ಹೊಸ ಶೈಕ್ಷಣಿಕ‌ ವರ್ಷದ ಆರಂಭಕ್ಕೆ ಮಕ್ಕಳನ್ನು ವಿಭಿನ್ನ ರೀತಿಯಲ್ಲಿ ಸ್ವಾಗತಿಸುವುದನ್ನು‌ ನೋಡಿದ್ದೇವೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸರ್ಕಾರಿ ಶಾಲೆಯೊಂದರ ಶಿಕ್ಷಕರನ್ನೇ ಸ್ಥಳೀಯ ಗ್ರಾಮಪಂಚಾಯಿತಿ, ಶಾಲಾಭಿವೃದ್ಧಿ‌ ಸಮಿತಿ ಹಾಗೂ ಮಕ್ಕಳ ಪೋಷಕರೇ ಪನ್ನೀರು ಸಿಂಪಡಿಸಿ, ಪುಷ್ಪಾರ್ಚನೆ‌ಗೈದು, ಉಡುಗೊರೆಗಳನ್ನು ನೀಡಿ ಸ್ವಾಗತಿಸುವ ಮೂಲಕ ಗಮನ ಸೆಳೆದರು.

ಮೌನೇಶ ವಿಶ್ವಕರ್ಮಕನ್ನಡಪ್ರಭ ವಾರ್ತೆ ಬಂಟ್ವಾಳ

ಹೊಸ ಶೈಕ್ಷಣಿಕ‌ ವರ್ಷದ ಆರಂಭಕ್ಕೆ ಮಕ್ಕಳನ್ನು ವಿಭಿನ್ನ ರೀತಿಯಲ್ಲಿ ಸ್ವಾಗತಿಸುವುದನ್ನು‌ ನೋಡಿದ್ದೇವೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸರ್ಕಾರಿ ಶಾಲೆಯೊಂದರ ಶಿಕ್ಷಕರನ್ನೇ ಸ್ಥಳೀಯ ಗ್ರಾಮಪಂಚಾಯಿತಿ, ಶಾಲಾಭಿವೃದ್ಧಿ‌ ಸಮಿತಿ ಹಾಗೂ ಮಕ್ಕಳ ಪೋಷಕರೇ ಪನ್ನೀರು ಸಿಂಪಡಿಸಿ, ಪುಷ್ಪಾರ್ಚನೆ‌ಗೈದು, ಉಡುಗೊರೆಗಳನ್ನು ನೀಡಿ ಸ್ವಾಗತಿಸುವ ಮೂಲಕ ಗಮನ ಸೆಳೆದರು.ಹೌದು...ಈ ಅಪರೂಪದ‌ ವಿದ್ಯಮಾನ ನಡೆದಿರುವುದು ಬಂಟ್ವಾಳ ತಾಲೂಕಿನ‌ ಮಜಿ ವೀರಕಂಭ ಸರ್ಕಾರಿ‌ ಪ್ರಾಥಮಿಕ ಶಾಲೆಯಲ್ಲಿ. ಜೂ. 1ರಂದು ಶಾಲೆಗಳು ಪುನರಾರಂಭಕ್ಕೆ ಶಿಕ್ಷಕರು, ಎಸ್ ಡಿಎಂಸಿ ಸಕಲ ಸಿದ್ದತೆ ಮಾಡಿಕೊಂಡಿದ್ದು, ಪ್ರತಿ ಶಾಲೆಗಳಲ್ಲಿ ಮಕ್ಕಳನ್ನು ಸ್ವಾಗತಿಸಲು ಇಲಾಖೆ ಆದೇಶದಂತೆ ಸಕಲ ಸಿದ್ದತೆ ನಡೆದಿದೆ. ಈ ನಡುವೆ ಶಾಲೆಗಳಲ್ಲಿ ವರ್ಷವಿಡೀ ಪಾಠ ಪ್ರವಚನದಲ್ಲಿ ತೊಡಗಿಸಿಕೊಳ್ಳುವ ಶಿಕ್ಷಕರನ್ನು ಯಾಕೆ ಸ್ವಾಗತಿಸಬಾರದು..? ಎಂಬ ಯೋಚನೆ ಬರುತ್ತಿದ್ದಂತೆಯೇ ಮಜಿ ವೀರಕಂಭ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯು ವೀರಕಂಭ ಗ್ರಾಪಂ ನೆರವಿನೊಂದಿಗೆ ಅದನ್ನು ಕಾರ್ಯರೂಪಕ್ಕೆ ತಂದಿದ್ದು, ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಲ್ಲಡ್ಕ, ಮಕ್ಕಳ ಪೋಷಕರು ಹಾಗೂ ಶಾಲಾಭಿಮಾನಿಗಳ ಸಹಕಾರದೊಂದಿಗೆ ಅರ್ಥಪೂರ್ಣವಾಗಿಯೇ ಮೂಡಿಬಂತು.ಶನಿವಾರ ಶಿಕ್ಷಕರು ಶಾಲೆಗೆ ಬರುತ್ತಿದ್ದಂತೆಯೇ, ಶಿಕ್ಷಕರಿಗೆ ಅಚ್ಚರಿ ಕಾದಿತ್ತು. ಗ್ರಾಪಂ ಪಿಡಿಒ, ಎಸ್ ಡಿಎಂ‌ಸಿ ಅಧ್ಯಕ್ಷರು, ಸದಸ್ಯರು ಜೊತೆಯಾಗಿ ಪನ್ನೀರು ಸಿಂಪಡಿಸಿ, ಶಾಲು ಹೊದಿಸಿ, ಗುಲಾಬಿ ಹೂ ನೀಡಿ ಹಾಗೂ ಸ್ಮರಣಿಕೆಯಾಗಿ ಫೈಲ್ ವಿತರಿಸುವ ಮೂಲಕ ಗೌರವಿಸಿದರು.

ಶಾಲಾ ಶಿಕ್ಷಕ ವೃಂದದ ಜೊತೆಗೆ ಅಡುಗೆ ಸಿಬ್ಬಂದಿಗಳನ್ನೂ‌ ಸ್ವಾಗತಿಸಲಾಯಿತು.‌ ಎಲ್ಲರ ಪರವಾಗಿ ಶಾಲಾ ಮುಖ್ಯ ಶಿಕ್ಷಕಿ ಬೆನೆಡಿಕ್ಟ ಆಗ್ನೇಸ್ ಮೆಂಡೋನ್ಸ್ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಾಲತಿ‌ ಮಾತನಾಡಿ, ಶಿಕ್ಷಕರಿಗೆ ಸ್ವಾಗತ ಬಯಸುವ ಈ ಕಾರ್ಯಕ್ರಮ ರಾಜ್ಯದಲ್ಲೇ ಮೊದಲ ಬಾರಿಗೆ ಎಂಬಂತೆ ನಡೆಯುತ್ತಿದೆ. ನಿಜಕ್ಕೂ ಇದು ಮಾದರಿ ಕಾರ್ಯಕ್ರಮ ಎಂದರು.

ವೀರಕಂಭ ಗ್ರಾಪಂ ಅಭಿವೃದ್ಧಿ ಅಧಿಕಾರಿ ಶಂಭು ಕುಮಾರ್ ಶರ್ಮ, ಕಲ್ಲಡ್ಕ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಅಧ್ಯಕ್ಷ ಗಣೇಶ್ ನೆಟ್ಲ, ನಿಕಟಪೂರ್ವ ಅಧ್ಯಕ್ಷ ಮಾಧವ ಸಾಲ್ಯಾನ್ ಕುದ್ರೆಬೆಟ್ಟು, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಸುಧಾಕರ ವೀರಕಂಭ ಹಾಗೂ ವಿಶ್ವನಾಥ ಎರ್ಮೆಮಜಲು, ಶಾಲೆಯ ಹಿರಿಯ ವಿದ್ಯಾರ್ಥಿಗಳಾದ ಕೃಷ್ಣಪ್ಪ ಪೂಜಾರಿ ಕೆಪುಲಕೋಡಿ ಮತ್ತು ಪ್ರಕಾಶ್ ಬೆತ್ತಸರವು, ಸ್ನೇಹ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಕುಸುಮಾ ಶೆಟ್ಟಿ, ಆಶಾ ಕಾರ್ಯಕರ್ತೆ ಕೋಮಲಾಕ್ಷಿ, ಹಿರಿಯ ವಿದ್ಯಾರ್ಥಿ ಸಂಘದ ಸಂಘಟನಾ ಕಾರ್ಯದರ್ಶಿ ಚಿನ್ನಾ ಮೈರಾ, ಶಾಲಾ ಮುಖ್ಯ ಶಿಕ್ಷಕಿ ಬೆನೆಡಿಕ್ಟ ಆಗ್ನೇಸ್ ಮೆಂಡೋನ್ಸ್, ಶಾಲಾ ಶಿಕ್ಷಕ ವೃಂದ, ಆಯಾ ಸಿಬ್ಬಂದಿ, ಅಡುಗೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉದಯ ಕೆಲಿಂಜ ಕಾರ್ಯಕ್ರಮ ನಿರ್ವಹಿಸಿದರು.

ಮಾದರಿ ಶಾಲೆ: ಮಜಿ ವೀರಕಂಭ ಶಾಲೆಯಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಪೂರ್ವ ಪ್ರಾಥಮಿಕದಿಂದ ಎಂಟನೇ ತರಗತಿಯವರೆಗೆ ಸುಮಾರು 280 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದರು. 2026-27ನೇ ಶೈಕ್ಷಣಿಕ ಸಾಲಿನಲ್ಲಿ ಈಗಾಗಲೇ ಪೂರ್ವ ಪ್ರಾಥಮಿಕ ತರಗತಿಗಳಿಗೆ 25 ಹಾಗೂ ಮೊದಲನೇ ತರಗತಿಗೆ 27 ಮಕ್ಕಳು ದಾಖಲಾಗಿದ್ದಾರೆ.

ರಾಜ್ಯದಲ್ಲೇ ಎಲ್ಲ ತರಗತಿಗಳಿಗೆ ಸ್ಮಾರ್ಟ್ ಟಿವಿ ಅಳವಡಿಸಿದ ಮೊದಲ ಸರ್ಕಾರಿ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಶಾಲೆಯು ವಾಚನಾಲಯ, ಕಂಪ್ಯೂಟರ್ ಕೊಠಡಿ, ಬಾಲವನ, ವಿದ್ಯುತ್ ಬಳಕೆಗಾಗಿ ಸೌರ ವಿದ್ಯುತ್‌ ಮೂಲ ಹೊಂದಿದ್ದು, ದಾನಿಗಳು ಹಾಗೂ ವಿವಿಧ ಕಂಪನಿಗಳ ಸಿಎಸ್‌ಆರ್ ನಿಧಿಯ ನೆರವಿನಿಂದ ನೂತನ ಕಟ್ಟಡ ಸೇರಿದಂತೆ ಅಗತ್ಯವಿರುವ ಎಲ್ಲ ಮೂಲ ಸೌಕರ್ಯಗಳ‌ ಜೊತೆ ಮಾದರಿ ಶಾಲೆಯಾಗಿ ಬೆಳೆಯುತ್ತಿದೆ.ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರನ್ನು ಸ್ವಾಗತಿಸುವ ಹೊಸ ಸಂಪ್ರದಾಯ ಮೂಲಕ ಮಜಿ ವೀರಕಂಭ ಶಾಲೆ ಇತರ ಶಾಲೆಗಳಿಗೆ ಮಾದರಿಯಾಗಿದೆ.

-ಮಾಲತಿ, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ

*ಒತ್ತಡಗಳ‌ ನಡುವೆ ಕಾರ್ಯನಿರ್ವಹಿಸುವ ಶಿಕ್ಷಕರಿಗೆ ಸಮುದಾಯದಿಂದ ಸಿಗುವ ಪ್ರೀತಿ-ಬೆಂಬಲ ಮರುಭೂಮಿಯಲ್ಲಿ‌ ದೊರೆತ ಓಯಸಿಸ್ ನಂತೆ ಹುರುಪು ತುಂಬಿದೆ. -ಬೆನಡಿಕ್ಟ ಆಗ್ನೇಸ್ ಮೆಂಡೋನ್ಸ, ಮಜಿ ಶಾಲಾ ಮುಖ್ಯ ಶಿಕ್ಷಕಿ

*ಶಿಕ್ಷಕರ ಶ್ರಮವನ್ನು ಗುರುತಿಸಿ, ಗೌರವಿಸುವ ಕಾರ್ಯಕ್ರಮಗಳು ಎಲ್ಲೆಡೆ ನಡೆಯಬೇಕಿದೆ.-ಶಂಭು ಕುಮಾರ್ ಶರ್ಮ, ಅಭಿವೃದ್ಧಿ ಅಧಿಕಾರಿ, ವೀರಕಂಭ ಗ್ರಾಪಂ