ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ವಕ್ಫ್ ಆಸ್ತಿ ಖಾತೆ ಬದಲಾವಣೆಯಲ್ಲಿ ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ವಿಜಯಪುರ ಜಿಲ್ಲೆಯ ಪ್ರಗತಿ ಕುಂಠಿತವಾಗಿದೆ. ಮುಂದಿನ ಒಂದು ತಿಂಗಳೊಳಗಾಗಿ ವಕ್ಫ್ ಖಾತೆ ಬದಲಾವಣೆ, ಫ್ಲ್ಯಾಗಿಂಗ್ ಸೇರಿದಂತೆ ಸೂಕ್ತ ಪ್ರಗತಿ ಸಾಧಿಸಬೇಕು ಎಂದು ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಬಿ.ಝೆಡ್ ಜಮೀರ್ ಅಹ್ಮದ ಖಾನ್ ಸೂಚಿಸಿದರು.ನಗರದ ಜಿಪಂ ಸಭಾಂಗಣದಲ್ಲಿ ಜರುಗಿದ ವಕ್ಫ್ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಾದ್ಯಂತ ಇರುವ 2148 ಆಸ್ತಿಗಳ ಪೈಕಿ 109 ಆಸ್ತಿಗೆ ಸಂಬಂಧಿಸಿದಂತೆ ಮಾತ್ರ ಖಾತೆ ಬದಲಾವಣೆ ಮಾಡಲಾಗಿದೆ. ಉಳಿದ 2039 ಖಾತೆ ಬದಲಾವಣೆ ಬಾಕಿ ಇದೆ. ಶೇ.5.07 ರಷ್ಟು ಮಾತ್ರ ಪ್ರಗತಿ ಸಾಧಿಸಲಾಗಿದೆ. ಬೇರೆ ಜಿಲ್ಲೆಗಳಲ್ಲಿ ಈ ಪ್ರಮಾಣ ಹೆಚ್ಚಾಗಿದೆ ಎಂದರು.ವಿಜಯಪುರ ಜಿಲ್ಲೆಯಲ್ಲಿ ಮಾತ್ರ ಪ್ರಗತಿ ಕುಂಠಿತವಾಗಿದ್ದು, ಜಿಲ್ಲೆಯ 108 ಆಸ್ತಿಗಳ ಫ್ಲ್ಯಾಗಿಂಗ್ ಸಹ ಬಾಕಿ ಉಳಿದಿದೆ. ಜಿಲ್ಲೆಯ ವಕ್ಫ್ ಅಧಿಕಾರಿಗಳು, ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸೂಕ್ತ ಸಮನ್ವಯತೆ ಸಾಧಿಸಿಕೊಂಡು ಖಾತೆ ಬದಲಾವಣೆ ಹಾಗೂ ಪ್ಲ್ಯಾಗಿಂಗ್ ಕಾರ್ಯದ ಅನುಸರಣೆ ಮಾಡಬೇಕು. ಮುಂದಿನ 45 ದಿನಗಳೊಳಗಾಗಿ ಖಾತೆ ಬದಲಾವಣೆ ಹಾಗೂ ಫ್ಲ್ಯಾಗಿಂಗ್ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ವಿವಿಧ ತಾಲೂಕುಗಳಲ್ಲಿ ಅವಶ್ಯವಿರುವ ಸ್ಮಶಾನ ಜಮೀನಿಗೆ ಸಂಬಂಧಿಸಿದಂತೆ ಸೂಕ್ತ ಪರಿಶೀಲನೆ ನಡೆಸಿ, ಸರ್ಕಾರಿ ಜಾಗ ಲಭ್ಯವಿಲ್ಲದಿದ್ದಲ್ಲಿ ಖಾಸಗಿ ಜಮೀನು ಖರೀದಿ ಮಾಡಿ, ಸ್ಮಶಾನಕ್ಕೆ ಜಮೀನು ಒದಗಿಸುವಂತೆ ಸೂಚಿಸಿದರು. ಖಾಸಗಿ ಜಮೀನು ಖರೀದಿಯಲ್ಲಿ ಅನುದಾನದ ಸಮಸ್ಯೆಗಳು ಬಂದಲ್ಲಿ ನನ್ನ ಗಮನಕ್ಕೆ ತರುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದ ಅವರು, ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.ಗೈರಾದ ಇಒ ಅಮಾನತಿಗೆ ಸೂಚನೆ:
ಸಭೆಗೆ ಗೈರು ಹಾಜರಾಗಿರುವ ಸಿಂದಗಿ ತಾಲೂಕು ಪಂಚಾಯತಿ ಇಒ ಅಮಾನತುಗೊಳಿಸುವಂತೆ ಸೂಚಿಸಿದ ಅವರು, ವಿವಿಧ ಸಚಿವರು, ಶಾಸಕರ ಸಭೆ, ಕೆಡಿಪಿ ಸಭೆಗಳಿಗೆ ಗೈರು ಹಾಜರಾಗುವ ಅಧಿಕಾರಿಗಳ ಮೇಲೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.ಸಚಿವ ಶಿವಾನಂದ ಪಾಟೀಲ ಮಾತನಾಡಿ, ಬ.ಬಾಗೇವಾಡಿ ಮತಕ್ಷೇತ್ರದ ಹುಣಶ್ಯಾಳ-ದೇವರಗೆಣ್ಣೂರ ಗ್ರಾಮದ ಸ್ಮಶಾನ ಜಾಗದ ಕುರಿತು ಪ್ರಸ್ತಾಪಿಸಿದರು. ಅಧಿಕಾರಿಗಳು, ಈ ಗ್ರಾಮದ ಸ್ಮಶಾನ ಜಾಗದ ಕುರಿತು ನಿನ್ನೆಯೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂಬ ಉತ್ತರಕ್ಕೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ವಕ್ಫ್ ಖಾತೆ ಸಚಿವರು ಬರುತ್ತಿದ್ದಾರೆ ಎಂದು ಪ್ರಸ್ತಾವ ಸಲ್ಲಿಸುವುದು ಸಮಂಜಸವಲ್ಲ. ಕೂಡಲೇ ಸ್ಮಶಾನ ಜಾಗ ಒದಗಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ವಿಧಾನ ಪರಿಷತ್ ಸದಸ್ಯ ಅಬ್ದುಲ ಜಬ್ಬಾರ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಅನ್ವರಬಾಶಾ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಪಂ ಸಿಇಒ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ, ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.-----------
ಬಾಕ್ಸ್ಎಲ್ಲೆಲ್ಲಿ ಎಷ್ಟು ಖಾತೆ ಬದಲಾವಣೆ ಬಾಕಿ?
ವಿಜಯಪುರ ತಾಲೂಕಿನಲ್ಲಿರುವ 356 ವಕ್ಫ್ ಆಸ್ತಿಗಳ ಪೈಕಿ 17 ಆಸ್ತಿಗಳಿಗೆ ಸಂಬಂಧಿಸಿದ ಖಾತೆ ಬದಲಾವಣೆ ಮಾಡಲಾಗಿದೆ. 339 ಬಾಕಿ ಉಳಿದಿದೆ, ಅದರಂತೆ ಬಬಲೇಶ್ವರ ತಾಲೂಕಿನ 142 ಆಸ್ತಿಗಳ ಪೈಕಿ 8 ಖಾತೆಗಳ ಬದಲಾವಣೆಯಾಗಿದೆ. 134 ಬಾಕಿ ಉಳಿದಿವೆ, ತಿಕೋಟಾ ತಾಲೂಕಿನ 299 ಆಸ್ತಿಗಳ ಪೈಕಿ 5 ಖಾತೆಗಳ ಬದಲಾವಣೆಯಾಗಿದೆ. 294 ಬಾಕಿ ಉಳಿದಿವೆ. ಬ.ಬಾಗೇವಾಡಿ ತಾಲೂಕಿನ 133 ಆಸ್ತಿಗಳ ಪೈಕಿ 15 ಬದಲಾವಣೆಯಾಗಿದ್ದು, 118 ಬಾಕಿ ಇದೆ. ನಿಡಗುಂದಿ ತಾಲೂಕಿನ 43 ಆಸ್ತಿಗಳ ಪೈಕಿ 7 ಖಾತೆ ಬದಲಾವಣೆಯಾಗಿದ್ದು, 36 ಬಾಕಿ ಇದೆ. ಕೊಲ್ಹಾರ ತಾಲೂಕಿನ 69 ಆಸ್ತಿಗಳ ಪೈಕಿ 3 ಖಾತೆಗಳ ಬದಲಾವಣೆಯಾಗಿದ್ದು, 66 ಬಾಕಿ ಇದೆ. ಮುದ್ದೇಬಿಹಾಳ ತಾಲೂಕಿನ 79 ಆಸ್ತಿಗಳ ಪೈಕಿ 8 ಖಾತೆ ಬದಲಾವಣೆಯಾಗಿದ್ದು, 71 ಬಾಕಿ ಇದೆ. ತಾಳಿಕೋಟೆ ತಾಲೂಕಿನ 144 ಆಸ್ತಿಗಳ ಪೈಕಿ 17 ಖಾತೆ ಬದಲಾವಣೆಯಾಗಿದ್ದು, 127 ಬಾಕಿ ಇದೆ. ದೇವರಹಿಪ್ಪರಗಿ ತಾಲೂಕಿನ 111 ಆಸ್ತಿಗಳ ಪೈಕಿ ಈವರೆಗೆ ಯಾವುದೇ ಖಾತೆ ಬದಲಾವಣೆಯಾಗಿರುವುದಿಲ್ಲ. ಸಿಂದಗಿ ತಾಲೂಕಿನ 144 ಆಸ್ತಿಗಳ ಪೈಕಿ ಕೇವಲ 1 ಖಾತೆ ಬದಲಾವಣೆಯಾಗಿದ್ದು, 143 ಬಾಕಿ ಉಳಿದಿವೆ. ಆಲಮೇಲ ತಾಲೂಕಿನ 40 ಆಸ್ತಿಗಳ ಪೈಕಿ 7 ಖಾತೆ ಬದಲಾವಣೆಯಾಗಿದ್ದು, 33 ಬಾಕಿ ಇವೆ. ಇಂಡಿ ತಾಲೂಕಿನ 513 ಆಸ್ತಿಗಳ ಪೈಕಿ 15 ಖಾತೆ ಬದಲಾವಣೆಯಾಗಿದ್ದು, 498 ಬಾಕಿ ಇದೆ. ಚಡಚಣ ತಾಲೂಕಿನ 75 ವಕ್ಫ್ ಆಸ್ತಿಗಳ ಪೈಕಿ 6 ಆಸ್ತಿಗೆ ಸಂಬಂಧಿಸಿದ ಖಾತೆ ಬದಲಾವಣೆ ಮಾಡಲಾಗಿದ್ದು, 69 ಆಸ್ತಿಗಳ ಖಾತೆ ಬದಲಾವಣೆ ಬಾಕಿ ಇದೆ ಎಂದು ಸಭೆಗೆ ಮಾಹಿತಿ ಒದಗಿಸಲಾಯಿತು.---------
ಕೋಟ್ಮುಖ್ಯಮಂತ್ರಿಗಳ ಆದೇಶದಂತೆ ನಾನು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ನಾಮ್ ಕೆ ವಾಸ್ತೇ ಅದಾಲತ್‍ಗಳನ್ನು ಮಾಡುತ್ತಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ದೊರಕಿಸುವ ಉದ್ದೇಶದಿಂದ ಅದಾಲತ್‍ಗಳನ್ನು ನಡೆಸಲಾಗುತ್ತಿದೆ. ಜನರು ನಿರೀಕ್ಷೆ ಮಾಡುವ ಕೇವಲ ರಸ್ತೆ, ನೀರು, ವಿದ್ಯುತ್ ಇದನ್ನು ಒದಗಿಸಲು ಸಾಧ್ಯವಾಗಲಿಲ್ಲವೆಂದರೆ ಹೇಗೆ? ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು.
- ಜಮೀರ್ ಅಹ್ಮದ್ ಖಾನ್, ವಕ್ಫ್ ಖಾತೆ ಸಚಿವ