ಮಾರಣಾಂತಿಕ ರೇಬಿಸ್‌ ಬಗ್ಗೆ ಎಚ್ಚರಿಕೆ, ಜಾಗೃತಿ ಅಗತ್ಯ

| Published : Sep 12 2024, 01:55 AM IST

ಮಾರಣಾಂತಿಕ ರೇಬಿಸ್‌ ಬಗ್ಗೆ ಎಚ್ಚರಿಕೆ, ಜಾಗೃತಿ ಅಗತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಹುಚ್ಚು ನಾಯಿ ಕಡಿತದ ರೇಬೀಸ್ ರೋಗ ಮಾರಣಾಂತಿಕ ರೋಗವಾಗಿದ್ದು, ಆ ದಿಸೆಯಲ್ಲಿ ಜನಜಾಗೃತಿ ವಹಿಸುವುದು ಅತ್ಯಗತ್ಯ ಎಂದು ಪಶುವೈದ್ಯಾಧಿಕಾರಿ ಡಾ.ಆರ್.ಬಿ.ನಾಗರಳ್ಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಹುಚ್ಚು ನಾಯಿ ಕಡಿತದ ರೇಬೀಸ್ ರೋಗ ಮಾರಣಾಂತಿಕ ರೋಗವಾಗಿದ್ದು, ಆ ದಿಸೆಯಲ್ಲಿ ಜನಜಾಗೃತಿ ವಹಿಸುವುದು ಅತ್ಯಗತ್ಯ ಎಂದು ಪಶುವೈದ್ಯಾಧಿಕಾರಿ ಡಾ.ಆರ್.ಬಿ.ನಾಗರಳ್ಳಿ ಹೇಳಿದರು.

ತಾಲೂಕಿನ ಚಿಕ್ಕಪಡಸಲಗಿ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಮಂಗಳವಾರ ಜಿಲ್ಲಾ ಪಂಚಾಯತ್, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಬಾಗಲಕೋಟೆ ಜಿಲ್ಲಾ ಪ್ರಾಣಿದಯಾ ಸಂಘ ಸಂಯುಕ್ತ ಆಶ್ರಯದಲ್ಲಿ ವಿಶ್ವ ರೇಬೀಸ್ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಪ್ರಾಣಿಜನ್ಯ ರೋಗಗಳ ಬಗ್ಗೆ ಶಾಲಾ ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಕು ನಾಯಿಗಳ ಬಗ್ಗೆಯೂ ಎಚ್ಚರಿಕೆ ವಹಿಸಬೇಕು. ಪ್ರಾಣಿಜನ್ಯ ರೋಗ ರೇಬಿಸ್ ಲಿಸ್ಸಾ ಎಂಬ ವೈರಾಣುವಿನಿಂದ ಹರಡುವ ಮಾರಣಾಂತಿಕ ರೋಗವಾಗಿದೆ. ಒಮ್ಮೆ ಈ ರೋಗಕ್ಕೆ ತುತ್ತಾಗಿ ಸರಿಯಾದ ರೀತಿಯಲ್ಲಿ ಉಪಚಾರ ಕೈಗೊಳ್ಳದಿದ್ದರೇ ಜೀವಕ್ಕೆ ಕಂಟಕ ಎದುರಾಗುತ್ತದೆ ಎಂದು ಎಚ್ಚರಿಸಿದರು. ಸಮೀಕ್ಷೆಗಳ ಪ್ರಕಾರ ಪ್ರತಿವರ್ಷ ನಮ್ಮ ದೇಶದಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಜನರು ಈ ರೋಗದಿಂದ ತಮ್ಮ ಅಮೂಲ್ಯ ಜೀವ ಕಳೆದುಕೊಳ್ಳುತ್ತಲ್ಲಿದ್ದಾರೆ. ರೇಬೀಸ್ ರೋಗಕ್ಕೆ ಒಳಗಾದರೇ ಗುಣಪಡಿಸುವುದು ಕಷ್ಟಕರ. ಆದರೆ, ಅದನ್ನು ತಡೆಗಟ್ಟಲು ಸಾಧ್ಯ. ಈ ರೋಗದ ಬಗ್ಗೆ ಅಸಡ್ಡೆ, ನಿರ್ಲಕ್ಷ್ಯ ಸಲ್ಲದು ಎಂದರು.ಮುಖ್ಯವಾಗಿ ರೇಬೀಸ್ ಸೋಂಕು ಪ್ರಾಣಿಗಳ ಕಡಿತದಿಂದ, ರೋಗಾಣುವಿರುವ ಜೊಲ್ಲು ಸಂಪರ್ಕದಿಂದ ವೈರಾಣು ಗಾಯದ ಮೂಲಕ ದೇಹವನ್ನು ಫಸರಿಸಿ ರೇಬೀಸ್ ರೋಗವನ್ನುಂಟು ಮಾಡುತ್ತದೆ. ನಾಯಿ, ಬೆಕ್ಕು, ಮೇಕೆ, ಹಸು, ಎಮ್ಮೆ, ಕೋತಿ, ತೋಳ, ನರಿ, ಮುಂಗಸಿ, ಕುದರೆ, ಬಾವುಲಿ, ಇಲಿ ಮೊದಲಾದ ಪ್ರಾಣಿಗಳು ಕಚ್ಚಿದಾಗ ಅಥವಾ ನೆಕ್ಕಿದಾಗ ರೇಬೀಸ್ ಹರಡುತ್ತದೆ. ನಮ್ಮ ದೇಶದಲ್ಲಿ ಭಾಗಶಃ ಜನತೆಗೆ ಹುಚ್ಚುನಾಯಿ ಕಡಿತದಿಂದ ಶೇ.97 ರಷ್ಟು ರೇಬೀಸ್ ರೋಗದ ಲಕ್ಷಣಗಳು ಸಾಮಾನ್ಯವಾಗಿ ಪತ್ತೆವಾಗುತ್ತಲ್ಲಿವೆ ಎಂದರು. ರೇಬೀಸ್ ವೈರಾಣು ಕಚ್ಚಿದ ಜಾಗದಿಂದ ನರಗಳ ಮೂಲಕ ನರಮಂಡಲದ ವ್ಯವಸ್ಥೆಗೆ ತಲುಪಿ ರೋಗದ ಲಕ್ಷಣಗಳನ್ನು ಸೃಷ್ಟಿಸುತ್ತದೆ. ದೇಹದ ಯಾವ ಭಾಗದಲ್ಲಿ ನಾಯಿ ಕಚ್ಚಿರುವುದರ ಮೇಲೆ ರೋಗದ ಲಕ್ಷಣಗಳು ಒಂದು ವಾರದಿಂದ ಒಂದು ವರ್ಷದೊಳಗೆ ಗೋಚರಿಸುತ್ತದೆ. ಈ ರೋಗದ ಲಕ್ಷಣಗಳು ನಾಯಿ, ಜಾನುವಾರು, ಮನುಷ್ಯರಲ್ಲಿ ವಿಭಿನ್ನವಾಗಿ ಕಂಡು ಬರುತ್ತವೆ. ಯಾವುದೇ ಪ್ರಾಣಿ ಕಚ್ಚಿದಾಗ ಕೂಡಲೇ ಸಾಬೂನಿನಿಂದ ಯಥೇಚ್ಛವಾಗಿ ನೀರನ್ನು ಬಳಸಿ ಗಾಯವನ್ನು ಸ್ವಚ್ಛವಾಗಿ ತೊಳೆದು ಅ್ಯಂಟಿಸೆಪ್ಟಿಕ್ ಜೌಷಧಿ ಹಚ್ಚಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಹತ್ತಿ, ಬಟ್ಟೆಯಿಂದ ಗಾಯವನ್ನು ಮುಚ್ಚಬಾರದು. ತಕ್ಷಣವೇ ಸೂಕ್ತ ಚಿಕಿತ್ಸೆಗಾಗಿ ವೈದ್ಯರನ್ನು ಭೇಟಿಯಾಗಿ ಪ್ರಥಮ ಚಿಕಿತ್ಸಾ ಉಪಚಾರದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು. ಚಿಕ್ಕಪಡಸಲಗಿ ಪಶುವೈದ್ಯಾಧಿಕಾರಿ ಡಾ.ಮಂಜುನಾಥ ಹೊಳಗಿ, ಪಶು ವೈದ್ಯಕೀಯ ಪರಿವೀಕ್ಷಕ ಆರ್.ಎಸ್.ಮಿಜಿ೯, ಕೃತಕ ಗರ್ಭಧಾರಣ ಕಾರ್ಯಕರ್ತ ರಮೇಶ್ ಅಂಬಿ, ಪ್ರಭಾರ ಮುಖ್ಯೋಪಾಧ್ಯಾಯ ಬಸವರಾಜ ಜಾಲೋಜಿ, ವಿಶ್ರಾಂತ ಹಿರಿಯ ಶಿಕ್ಷಕ ಬಸವರಾಜ ಅನಂತಪೂರ, ಶಿಕ್ಷಕರಾದ ಈರಣ್ಣ ದೇಸಾಯಿ, ಜಿ.ಆರ್.ಜಾಧವ, ಶಿಕ್ಷಕಿಯರಾದ ಕವಿತಾ ಅಂಬಿ, ಸಹನಾ ಹತ್ತಳ್ಳಿ, ಪ್ರಮೀಳಾ ತೆಲಸಂಗ ಇತರರಿದ್ದರು. ಶಿಕ್ಷಕ ಸದಾಶಿವ ಸಿದ್ದಾಪೂರ ನಿರೂಪಿಸಿ, ವಂದಿಸಿದರು.