ಸಾರಾಂಶ
ಚಿತ್ರದುರ್ಗ ನಗರದ ಕೋಟೆ ನಾಡು ಬುದ್ಧ ವಿಹಾರದಲ್ಲಿ ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ವತಿಯಿಂದ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕಾರ್ಗಿಲ್ ವಿಜಯೋತ್ಸವ ಭಾರತೀಯರ ಹೆಮ್ಮೆ. ಇಂದಿನ ಯುದ್ಧಗಳು ಮಾನವನ ವಿನಾಶವನ್ನೇ ಬಯಸುವುದರಿಂದ ವಿಶ್ವದ ನಾಯಕರು ಪ್ರತಿಷ್ಠೆಗಳಿಗಾಗಿ ನಡೆಯುವ ಯುದ್ಧಗಳನ್ನು ತಪ್ಪಿಸಬೇಕಾಗಿದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಹೇಳಿದರು.ಚಿತ್ರದುರ್ಗ ನಗರದ ಕೋಟೆ ನಾಡು ಬುದ್ಧ ವಿಹಾರದಲ್ಲಿ ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ವತಿಯಿಂದ ಆಯೋಜಿಸಿದ್ದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಒಂದು ಯುದ್ಧದಿಂದಾಗುವ ಸಾವು-ನೋವುಗಳು ಸೇಡಿಗೆ ತಿರುಗಿ ಮತ್ತೊಂದು ಯುದ್ಧಕ್ಕೆ ಕಾರಣವಾಗುತ್ತದೆ. ಯುದ್ಧವೆಂದರೆ ವಿನಾಶವೆಂದೇ ಅರ್ಥ. ಯುದ್ಧವನ್ನು ಕುರಿತು ಭಗವಾನ್ ಬುದ್ಧರು ಅಹಿಂಸೆಯ ಹೆಸರಲ್ಲಿ ಸೈನಿಕರು ರಾಜನಿಗೆ ಅಥವಾ ತಮ್ಮ ದೇಶಕ್ಕೆ ಸಲ್ಲಿಸಬೇಕಾದ ಕರ್ತವ್ಯದಿಂದ ತಪ್ಪಿಸಿಕೊಳ್ಳುವುದು ಅಹಿಂಸೆ ಪಾಲನೆಯಲ್ಲ ಎಂದು, ಸೈನಿಕರಿಗೆ ದೀಕ್ಷೆ ಕೊಡುವುದನ್ನು ತಡೆದರು. ಯಾರು ಶಿಕ್ಷೆಗೆ ಅರ್ಹರೋ ಅವರಿಗೆ ಶಿಕ್ಷೆಯಾಗಬೇಕು. ಸಹಾಯದ ಅವಶ್ಯಕತೆಯಿರುವವರಿಗೆ ಸಹಾಯವಾಗಬೇಕು. ಆದರೆ ಯಾವುದೇ ಜೀವಿಗಳಿಗೆ ತೊಂದರೆಯಾಗಬಾರದೆನ್ನು ವುದು ಅವರ ನಿಲುವಾಗಿತ್ತು. ಇದು ವಿರೋಧ ಭಾಸವಲ್ಲ-ತಪ್ಪಿನ ಸಲುವಾಗಿ ಹಿಂಸೆ ಅನುಭವಿಸುವುದು ಹಿಂಸೆಯಲ್ಲ. ಕೆಡುಕಿನಿಂದಾಗಿ ಒಳ್ಳೆಯದು ಪೂರ್ಣವಾಗಿ ಹಾಳಾಗದಂತೆ ಕಾಪಾಡಲು ಹಿಂಸೆ ಅಂತಿಮ ದಾರಿಯಾಗಿರ ಬೇಕೆಂಬುದು ಭಗವಾನರ ಆಶಯವಾಗಿತ್ತು.ಪ್ರಜಾ ಕಲ್ಯಾಣ ಬಯಸುವ ಪ್ರಪಂಚದ ರಾಷ್ಟ್ರಗಳ ಮುಂಚೂಣಿ ನಾಯಕರುಗಳಿಗೆ ಸಾಮ್ರಾಟ್ ಅಶೋಕ್ ಮಾದರಿಯಾಗ ಬೇಕಾದದ್ದು, ಇಂದಿನ ಅನಿವಾರ್ಯತೆವಾಗಿದೆ ಎಂದರು.
ಈ ವೇಳೆ ವಕೀಲರಾದ ಚಂದ್ರಪ್ಪ, ನಿವೃತ್ತ ಸಬ್‌ಇನ್ಸ್‌ಪೆಕ್ಟರ್ ಕೃಷ್ಣಮೂರ್ತಿ, ಉಪನ್ಯಾಸಕರಾದ ಈ.ನಾಗೇಂದ್ರಪ್ಪ, ತಿಪಟೂರು ಮಂಜು, ಶಿಕ್ಷಕಿಯರಾದ ಗಿರಿಜಾ, ಅಮೂಲ್ಯ, ಬೆಸ್ಕಾಂ ತಿಪ್ಪೇಸ್ವಾಮಿ ಬನ್ನಿಕೂಡ ರಮೇಶ್, ಶಾಂತಮ್ಮ, ತಿಪ್ಪಮ್ಮ ಇತರರಿದ್ದರು.