ಸಾರಾಂಶ
ಕನ್ನಡಪ್ರಭ ವಾರ್ತೆ ಪಾಲಬಾವಿ (ತಾ.ರಾಯಬಾಗ)
ಬಿರು ಬೇಸಿಗೆ ಪ್ರತಾಪಕ್ಕೆ ಸಿಲುಕಿ ಜನರು ಹೈರಾಣಾಗಿದ್ದಾರೆ. ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ತೀವ್ರವಾಗಿದೆ. ಮಹಿಳೆಯರು ಒಂದು ಬಿಂದಿಗೆ ನೀರಿಗಾಗಿ ಕೊಳವೆಬಾವಿ, ಬೋರ್‌ವೆಲ್‌ಗಳನ್ನು ಹುಡುಕಿಕೊಂಡು ಕಿಮೀಗಟ್ಟಲೆ ದೂರ ಅಲೆದಾಡುತ್ತಿದ್ದಾರೆ. ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ಕೆಲಸ ಬಿಟ್ಟು ನೀರಿಗಾಗಿಯೇ ಅಲೆಯುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ.ರಾಯಬಾಗ ತಾಲೂಕಿನ ಪಾಲಬಾವಿ ಸೇರಿ ಹಲವು ಹಳ್ಳಿಗಳಲ್ಲೂ ಇದೇ ಪರಿಸ್ಥಿತಿ ಉಂಟಾಗಿದೆ. ಜೀವಜಲದ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಕಳೆದ 2023ರ ಡಿಸೆಂಬರ್‌ನಲ್ಲಿ ಜಿಪಂ ಸಿಇಒ ನಿರ್ದೇಶನಂತೆ ಪ್ರತಿ ಗ್ರಾಪಂಗೆ ಕುಡಿಯುವ ನೀರಿನ ಮೂಲಗಳನ್ನು ಕಂಡು ಹಿಡಿದು, ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ಪಿಡಿಒಗಳಿಗೆ ನಿರ್ದೇಶನ ನೀಡಲಾಗಿತ್ತು. ಆದರೆ, ರಾಯಬಾಗ ತಾಲೂಕು ಪಾಲಬಾವಿ ಗ್ರಾಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯೂ ಸಮರ್ಪಕವಾಗಿಲ್ಲ.
ಹೀಗಾಗಿ, ಸಾರ್ವಜನಿಕರು ಗ್ರಾಪಂ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅವಶ್ಯಕತೆ ಇರುವ ವಾರ್ಡ್‌ಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡದಿರುವುದು ಜೀವಜಲಕ್ಕೆ ಪರದಾಡುವಂತಾಗಿದೆ. ಕುಡಿವ ನೀರನ್ನು ಟ್ಯಾಂಕರ್ ಮೂಲಕ ಪೂರೈಕೆ ಮಾಡುವುದಕ್ಕೆ ಆಲಖನೂರ ಗ್ರಾಮದ ವ್ಯಕ್ತಿಯೊಬ್ಬರಿಗೆ ಟೆಂಡರ್ ನೀಡಲಾಗಿದೆ. ಆದರೆ, ನೀರು ಪೂರೈಕೆ ಮಾತ್ರ ಇನ್ನೂ ಆಗುತ್ತಿಲ್ಲ.----------
ಕೋಟ್....ಪಾಲಬಾವಿಯಲ್ಲಿ ಕುಡಿಯುವ ನೀರಿನ ಬಗ್ಗೆ ನಿಗಾವಹಿಸಲಾಗಿದೆ. ಕುಡಿಯುವ ನೀರಿನ ಬಾಬತ್ತು ತಹಸೀಲ್ದಾರ್ ಅವರ ಗಮನಕ್ಕೆ ತರಲಾಗಿದೆ. ಅವರಿಗೆ ವರದಿ ಕೂಡ ಮಾಡಲಾಗಿದೆ. ತಾಲೂಕಿನ ಆಲಖನೂರ ಗ್ರಾಮದ ಗಡ್ಡೆ ಎನ್ನುವವರಿಗೆ ನೀರು ಸರಬರಾಜು ಮಾಡುವ ಟೆಂಡರ್ ಆಗಿದೆ. ತಹಸೀಲ್ದಾರ್‌ರು ಆದೇಶ ಮಾಡಿದ ತಕ್ಷಣ ಪಾಲಬಾವಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುವುದು.
- ಶ್ರೀಕಾಂತ ಪಾಟೀಲ, ಪಿಡಿಒ ಗ್ರಾಪಂ ಪಾಲಬಾವಿ.ಗ್ರಾಮದಲ್ಲಿ ನೀರಿನ ಹಾಹಾಕಾರ ಬಹಳಷ್ಟು ಆಗಿದೆ. ತಹಸೀಲ್ದಾರ್ ಸಾಹೇಬರಿಗೆ ವಿನಂತಿ ಮಾಡಿಕೊಳ್ಳಲಾಗಿದೆ. ಟೆಂಡರ್ ಪಡೆದವರು ಕುಡಿಯುವ ನೀರು ಸರಬರಾಜು ಮಾಡುತ್ತಾರೆ. ಈಗಾಗಲೇ ನಾವು ವೈಯಕ್ತಿಕವಾಗಿ ಟ್ಯಾಂಕರ್ ಮೂಲಕ ಅವಶ್ಯಕತೆ ಇರುವ ವಾರ್ಡ್‌ಗಳಲ್ಲಿ ಸಾಧ್ಯವಾದಷ್ಟು ಕುಡಿಯುವ ನೀರು ಸರಬರಾಜು ಮಾಡುತ್ತಿದ್ದೇವೆ.- ಶೋಭಾ ಕುರಬೆಟ್ಟಿ, ಅಧ್ಯಕ್ಷರು ಗ್ರಾಪಂ ಪಾಲಬಾವಿ.