡ್ಡಬಳ್ಳಾಪುರದಿಂದ ಘಾಟಿ ಸುಬ್ರಹ್ಮಣ್ಯಕ್ಕೆ ಭಾನುವಾರ ಸ್ವಯಂಪ್ರೇರಿತ ಪಾದಯಾತ್ರೆ ನಡೆಯಿತು.