- ಧಾರಣೆ ಕುಸಿದಾಗ ಬಹುತೇಕ ರಬ್ಬರ್ ತೋಟ ಕಡಿದಿರುವ ರೈತರು । 1 ಕೆ.ಜಿ. ರಬ್ಬರ್ ಗೆ ₹226 । ಸಿಂಥಟಿಕ್ ರಬ್ಬರ್ ಪ್ರಾಡಕ್ಟ್ , ನ್ಯಾಚರಲ್ ರಬ್ಬರ್ ಬೆಲೆಯೂ ಏರಿಕೆ
ಯಡಗೆರೆ ಮಂಜುನಾಥ್,ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ
ಕಳೆದ ಒಂದು ತಿಂಗಳಿಂದ ಸದ್ದಿಲ್ಲದೆ ರಬ್ಬರ್ ಧಾರಣೆ ಏರಿಕೆಯತ್ತ ಮುಖ ಮಾಡಿದ್ದು ರಬ್ಬರ್ ತೋಟದ ಮಲೀಕರ ಮುಖದಲ್ಲಿ ಮಂದಹಾಸ ಮೂಡಿಸಿದೆ.ಆದರೆ, ಕಳೆದ 10 ವರ್ಷದಿಂದಲೂ ನಿರೀಕ್ಷಿತ ಮಟ್ಟದಲ್ಲಿ ರಬ್ಬರ್ ಬೆಲೆ ಏರದ ಹಾಗೂ ಅಡಕೆ ಬೆಳೆಗೆ ಉತ್ತಮ ಧಾರಣೆ ಬಂದ ಪರಿಣಾಮವಾಗಿ ತಾಲೂಕಿನ ಬಹುತೇಕ ರೈತರು ತಮ್ಮತೋಟದ ರಬ್ಬರ್ ಮರಗಳನ್ನು ಕಡಿದು ಅಡಕೆ ತೋಟವಾಗಿ ಪರಿವರ್ತಿಸಿದ್ದಾರೆ. ರಬ್ಬರ್ ಧಾರಣೆ ಏರಿಕೆ ಕಂಡು ರಬ್ಬರ್ ಮರ ಕಡಿದವರು ಮಮ್ಮಲ ಮರುಗುತ್ತಿದ್ದಾರೆ.
ಕೊಲ್ಲಿ ರಾಷ್ಟ್ರದ ಯುದ್ದ ರಬ್ಬರ್ ಬೆಲೆ ಮೇಲೂ ಪರಿಣಾಮ ಬೀರಿದೆ. ಯುದ್ದದಿಂದಾಗಿ ಪೆಟ್ರೋಲಿಂ ಪ್ರಾಡಕ್ಟ್ ಬೆಲೆ ಏರಿಕೆ ಯಾಗಿದ್ದು ಸಿಂಥಟಿಕ್ ರಬ್ಬರ್ ಬೆಲೆಯೂ ಏರಿಕೆಯಾಗಿದೆ. ರಬ್ಬರ್ ಟೈರ್ ತಯಾರಿಕೆಯಲ್ಲಿ ಸಿಂಥೆಟಿಕ್ ರಬ್ಬರ್ ಜೊತೆಗೆ ನ್ಯಾಚರಲ್ ರಬ್ಬರ್ ಉಪಯೋಗಿಸುವುದರಿಂದ ರಬ್ಬರ್ ಬೆಲೆ ಗಗನಮುಖಿಯಾಗಿದೆ.
-- ಬಾಕ್ಸ್--
₹200 ರಿಂದ 226 ತಲುಪಿದ ರಬ್ಬರ್ಈ ವಾರದಲ್ಲಿ ಗ್ರೇಡ್ ರಬ್ಬರ್ ₹226 ರ ಆಸುಪಾಸಿನಲ್ಲಿದ್ದರೆ ಲಾಟ್ ರಬ್ಬರ್ ₹200 ಮುಟ್ಟಿದೆ. ಕಳೆದ 10 ರಿಂದ 12 ವರ್ಷದ ಹಿಂದಿನವರೆಗೂ ಗ್ರೇಡ್ ರಬ್ಬರ್ 1 ಕೆಜಿ.ಗೆ ₹130 ರಿಂದ ₹140ರ ವರೆಗೆ ಮಾತ್ರ ಇತ್ತು. ಲಾಟ್ ರಬ್ಬರ್ ₹90 ರಿಂದ ₹96 ವರೆಗೆ ಇತ್ತು. ಕಳೆದ 3 ವರ್ಷದ ಹಿಂದೆ ಇದ್ದಕ್ಕಿದ್ದಂತೆ ಗ್ರೇಡ್ ರಬ್ಬರ್ ₹240 ಮುಟ್ಟಿ ಕೇವಲ 1 ವಾರದಲ್ಲೇ ಮತ್ತೆ ₹160 ರುಗೆ ಇಳಿದಿತ್ತು. ನಂತರದ ವರ್ಷಗಳಲ್ಲಿ ರಬ್ಬರ್ ₹200 ಮುಟ್ಟಲೇ ಇಲ್ಲ.
-- ಬಾಕ್ಸ್ --ಬೆಲೆ ಕುಸಿತಕ್ಕೆ ರಬ್ಬರ್ ಕಡಿದು ಅಡಕೆ ನೆಟ್ಟರು
1995 -96 ಹೊತ್ತಿಗೆ ನರಸಿಂಹರಾಜಪುರ ತಾಲೂಕಿನಲ್ಲಿ 5 ರಿಂದ 6 ಸಾವಿರ ಸಾವಿರ ಹೆಕ್ಟೇರ್ ರಬ್ಬರ್ ಪ್ರದೇಶವಿತ್ತು. ಕೇರಳದಿಂದ ವಲಸೆ ಬಂದ ಮಲೆಯಾಳಿ ಭಾಷಿಗರು ತಮ್ಮ ಜೊತೆಯಲ್ಲಿ ರಬ್ಬರ್ ಬೆಳೆ ತಂದರು. ನರಸಿಂಹರಾಜಪುರ ತಾಲೂಕಿನಲ್ಲಿ ಮಳೆ ಕಡಿಮೆ ಬೀಳುವುದರಿಂದ ರಬ್ಬರ್ ತೋಟಗಳು ಚೆನ್ನಾಗಿ ಬಂದವು. 1 ಕೆ.ಜಿ. ರಬ್ಬರ್ ಗೆ ಆಗಿನ ಕಾಲದಲ್ಲೇ ₹100 ಇತ್ತು. ರಬ್ಬರ್ ಮಂಡಳಿ ರಬ್ಬರ್ ಬೆಳೆ ಪ್ರೋತ್ಸಾಹಿಸಲು ಸಹಾಯ ಧನ ನೀಡಿತ್ತು. ಭೂ ಅಭಿವೃದ್ಧಿ ಬ್ಯಾಂಕ್ ರೈತರಿಗೆ ರಬ್ಬರ್ ಬೆಳೆಯಲು ಕೋಟಿಗಟ್ಟಳೆ ಸಾಲ ನೀಡಿತ್ತು. ರೈತರು ಅಡಕೆಗೆ ಪರ್ಯಾಯ ಬೆಳೆಯಾಗಿ ರಬ್ಬರ್ ಬೆಳೆ ನಿಲ್ಲಬಹುದು ಎಂದು ಬಾವಿಸಿದ್ದರು. ಆದರೆ, 2000 ನೇ ಇಸವಿ ಹೊತ್ತಿಗೆ ರಬ್ಬರ್ ಬೆಲೆ ಕುಸಿದು 1 ಕೆ.ಜಿ. ಗೆ ಕೇವಲ ₹ 30ಕ್ಕೆ ಬಂದು ನಿಂತಿತ್ತು. ಹಲವು ವರ್ಷ ಕಾದರೂ ರಬ್ಬರ್ ಧಾರಣೆ ಏರಿಕೆಯಾಗದೆ ಹಲವಾರು ರೈತರು ರಬ್ಬರ್ ಕಡಿದು ಅಡಕೆ ನೆಟ್ಟಿದ್ದರು.10 ವರ್ಷದಿಂದ ಏರಿಕೆ ಕಾಣದ ರಬ್ಬರ್: ಕಳೆದ 10 ವರ್ಷದಿಂದಲೂ ರಬ್ಬರ್ ಧಾರಣೆ ಏರಿಕೆಯಾಗಲೇ ಇಲ್ಲ. ಆದರೆ, ಅಡಕೆ ಧಾರಣೆ ಮಾತ್ರ ರಾಶಿ ಇಡಿ ₹50 ಸಾವಿರ ಮುಟ್ಟಿತು. ಬೆಟ್ಟೆ ₹60 ಸಾವಿರ, ಹಸಿ ಅಡಕೆ ₹80 ಸಾವಿರ ವಾದ ಪರಿಣಾಮ ಬಹುತೇಕ ರೈತರು ತಮ್ಮ ಜಮೀನಿನಲ್ಲಿ ಬೋರ್ ವೆಲ್ ಕೊರೆಸಿ ನೀರಾವರಿ ಮಾಡಿ ಅಡಕೆ ಗಿಡ ನೆಟ್ಟಿದ್ದಾರೆ. ಈಗ ನರಸಿಂಹರಾಜಪುರ ತಾಲೂಕಿನಲ್ಲಿ ಅಂದಾಜು 1 ರಿಂದ 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ರಬ್ಬರ್ ತೋಟ ಕಾಣಬಹುದಾಗಿದೆ. ಉಳಿದ ರಬ್ಬರ್ ತೋಟವೆಲ್ಲಾ ಅಡಕೆ ತೋಟ ವಾಗಿದೆ. ರಬ್ಬರ್ ತೋಟಗಳಲ್ಲಿ ಉಪ ಬೆಳೆ ಬೆಳೆಯಲು ಸಾಧ್ಯವಿಲ್ಲ. ಆದರೆ, ಅಡಕೆ ತೋಟಗಳಲ್ಲಿ ಕಾಫಿ, ಕಾಳು ಮೆಣಸು, ಬಾಳೆ, ಲವಂಗ, ಜಾಯಿಕಾಯಿ ಸೇರಿದಂತೆ ಹಲವಾರು ಉಪ ಬೆಳೆ ಬೆಳೆಯಬಹುದು.ಇದನ್ನು ಮನಗಂಡ ರೈತರು ಅಡಕೆ ಬೆಳೆಯತ್ತ ವಾಲಿದ್ದಾರೆ. ಈಗ ರಬ್ಬರ್ ಧಾರಣೆ ಏರಿಕೆಯಾದರೂ ಕೆಲವೇ ರಬ್ಬರ್ ಬೆಳೆಗಾರರಿಗೆ ಇದರ ಫಲ ಸಿಗಲಿದೆ. -- ಕೋಟ್ --ರಬ್ಬರ್ ಬೆಲೆ ಏರಿಕೆಗೆ ಮುಖ್ಯ ಕಾರಣ ಯುದ್ದ. ಇದರಿಂದ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಾಗಿದೆ. ಹಾಗಾಗಿ ಸಿಂಥಟಿಕ್ ರಬ್ಬರ್ ಬೆಲೆಯೂ ಏರಿಕೆಯಾಗಿದೆ. ರಬ್ಬರ್ ಟೈರ್ ತಯಾರಿಸಲು ಸಿಂಥಟಿಕ್ ರಬ್ಬರ್ ಹಾಗೂ ನ್ಯಾಚುರಲ್ ರಬ್ಬರ್ ಮಿಕ್ಸ್ ಮಾಡುತ್ತಾರೆ. ರಬ್ಬರ್ ಬೆಲೆ ಕುಸಿತ ಕಂಡಾಗ ಬೆಂಬಲ ಬೆಲೆ ನೀಡಬೇಕು. ಕೆಲವು ವರ್ಷಗಳ ಹಿಂದೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ನರಸಿಂಹರಾಜಪುರಕ್ಕೆ ಬಂದಾಗ ರಬ್ಬರ್ ಗೆ ₹250 ಬೆಂಬಲ ಬೆಲೆ ನೀಡಬೇಕು ಎಂದು ಸಂಘದಿಂದ ಮನವಿ ಮಾಡಲಾಗಿತ್ತು.
ಟಿ.ವಿ.ವಿಜಯ, ಅಧ್ಯಕ್ಷ, ರಬ್ಬರ್ ಉತ್ಪಾದಕರ ಸಂಘ, ನರಸಿಂಹರಾಜಪುರ-- ಕೋಟ್ --
ಅಡಕೆ ಬೆಲೆಗೆ ಹೋಲಿಕೆ ಮಾಡಿದರೆ ರಬ್ಬರ್ ಬೆಲೆ ಕಡಿಮೆ ಎಂದು ಅನಿಸುತ್ತಿದೆ. ಆದರೆ, ರಬ್ಬರ್ ಬೆಳೆಗೆ ನೀರು ಬೇಡ. ಕೂಲಿ ಖರ್ಚು ಕಡಿಮೆ. ರಬ್ಬರ್ ಟ್ಯಾಪರ್ ಸರಿಯಾಗಿ ಟ್ಯಾಪಿಂಗ್ ಮಾಡಿದರೆ ರಬ್ಬರ್ ತೋಟದಲ್ಲಿ ಉತ್ತಮ ಆದಾಯ ಗಳಿಸಬಹುದು.ಕಟಗಳಲೆ ಲೋಕೇಶ್, ರಬ್ಬರ್ ಬೆಳೆಗಾರರು, ನರಸಿಂಹರಾಜಪುರ
-- ಕೋಟ್ --ನರಸಿಂಹರಾಜಪುರ ತಾಲೂಕಿನಲ್ಲಿ 8 ರಬ್ಬರ್ ಖರೀದಿಸುವ ಅಂಗಡಿ ಇದೆ. ಇಲ್ಲಿ ಖರೀದಿ ಮಾಡಿದ ರಬ್ಬರ್ ಶೀಟುಗಳು ಮಹಾರಾಷ್ಟ, ಗೋವಾ ರಾಜ್ಯಗಳಿಗೆ ಹೋಗಲಿದೆ. ಈಗ ರಬ್ಬರ್ ಧಾರಣೆ ಏರಿಕೆ ಕಂಡರೂ ರಬ್ಬರ್ ತೋಟವೇ ಕಡಿಮೆ ಯಾಗಿರುವುದರಿಂದ ಅಂಗಡಿಗಳಲ್ಲಿ ರಬ್ಬರ್ ಶೀಟುಗಳು ಹೆಚ್ಚಾಗಿ ಬರುತ್ತಿಲ್ಲ.
- ಕೆ.ವಿ.ಸಾಜು, ರಬ್ಬರ್ ವ್ಯಾಪಾರಿಗಳು, ಬಿ.ಎಚ್.ಕೈಮರ