ವೇರ್ ಬಿಡಿಕೆ ವಾಲ್ವ್ಸ್ ಕಾರ್ಮಿಕರ ಅನಿರ್ದಿಷ್ಠಾವಧಿ ಮುಷ್ಕರ ಆರಂಭ

| Published : Nov 05 2024, 12:41 AM IST / Updated: Nov 05 2024, 12:42 AM IST

ವೇರ್ ಬಿಡಿಕೆ ವಾಲ್ವ್ಸ್ ಕಾರ್ಮಿಕರ ಅನಿರ್ದಿಷ್ಠಾವಧಿ ಮುಷ್ಕರ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಮಿಕ ಆಯುಕ್ತರು ಅಮಾನತಾದ 41 ಕಾರ್ಮಿಕರಿಗೆ ಹುಬ್ಬಳ್ಳಿಯಲ್ಲಿ ಕೆಲಸ ನೀಡುವಂತೆ ಸೂಚಿಸಿದರೂ ಆಡಳಿತ ವರ್ಗ ಸ್ಪಂದಿಸಿಲ್ಲ ಎಂದು ಕಾರ್ಮಿಕರು ಆರೋಪಿಸಿದ್ದಾರೆ.

ಹುಬ್ಬಳ್ಳಿ:

ಕಾರ್ಮಿಕರ ಕಾನೂನು ಬಾಹಿರ ವರ್ಗಾವಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಲ್ಲಿನ ಗೋಕುಲ ರಸ್ತೆಯಲ್ಲಿರುವ ಸ್ವಿಮ್ಸ್ ಟೆಕ್ನಾಲಜೀಸ್ ಪ್ರೈ.ಲಿ ಕಾರ್ಖಾನೆಯ ಎದುರು ವೇರ್‌ ಬಿಡಿಕೆ ವಾಲ್ವ್ಸ್‌ ವರ್ಕರ್ಸ್‌ ಯೂನಿಯನ್‌ ನೇತೃತ್ವದಲ್ಲಿ ಸೋಮವಾರದಿಂದ ಅನಿದಿ್ಷ್ಟಾವಧಿ ಮುಷ್ಕರ ಆರಂಭವಾಗಿದೆ.

ಈ ವೇಳೆ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ಅಶೋಕ ಬಾರಕಿ ಮಾತನಾಡಿ, ಈ ಕಾರ್ಖಾನೆಯಲ್ಲಿ 350ಕ್ಕೂ ಅಧಿಕ ಕಾರ್ಮಿಕರು, 170 ಕಾಯಂ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ 3 ವರ್ಷಗಳ ಹಿಂದೆ ಗುಜರಾತ್ ಮೂಲದ ಮಾಲೀಕರು ಈ ಕಂಪನಿ ಖರೀದಿಸಿದ್ದಾರೆ. ಅಲ್ಲಿಂದ ಈ ವರೆಗೆ ಕಂಪನಿಯ ಸ್ಥಳೀಯ ಕಾರ್ಮಿಕರಿಗೆ ನಿರಂತರ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದರು.

ಜ. 13ರಂದು 41 ಕಾರ್ಮಿಕರನ್ನು ಗುಜರಾತ್ ರಾಜ್ಯದಲ್ಲಿ ತಮ್ಮ ಯಾವುದೇ ನೋಂದಣಿ ಇರದ ಸಂಸ್ಥೆಗೆ ದಿಢೀರ್ ವರ್ಗಾವಣೆ ಮಾಡಿ ಆದೇಶ ಪತ್ರ ಕೊಟ್ಟಿದ್ದಾರೆ. ಜತೆಗೆ ಕಾರ್ಮಿಕರ ಮುಖಂಡರನ್ನು ಒಳಗೊಂಡು 12 ಕಾರ್ಮಿಕರ ಅಮಾನತು ಮಾಡಲಾಗಿದೆ. ಜ. 24ರಿಂದ 41 ಜನ ಕಾರ್ಮಿಕರಿಗೆ ಕಾರ್ಖಾನೆಯಲ್ಲಿ ಕೆಲಸ ನಿರಾಕರಿಸಿ ಫೆ. 8ರಿಂದ 9 ತಿಂಗಳ ವೇತನ ತಡೆಹಿಡಿಯಲಾಗಿದೆ. ಇದರಿಂದಾಗಿ ಈ ಕಾರ್ಮಿಕರ ಕುಟುಂಬಗಳು ಬೀದಿ ಪಾಲಾಗಿವೆ. ಈ ಕುರಿತು ಈಗಾಗಲೇ ಉಪ ಕಾರ್ಮಿಕ ಆಯುಕ್ತರು 15 ಬಾರಿ ರಾಜಿ ಸಂಧಾನ ನಡೆಸಿದರೂ ಸಹ ಫಲಪ್ರದವಾಗಿಲ್ಲ ಎಂದು ದೂರಿದರು.

ಕಾರ್ಮಿಕ ಆಯುಕ್ತರು ಅಮಾನತಾದ 41 ಕಾರ್ಮಿಕರಿಗೆ ಹುಬ್ಬಳ್ಳಿಯಲ್ಲಿ ಕೆಲಸ ನೀಡುವಂತೆ ಸೂಚಿಸಿದರೂ ಆಡಳಿತ ವರ್ಗ ಸ್ಪಂದಿಸಿಲ್ಲ. ಜತೆಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ, ಉಪಕಾರ್ಮಿಕ ಆಯುಕ್ತರು ಜೂ. 19ರಂದು 41 ಜನರ ವರ್ಗಾವಣೆ ಕಾನೂನು ಬಾಹಿರವಾಗಿದ್ದು, ಆಡಳಿತ ವರ್ಗದ ಮೇಲೆ ಕಾನೂನು ಕ್ರಮಕ್ಕೆ ಸೂಕ್ತ ಆದೇಶ ಹೊರಡಿಸಬೇಕೆಂದು ಪತ್ರ ಬರೆಯಲಾಗಿದ್ದರೂ ಸಹ ಮಾಲಿಕರು ಕ್ಯಾರೆ ಎನ್ನುತ್ತಿಲ್ಲ ಎಂದು ಆರೋಪಿಸಿದರು.

ಈ ಕುರಿತು ಸಚಿವ ಸಂತೋಷ ಲಾಡ್ ಸಂಸ್ಥೆಯ ಮಾಲೀಕರಿಗೆ ಕರೆದು ಸೂಚನೆ ನೀಡಿದರು ಸಹ ಮಾಲೀಕರು ಸ್ಪಂದಿಸಿಲ್ಲ. ಅನ್ಯ ರಾಜ್ಯಕ್ಕೆ ಕಾರ್ಮಿಕರನ್ನು ಮಾಡಿರುವ ವರ್ಗಾವಣೆ ಕೈಬಿಡಬೇಕು. ಮತ್ತು ಅಮಾನತ್ತಾಗಿರುವ ಕಾರ್ಮಿಕರನ್ನು ಮರಳಿ ಕೆಲಸಕ್ಕೆ ತಗೆದುಕೊಳ್ಳುವ ವರೆಗೂ ನಮ್ಮ ಹೋರಾಟ ನಿಲ್ಲದು ಎಂದು ಎಚ್ಚರಿಸಿದರು.

ಯೂನಿಯನ್‌ ಉಪಾಧ್ಯಕ್ಷ ವಿನೋದಕುಮಾರ ವೀರಾಪುರ, ದ್ಯಾಮಣ್ಣ ಸವಣೂರ, ಖಜಾಂಚಿ ವಾಸುದೇವ ಕುಂಟೆ, ಸಹ ಕಾರ್ಯದರ್ಶಿ ಕೆ.ಆರ್‌. ಜೂಜಾರ್, ಎ.ಎಂ. ಗದಗ ಸೇರಿದಂತೆ ನೂರಾರು ಕಾರ್ಮಿಕರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.

ಮುಷ್ಕರಕ್ಕೆ ಜೆಸಿಟಿಯು ಬೆಂಬಲ:

ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಹು-ಧಾ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ(ಜೆಸಿಯು) ಬೆಂಬಲ ಸೂಚಿಸಿತು. ಕಾರ್ಮಿಕರ ಬೇಡಿಕೆಗಳನ್ನು ಕಂಪನಿಯ ಆಡಳಿತ ಮಂಡಳಿ ಈಡೇರಿಸದಿದ್ದರೆ ಜಂಟಿ ಸಂಘಟಿತ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಲಾಯಿತು. ಈ ವೇಳೆ ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ, ಎ.ಎಸ್. ಪೀರಜಾದೆ, ಚಿದಾನಂದ ಸವದತ್ತಿ, ಹನಮಂತಪ್ಪ ಪವಾಡಿ, ಅಶೋಕ ಬಾರ್ಕಿ, ಮಾರ್ಕೋಪೋಲೋ ಕಂಪನಿ ನೌಕರರ ಸಂಘದ ಮುಖಂಡರು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಮುಷ್ಕರ ಬೆಂಬಲಿಸಿದರು.