ವಕ್ಫ್‌ ನೋಟಿಸ್‌: ರೈತರಿಂದ ಕರಾಳ ದೀಪಾವಳಿ ಆಚರಣೆ

| Published : Oct 30 2024, 12:44 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಜನರು ದೀಪಾವಳಿ ಆಚರಣೆ ಸಂದರ್ಭದಲ್ಲಿ ಸರ್ಕಾರವು ವಕ್ಫ್ ಬೋರ್ಡ್ ಹೆಸರನ್ನು ರೈತರ ಜಮೀನಿನ ಪಹಣಿಯಲ್ಲಿ ನಮೂದು ಮಾಡಿದ್ದನ್ನು ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರೈತರು ಅಹೋರಾತ್ರಿ ಹೋರಾಟ ಆರಂಭಿಸಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘ- ಹಸಿರು ಸೇನೆ ಹಾಗೂ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಅಹೋರಾತ್ರಿ ಧರಣಿಗೆ ನಡೆಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಜನರು ದೀಪಾವಳಿ ಆಚರಣೆ ಸಂದರ್ಭದಲ್ಲಿ ಸರ್ಕಾರವು ವಕ್ಫ್ ಬೋರ್ಡ್ ಹೆಸರನ್ನು ರೈತರ ಜಮೀನಿನ ಪಹಣಿಯಲ್ಲಿ ನಮೂದು ಮಾಡಿದ್ದನ್ನು ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರೈತರು ಅಹೋರಾತ್ರಿ ಹೋರಾಟ ಆರಂಭಿಸಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘ- ಹಸಿರು ಸೇನೆ ಹಾಗೂ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಅಹೋರಾತ್ರಿ ಧರಣಿಗೆ ನಡೆಸುತ್ತಿದ್ದಾರೆ.

ಇದಕ್ಕೂ ಮೊದಲು ರೈತರು ನಗರ ಗಾಂಧಿಚೌಕ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ರೈತರು ಪ್ರತಿಭಟನಾ ರ್‍ಯಾಲಿ ನಡೆಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಸಚಿವ ಜಮೀರ್‌ ಅಹ್ಮದ್ ಖಾನ್ ಅವರ ಭಾವಚಿತ್ರ ಪ್ರದರ್ಶಿಸಿ ಆಕ್ರೋಶ ಹೊರಹಾಕಿದ್ದಲ್ಲದೆ, ಅವರ ಭಾವಚಿತ್ರದ ಎದುರು ದೀಪಗಳನ್ನಿಟ್ಟು ಪ್ರತಿಭಟಿಸಿದರು. ನಂತರ ಅಥಣಿ ರಸ್ತೆಯಲ್ಲಿ ರಸ್ತೆ ತಡೆ ನಡೆಸಲು ಮುಂದಾದ ರೈತರನ್ನು ಪೊಲೀಸರು ತಡೆದರು. ಆದರೂ ರ್‍ಯಾಲಿ ಬಸವೇಶ್ವರ ಸರ್ಕಲ್, ಡಾ.ಅಂಬೇಡ್ಕರ್ ಸರ್ಕಲ್ ಮೂಲಕ ಡಿಸಿ ಕಚೇರಿವರೆಗೂ ತಲುಪಿತು.

ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್ ಅಹ್ಮದ್ ಖಾನ್ ಭಾವಚಿತ್ರದ ಮುಂದೆ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸಂಘಟನೆಯ ಮುಖಂಡ ಅರವಿಂದ ಕುಲಕರ್ಣಿ, ಸಂಗಮೇಶ ಸಗರ ಮಾತನಾಡಿ, ಸರ್ಕಾರದ ಹುನ್ನಾರದಿಂದ ರೈತರು ಕರಾಳ ದೀಪಾವಳಿ ಆಚರಿಸುವಂತಾಗಿದೆ. ರೈತರು ದೀಪಾವಳಿ ಆಚರಣೆ ಮಾಡದೇ, ರೈತ ಕುಟುಂಬಗಳು ಬೀದಿಗೆ ಬಿದ್ದಿವೆ. ವಕ್ಫ್‌ ಬೋರ್ಡ್ ಹೆಸರನ್ನು ತೆಗೆಯಬೇಕು. ಭವಿಷ್ಯದಲ್ಲಿ ರೈತರಿಗೆ ಸಮಸ್ಯೆಯಾಗಬಾರದು ಎಂದು ಎಚ್ಚರಿಸಿದರು.

ರಾಜ್ಯ ಸರ್ಕಾರ ರೈತರ ವಿಷಯದಲ್ಲಿ ಗಂಭೀರವಾಗಿ ನಿರ್ಣಯ ತೆಗೆದುಕೊಳ್ಳಬೇಕು. ಈ ಸಮಸ್ಯೆಯನ್ನು ಕೂಡಲೇ ಇತ್ಯರ್ಥಗೊಳಿಸಬೇಕು. ಅಲ್ಲಿಯವರೆಗೆ ಹೋರಾಟ ನಿಲ್ಲುವುದಿಲ್ಲ ಎಂದು ಗುಡುಗಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ವಿಠ್ಠಲ ಬಿರಾದಾರ, ಎಂ.ಜಿ.ಯಂಕಂಚಿ, ತಾಳಿಕೋಟಿ ತಾಲೂಕಾಧ್ಯಕ್ಷ ಬಾಲಪ್ಪಗೌಡ ಲಿಂಗದಳ್ಳಿ, ಬಬಲೇಶ್ವರ ತಾಲೂಕಾಧ್ಯಕ್ಷ ಮಕ್ಬುಲ್ ಕೀಜಿ, ಸೋಮನಗೌಡ ಪಾಟೀಲ, ಗುರುಲಿಂಗಪ್ಪ ಪಡಸಲಗಿ, ಮಹೇಶ ಯಡಹಳ್ಳಿ, ಬಾಗಪ್ಪ ನಾಟೀಕಾರ, ದಾವಲಸಾಬ ನಧಾಪ, ಬಸವರಾಜ ಜಂಗಮಶೆಟ್ಟಿ, ಸಂಗಪ್ಪ ಕಾಗಿ, ಲಾಲಸಾಬ ಹಳ್ಳೂರ, ರ‍್ಯಾವಪ್ಪಗೌಡ ಪೋಲೇಸಿ, ಗೊಲ್ಲಾಳಪ್ಪ ಚೌಧರಿ, ಚನ್ನಬಸಪ್ಪ ಸಿಂಧೂರ, ರಾಮನಗೌಡ ಹಾದಿಮನಿ, ಶಿವರಾಜಗೌಡ ಬಿರಾದಾರ, ನಾಗರಾಜ ತೋಟದ, ಶ್ರೀಶೈಲ ಬಂಡಿ, ಅಶೋಕ ಉಪ್ಪಲದಿನ್ನಿ ಮುಂತಾದವರು ಇದ್ದರು.