ಸಾರಾಂಶ
ದೊಡ್ಡಬಳ್ಳಾಪುರ: ವಕ್ಫ್ ಬೋರ್ಡ್‌ನಿಂದ ರೈತರ ಭೂಮಿ ರಕ್ಷಣೆಗೆ ಸರ್ಕಾರ ಕೂಡಲೇ ಕ್ರಮ ವಹಿಸಬೇಕು ಮತ್ತು ಸಚಿವ ಜಮೀರ್ ಅಹ್ಮದ್ ಖಾನ್ ರನ್ನು ರಾಜ್ಯ ಸಚಿವ ಸಂಪುಟದಿಂದ ತಕ್ಷಣ ವಜಾಗೊಳಿಸಬೇಕು ಎಂದು ಆಗ್ರಹಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ತಾಲೂಕು ಕಚೇರಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು, ಜಮೀರ್ ರಾಜೀನಾಮೆಗೆ ಆಗ್ರಹಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ತುಘಲಕ್ ನೀತಿ ಜಾರಿಗೆ ತರುತ್ತಿದೆ. ಒಂದು ಕೋಮಿನ ಓಲೈಕೆಗಾಗಿ ರಾಜ್ಯ ರೈತರನ್ನು ನಾಶ ಮಾಡಲು ಹೊರಟಿರುವ ಅಲ್ಪಸಂಖ್ಯಾತ ಖಾತೆ ಸಚಿವ ಜಮೀರ್ ಅಹ್ಮದ್, ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎಲ್ಲ ಜಿಲ್ಲಾಧಿಕಾರಿಗಳಿಗೆ ಒತ್ತಡ ಹೇರುತ್ತಿದ್ದಾರೆ. ಇದರ ಫಲವಾಗಿ ರಾಜ್ಯದ ಬಹುತೇಕ ರೈತರು ತೀವ್ರ ಸಂಕಷ್ಟ ಮತ್ತು ಆತಂಕಕ್ಕೆ ಒಳಗಾಗಿದ್ದಾರೆ. ಅಮಾಯಕ ರೈತರ ಪಹಣಿ ಪತ್ರಗಳಲ್ಲಿ ವಕ್ಫ್ ಆಸ್ತಿ, ಪರಭಾರೆ ನಿಷೇಧಿಸಿದೆ ಎಂದು ನಮೂದಿಸುವುದರ ಮೂಲಕ ರೈತರ ಜಮೀನನ್ನು ರಾಜ್ಯಾದ್ಯಂತ ಕಬಳಿಸುವ ಹುನ್ನಾರ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈಗಾಗಲೇ ಸಾವಿರಾರು ರೈತರ ಪಹಣಿಗಳಲ್ಲಿ ವಕ್ಫ್ ಅಸ್ತಿ, ಪರಭಾರೆ ನಿಷೇಧಿಸಿದೆ ಎಂದು ನಮೂದಾಗಿರುವುದರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿದಂತೆ, ಕಲಬುರ್ಗಿ, ವಿಜಯಪುರ, ಯಾದಗಿರಿ, ಬೀದರ್, ಶಿವಮೊಗ್ಗ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ರಚನಾತ್ಮಕ ಪ್ರತಿಪಕ್ಷವಾಗಿ ನಾವು ರೈತರ ಪರ ನಿಂತು ಸರ್ಕಾರವನ್ನು ಎಚ್ಚರಿಸುವ ಹೋರಾಟಕ್ಕೆ ಧುಮುಕಿದ್ದೇವೆ. ರಾಜ್ಯಾದ್ಯಂತ ನಮ್ಮ ಪಕ್ಷ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಎಲ್ಲ ತಹಸೀಲ್ದಾರರ ಕಚೇರಿಗಳ ಮುಂದೆ ನೊಂದ ರೈತರನ್ನೊಳಗೊಂಡಂತೆ ಬೃಹತ್ ಸಂಖ್ಯೆಯಲ್ಲಿ ಹೋರಾಟ ರೂಪಿಸಿದೆ ಎಂದರು.
ಮುಖ್ಯಮಂತ್ರಿಗಳು ಈ ಕೂಡಲೇ ಜಮೀರ್ ಅಹ್ಮದ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಹಾಗೂ ಅಕ್ರಮವಾಗಿ ಈಗಾಗಲೇ ವಕ್ಫ್ ಆಸ್ತಿ, ಪರಭಾರೆ ನಿಷೇಧಿಸಿದೆ ಎಂದು ಪಹಣಿಗಳಲ್ಲಿ ನಮೂದಿಸಿರುವ ಪಹಣಿಗಳನ್ನು ಈ ಕೂಡಲೇ ಹಿಂಪಡೆಯಬೇಕು. ಯಾವುದೇ ಸಂದರ್ಭದಲ್ಲಿ ರೈತರ ಆಸ್ತಿ ಕಬಳಿಸುವ ಹುನ್ನಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ರಾಜ್ಯ ಸರ್ಕಾರ ಹಾಗೂ ಅಲ್ಪಸಂಖ್ಯಾತ ಸಚಿವ ಜಮೀರ್ ಅಹಮ್ಮದ್ ಅವರ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ತಹಸೀಲ್ದಾರ್ ವಿಭಾ ವಿದ್ಯಾ ರಾಥೋಡ್ ಅವರ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ಕಾರ್ಯದರ್ಶಿ ಆರ್.ಗೋಪಿ, ನಗರಸಭಾ ಸದಸ್ಯ ಬಂತಿ ವೆಂಕಟೇಶ್ ಸೇರಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ನಾಲ್ಕು ತಾಲೂಕುಗಳ ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.4ಕೆಡಿಬಿಪಿ1-
ದೊಡ್ಡಬಳ್ಳಾಪುರ ತಾಲೂಕು ಕಚೇರಿ ಮುಂದೆ ಬೆಂ.ಗ್ರಾ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ರಾಜ್ಯ ಸರ್ಕಾರ ಮತ್ತು ವಕ್ಫ್ ಖಾತೆ ಸಚಿವ ಜಮೀರ್ ಅಹ್ಮದ್ ವಿರುದ್ಧ ಪ್ರತಿಭಟನೆ ನಡೆಸಲಾಯಿತು.