ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ವಿಜಯಪುರ ಕೇಂದ್ರ ಕಾರಾಗೃಹದಲ್ಲಿ ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಿಸಲಾಯಿತು. ಜಿಲ್ಲಾ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕಿ ಉಮಾದೇವಿ ಸೊನ್ನದ ಮಾತನಾಡಿ, ಸಮಾಜದಲ್ಲಿಯ ಅನಕ್ಷರಸ್ಥರನ್ನು ಗರುತಿಸಿ, ಅಕ್ಷರಸ್ಥರನ್ನಾಗಿ ಮಾಡುವ ಉಲ್ಲಾಸ್ ಎನ್‌ಐಎಲ್‌ಪಿ, ೧೦೦೦ ಸಂಪೂರ್ಣ ಗ್ರಾಮ ಪಂಚಾಯತಿ ಹಾಗೂ ಲಿಂಕ್ ಡಾಕ್ಯುಮೆಂಟ್ ಸಾಕ್ಷರತಾ ಕಾರ್ಯಕ್ರಮಗಳ ಮೂಲಕ ಸಾಕ್ಷರರನ್ನಾಗಿ ಮಾಡುವ ಕಾರ್ಯ ಯಶಸ್ವಿಯಾಗಿ ನಡೆದಿರುವುದು ಹೆಮ್ಮೆಯ ವಿಷಯ ಎಂದರು.ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಕಾರಾಗೃಹದ ಅಧೀಕ್ಷಕ ಡಾ.ಐ.ಜೆ.ಮ್ಯಾಗೇರಿ ಮಾತನಾಡಿ, ಯಾವ ವ್ಯಕ್ತಿ ಜ್ಞಾನವೆಂಬ ಜ್ಯೋತಿಯನ್ನು ತನ್ನ ಜೀವನದಲ್ಲಿ ಬೆಳಗಿಸಿಕೊಳ್ಳುತ್ತಾನೋ ಆತನೇ ಸಮಾಜಕ್ಕೆ ವಿಶೇಷ ಕೊಡುಗೆ ನೀಡುತ್ತಾನೆ. ನಿಮ್ಮಿಂದಲೇ ಈ ಬಂಧಿಖಾನೆ ಎಂಬ ವಿಷಯ ಕೊನೆಯಾಗಬೇಕು, ನಿವೇಲ್ಲರೂ ನಿಮ್ಮ ಮಕ್ಕಳಿಗೆ ಶಿಕ್ಷಣ ನೀಡುವುದರ ಮುಖಾಂತರ ಸುಸ್ಥಿರ ಸಮಾಜ ನಿರ್ಮಿಸಲು ಕೈಜೋಡಿಸಬೇಕು ಎಂದು ಕರೆ ನೀಡಿದರು.ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಸುರೇಶ ಕುಪ್ಪಿ ಮಾತನಾಡಿ, ಅನಕ್ಷರತೆ ಹೋಗಲಾಡಿಸಿ, ಪ್ರತಿಯೊಬ್ಬರನ್ನೂ ಸಾಕ್ಷರರನ್ನಾಗಿ ಮಾಡುವ ಸಂಕಲ್ಪ ಮಾಡೋಣ. ವಿದ್ಯಾವಂತ ಸಮುದಾಯದವರು ಅನಕ್ಷರಸ್ಥರಿಗೆ, ಅಕ್ಷರ ಜ್ಞಾನ ನೀಡುವ ಕೆಲಸವಾಗಬೇಕು ಎಂದು ಮನವಿ ಮಾಡಿದರು.ಅಲ್ಲದೇ, ಕಾರಾಗೃಹದಲ್ಲಿ ಆಯೋಜಿಸಿದ್ದ ಸ್ಪರ್ಧೆಗಳಲ್ಲಿ ಭಾಗವಹಿಸಿದವರಿಗೆ ಬಹುಮಾನ ಮತ್ತು ಅನಕ್ಷರಸ್ಥ ಕೈದಿಗಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು. ಜೈಲರ್‌ಗಳಾದ ಎ.ಕೆ.ಅನ್ಸಾರಿ, ಜಿ.ಕೆ.ಕುಲಕರ್ಣಿ, ಸವಿತಾ ಬೆಳ್ಳುಂಡಗಿ, ಡಿ.ಎಸ್.ದಿಕ್ಷಿತ್, ಸವಿತಾ ಕುಲಕರ್ಣಿ, ಜಿ.ಎಸ್.ಕಾಪಸೆ, ಸಜಾ ಬಂದಿ, ಮೌನೇಶ, ನದಾಫ್ ಮುಂತಾದವರು ಇದ್ದರು.