ವಕ್ಫ್‌: ರೈತರು ಸ್ಟೇಬುಕ್ ಪರಿಶೀಲಿಸಿ: ವಿರೂಪಾಕ್ಷಯ್ಯ

| Published : Nov 14 2024, 12:51 AM IST

ವಕ್ಫ್‌: ರೈತರು ಸ್ಟೇಬುಕ್ ಪರಿಶೀಲಿಸಿ: ವಿರೂಪಾಕ್ಷಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಕಲಾದಗಿಯಲ್ಲಿ ಕಿಸಾನ ಸಂಘದಿಂದ ಉಪತಹಸೀಲ್ದಾರ್‌ ಆರ.ಆರ್.ಕುಲಕರ್ಣಿಗೆ ವಕ್ಫ್‌ ಕಾನೂನು ರದ್ದತಿಗಾಗಿ ಮನವಿ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಕಲಾದಗಿ

ಜಿಲ್ಲೆಯಲ್ಲಿನ ರೈತರು ತಮ್ಮ ಪಹಣಿಯ ಕಾಲಂ 11ರಲ್ಲಿ ವಕ್ಫ ಬೋರ್ಡ್‌ ಅಂತಾ ನಮೂದು ಇರದಿದ್ದರೆ ನೆಮ್ಮದಿ ನಿಟ್ಟುಸಿರು ಬಿಡಬೇಕೆಂದಿಲ್ಲ. ತಮ್ಮ ತಮ್ಮ ತಾಲೂಕಿನ ಉಪನೋಂದಣಿ ಕಚೇರಿಯಲ್ಲಿ ಸ್ಟೇ ಬುಕ್‍ನಲ್ಲಿ ತಮ್ಮ ಸರ್ವೇ ನಂಬರ್ ಇದೆಯೋ ಇಲ್ಲವೋ ಎಂಬುದನ್ನೂ ಕೂಡಾ ಪರಿಶೀಲನೆ ಮಾಡಿಕೊಳ್ಳಬೇಕಾದ ಅಗತ್ಯತೆ ಇದೆ ಎಂದು ಭಾರತೀಯ ಕಿಸಾನ ಸಂಘದ ಜಿಲಾಧ್ಯಕ್ಷ ವಿರೂಪಾಕ್ಷಯ್ಯ ಹಿರೇಮಠ ಹೇಳಿದರು.ಬಾಗಲಕೋಟೆ ತಾಲೂಕು ಘಟಕ ಭಾರತೀಯ ಕಿಸಾನ್ ಸಂಘ ಹಾಗೂ ರೈತ ಮುಖಂಡರಿಂದ ಕಲಾದಗಿ ಉಪ ತಹಸೀಲ್ದಾರ್‌ ಮೂಲಕ ಮಾನವ ಹಕ್ಕುಗಳ ಆಯೋಗಕ್ಕೆ ವಕ್ಫ್‌ ಬೋರ್ಡ್‌ ಕಾನೂನು ರದ್ದತಿಗೆ ಮನವಿ ನೀಡಿ ಮಾತನಾಡಿದ ಅವರು, ರೈತರ ಉತಾರೆಯಲ್ಲಿ ವಕ್ಫ್‌ ಆಸ್ತಿ ಎಂದು ನಮೂದು ಇರದಿದ್ದರೂ ಕೂಡಾ ಉಪನೋಂದಣಾಧಿಕಾರಿ ಕಚೇರಿ ತಡೆಯಾಜ್ಞೆ (ಆಸ್ತಿ ಪರಬಾರೆ ತಡೆ) ಪುಸ್ತಕದಲ್ಲಿ ಪರಿಶೀಲನೆ ಮಾಡಿಕೊಳ್ಳಬೇಕು. ಜಿಲ್ಲೆಯಲ್ಲಿ ಕೆಲವೊಂದು ಆಸ್ತಿಗಳಿಗೆ ತಡೆಯಾಜ್ಞೆ ಇದೆ. ಆ ರೈತರೂ ಕೂಡಾ ಸಂಕಷ್ಟ ಎದುರಿಸುತ್ತಿದ್ದಾರೆ. ವಕ್ಫ್‌ನ ಕರಾಳ ಕಾನೂನಿಂದ ರೈತರಿಗೆ ಅನ್ಯಾಯ, ಮೋಸ ಮಾಡಲಾಗುತ್ತಿದೆ. ಇಂತಹ ಕರಾಳ ಕಾನುನು ಹೊಂದಿದ ಬೋರ್ಡ್‌ ರದ್ದತಿ ಮಾಡಬೇಕು. ರೈತರ ಪಹಣಿಯಲ್ಲಿ ವಕ್ಫ್‌ ಆಸ್ತಿ ಎಂದೂ ನಮೂದಿರುವುದನ್ನು ತೆಗೆಸಬೇಕು. ವಕ್ಫ್‌ ಗೆಜೆಟ್ ನೋಟಿಫಿಕೇಶನ ಹಿಂಪಡೆಯಬೇಕು ಹಾಗೂ ಕಾಯಿದೆ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಮಾರ್ ಯಡಹಳ್ಳಿ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಲಕ್ಷ್ಮಣ ಶಿರಬೂರ, ತಾಲೂಕು ಅಧ್ಯಕ್ಷ ಚಂದ್ರಶೇಖರ ಹಡಪದ, ಆನಂದ ವಾಘ್, ಕೃಷ್ಣಾ ಕೃಷ್ಣಪ್ಪನವರ್, ನಿಂಗಪ್ಪ ಬಡಿಗೇರ, ಸಿದ್ದಯ್ಯ ಗಣಾಚಾರಿ, ಶಾಸನಗೌಡ ಪಾಟೀಲ, ಗೊವಿಂದ ಜಕ್ಕನ್ನವರ್, ವಿಠ್ಠಲ ಬಸುನಾಯಕ್ ಇನ್ನಿತರರು ಇದ್ದರು.