ಬಿಜೆಪಿ ಕಾಲದಲ್ಲೂ ವಕ್ಫ್‌ ನೋಟಿಸ್‌ ನೀಡಲಾಗಿದೆ: ಲಾಡ್‌

| Published : Nov 17 2024, 01:15 AM IST

ಸಾರಾಂಶ

ದೇಶದಲ್ಲಿ ನಿತ್ಯ ಒಂದಿಲ್ಲೊಂದು ಘಟನೆಗಳು ನಡೆಯುತ್ತಿವೆ. ಆ ಕುರಿತು ಬಿಜೆಪಿಗರು ಮಾತನಾಡುವುದಿಲ್ಲ. ಕೇವಲ ವಕ್ಫ್‌ ಹಾಗೂ ಮುಸ್ಲಿಮರ ಬಗ್ಗೆ ಮಾತನಾಡುತ್ತಾರೆ.

ಧಾರವಾಡ:

ಕರ್ನಾಟಕದಲ್ಲೂ ಕೂಡಾ ಬಿಜೆಪಿ ಕಾಲದಲ್ಲಿ ವಕ್ಫ್‌ ವಿಚಾರವಾಗಿ ನೋಟಿಸ್‌ ನೀಡಲಾಗಿದೆ. ಅದನ್ನು ಮರೆಮಾಚಿ ಇದೀಗ ವಕ್ಫ್‌ ವಿರುದ್ಧ ಹೋರಾಟ ನಡೆಸಲು ಬಿಜೆಪಿ ಮುಂದಾಗಿದೆ ಎಂದು ಸಚಿವ ಸಂತೋಷ ಲಾಡ್‌ ಕಿಡಿಕಾರಿದರು.

ವಕ್ಫ್‌ ವಿರುದ್ಧ ಹೋರಾಟ ನಡೆಸಲು ಬಿಜೆಪಿ ತಂಡಗಳನ್ನು ರಚಿಸಿರುವ ಕುರಿತು ಪ್ರಶ್ನೆಗೆ ಸಚಿವರು ಉತ್ತರಿಸಿದರು. ರೈತರ ಪಹಣಿಯಲ್ಲಿ ವಕ್ಫ್‌ ಹೆಸರು ಇರುವ ಕುರಿತು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಹೀಗಿದ್ದರೂ ಬಿಜೆಪಿಯವರು ಏತಕ್ಕೆ ಹೋರಾಟ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ದೇಶದಲ್ಲಿ ನಿತ್ಯ ಒಂದಿಲ್ಲೊಂದು ಘಟನೆಗಳು ನಡೆಯುತ್ತಿವೆ. ಆ ಕುರಿತು ಬಿಜೆಪಿಗರು ಮಾತನಾಡುವುದಿಲ್ಲ. ಕೇವಲ ವಕ್ಫ್‌ ಹಾಗೂ ಮುಸ್ಲಿಮರ ಬಗ್ಗೆ ಮಾತನಾಡುತ್ತಾರೆ ಎಂದು ಕಿಡಿಕಾರಿದ ಲಾಡ್‌, ದಿನ ಬೆಳಗಾದರೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದಾರೆ ಎಂದು ದೂರಿದರು.

ಉತ್ತರ ಪ್ರದೇಶದ ಆಸ್ಪತ್ರೆಯಲ್ಲಿ ಅಗ್ನಿದುರಂತದಿಂದ 10 ಮಕ್ಕಳು ಸಜೀವ ದಹನವಾಗಿದ್ದಾರೆ. ಇದರ ಬಗ್ಗೆ ಏಕೆ ಬಿಜೆಪಿ ನಾಯಕರು ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದರು.

ಮಹಾರಾಷ್ಟ್ರ ಚುನಾವಣೆಯಲ್ಲಿ ವಕ್ಫ್‌ ವಿವಾದ ಪರಿಣಾಮ ಬೀರುವುದಿಲ್ಲವೇ ಎಂಬ ಪ್ರಶ್ನೆಗೆ, ಯಾವುದೇ ಪರಿಣಾಮ ಬೀರುವುದಿಲ್ಲ. ಅಲ್ಲಿ ದೇಶದಲ್ಲಿಯೇ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡರೂ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ. ಈ ಕುರಿತು ಯಾವುದೇ ಚರ್ಚೆಗಳು ಆಗುತ್ತಿಲ್ಲ ಎಂದು ಹೇಳಿದರು.

ಬಿ. ನಾಗೇಂದ್ರ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಲಾಗುವುದೇ ಎಂಬ ಪ್ರಶ್ನೆಗೆ, ಈ ಕುರಿತು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ನಿರ್ಧರಿಸುತ್ತಾರೆ ಎಂದು ಹೇಳಿದರು.