ಸಾರಾಂಶ
ಬೀದರ್ : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ನೇತೃತ್ವದಲ್ಲಿ ಡಿ. 4ರಂದು ವಕ್ಫ್ ಹಟಾವೋ ದೇಶ ಬಚಾವೋ ಪ್ರತಿಭಟನಾ ಮೆರವಣಿಗೆ, ಸಂತ್ರಸ್ತ ಗ್ರಾಮಗಳಿಗೆ ಭೇಟಿ, ಸಭೆ ಆಯೋಜಿಸಲಾಗಿದೆ ಎಂದು ಪಕ್ಷದ ವಿಭಾಗೀಯ ಸಹಪ್ರಭಾರಿ ಈಶ್ವರಸಿಂಗ್ ಠಾಕೂರ್ ತಿಳಿಸಿದರು.
ಜಿಲ್ಲಾ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಡಿ.4ರಂದು ಬೆಳಿಗ್ಗೆ 10.30ಕ್ಕೆ ಗಾಂಧಿಗಂಜ್ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಸಾರ್ವಜನಿಕ ಸಭೆ ನಡೆಸಿ ಸುಮಾರು 15 ಸಾವಿರ ಜನರೊಂದಿಗೆ ಪ್ರತಿಭಟನಾ ರ್ಯಾಲಿಯನ್ನು ಆರಂಭಿಸಿ ಬೊಮ್ಮಗೊಂಡೇಶ್ವರ ವೃತ್ತ, ಬಸವೇಶ್ವರ ವೃತ್ತ, ಡಾ. ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ವರೆಗೆ ತೆರಳಿ ರಾಜ್ಯಪಾಲರಿಗೆ ಬರೆದ ಮನವಿಯನ್ನು ಪತ್ರ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವುದು ಅಲ್ಲದೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ವಕ್ಫ್ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದರು.
ಪ್ರತಿಭಟನೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಪ್ರಮುಖರಾದ ಛಲವಾದಿ ನಾರಾಯಣಸ್ವಾಮಿ, ಪಿ.ರಾಜೀವ್, ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ, ಡಾ. ಸಿದ್ದು ಪಾಟೀಲ್, ಪ್ರಭು ಚವ್ಹಾಣ್, ಶರಣು ಸಲಗರ ಸೇರಿದಂತೆ ಬಿಜೆಪಿ ಜಿಲ್ಲಾ, ತಾಲೂಕು ಹಾಗೂ ಹೋಬಳಿ ಗ್ರಾಮ ಮಟ್ಟದ ಪದಾಧಿಕಾರಿಗಳು ಹಾಗೂ ಚಟನಳ್ಳಿ ಮತ್ತು ಧರ್ಮಾಪುರ ಗ್ರಾಮಸ್ಥರು ಪಾಲ್ಗೊಳ್ಳುತ್ತಿದ್ದಾರೆ ಎಂದು ವಿವರಿಸಿದರು.
ಪ್ರತಿಭಟನೆ ನಂತರ ಮಧ್ಯಾಹ್ನ 3 ಗಂಟೆಗೆ ಧರ್ಮಾಪುರ, ಸಾಯಂಕಾಲ 5 ಗಂಟೆಗೆ ಚಟನಳ್ಳಿ ಗ್ರಾಮಕ್ಕೆ ಬಿ.ವೈ ವಿಜಯೇಂದ್ರ ಹಾಗೂ ತಂಡದವರು ವಕ್ಫ್ ಬಾಧಿತರನ್ನು ಭೇಟಿ ನೀಡಿ ಸಂವಾದ ನಡೆಸಲಿದ್ದಾರೆ. ಹೀಗಾಗಿ ಪ್ರತಿಭಟನೆಯಲ್ಲಿ ವಕ್ಫ್ ಬಾಧಿತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಈಶ್ವರಸಿಂಗ್ ಠಾಕೂರ್ ಮನವಿ ಮಾಡಿದರು.
ಬುಡಾ ಮಾಜಿ ಅಧ್ಯಕ್ಷ ಬಾಬು ವಾಲಿ ಮಾತನಾಡಿ, ಡಿ. 4ರಂದು ಬಿಜೆಪಿ ಅಧಿಕೃತವಾಗಿ ವಕ್ಫ್ ಹಠಾವೋ ಪ್ರತಿಭಟನೆ ನಡೆಸುತ್ತಿದೆ. ರೈತರ ಪಹಣಿಯಿಂದ ವಕ್ಫ್ ಹೆಸರು ತೆಗೆದು ಹಾಕುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು. ಈ ಪ್ರತಿಭಟನಾ ಮೆರವಣಿಗೆಯಲ್ಲಿ ರೈತರು ಎತ್ತಿನ ಗಾಡಿಯೊಂದಿಗೆ ಪಾಲ್ಗೊಳ್ಳುತಿದ್ದಾರೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೀರಪ್ಪ ಔರಾದೆ, ಗ್ರಾಮಾಂತರ ಅಧ್ಯಕ್ಷ ದೀಪಕ ಗಾದಗೆ, ಲುಂಬಿಣಿ ಗೌತಮ, ರಾಜೇಂದ್ರ ಪೂಜಾರಿ, ಸುನೀಲ ಗೌಳಿ ಉಪಸ್ಥಿತರಿದ್ದರು.