ಯಲ್ಲಾಪುರ: 15 ದಿನಗಳಲ್ಲಿ ಗ್ರಾಪಂ ವ್ಯಾಪ್ತಿಯ ಅವ್ಯವಸ್ಥೆ ಸರಿಪಡಿಸದಿದ್ದರೆ ತಾಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಕುಂದರಗಿ ಗ್ರಾಪ ಮಾಜಿ ಅಧ್ಯಕ್ಷ ಗಣೇಶ ಹೆಗಡೆ ಎಚ್ಚರಿಸಿದ್ದಾರೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಪಂಗಳಲ್ಲಿ ಜನಪ್ರತಿನಿಧಿಗಳ ವ್ಯವಸ್ಥೆ ಇಲ್ಲ, ಆಡಳಿತಾಧಿಕಾರಿಗಳ ನಿರ್ವಹಣೆಯಿಂದಾಗಿ ತಾಲೂಕಿನ ಎಲ್ಲ ಪಂಚಾಯಿತಿ ವ್ಯಾಪ್ತಿಯ ಶಾಲೆ, ಆರೋಗ್ಯ ಕೇಂದ್ರ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಣದಾಗಿದೆ. ಮಳೆಗಾಲ ಆರಂಭವಾಗುವುದಕ್ಕೂ ಮೊದಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ಇರುವುದರಿಂದ ರೋಗದ ಆತಂಕ ಉಂಟಾಗಿದೆ. ೧೫ ದಿನಗಳೊಳಗಾಗಿ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ತಾಪಂ ಕಚೇರಿಯ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಹೇಳಿದರು.

ಕರ ವಸೂಲಿ ವ್ಯವಸ್ಥೆ, ಪಂಚಾಯಿತಿ ಜನಪ್ರತಿನಿಧಿಗಳಿಂದ ಆಗಬೇಕಾಗಿತ್ತು. ಆದರೆ ಸರ್ಕಾರ ಅಧಿಕಾರಿಗಳಿಗೆ ಆ ಅಧಿಕಾರ ನೀಡಿದೆ. ಅವರು ಮನಬಂದಂತೆ ತೆರಿಗೆ ಸಂಗ್ರಹಿಸುತ್ತಿದ್ದಾರೆ. ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಈ ಕುರಿತು ತಾಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದರು.

ಬಿಜೆಪಿ ಮುಖಂಡ ಟಿ.ಆರ್. ಹೆಗಡೆ ತೊಂಡೆಕೆರೆ ಮಾತನಾಡಿ, ಆಶ್ರಯ ಯೋಜನೆ ಅನುದಾನ ಬಿಡುಗಡೆಯಾಗದೇ ಮನೆ ಕಾರ್ಯ ಅರ್ಧದಲ್ಲೇ ನಿಂತಿದೆ. ಅನೇಕ ಹಳ್ಳಿಗಳಿಗೆ ಬಸ್ ಹೋಗದೇ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ರಸ್ತೆಗಳಲ್ಲಿ ಸಂಚರಿಸುವ ಸ್ಥಿತಿ ಇಲ್ಲವಾಗಿದೆ. ಸ್ಥಳೀಯ ಜನಪ್ರತಿನಿಧಿಗಳ ಆಡಳಿತ ಇಲ್ಲದೇ ಇರುವುದರಿಂದ ಕೇಂದ್ರದಿಂದ ಬರುವ ಹಣ ಕೂಡ ನಿಂತಿದೆ ಎಂದರು.

ಬಿಜೆಪಿ ಮಾಧ್ಯಮ ವಕ್ತಾರ ಕೆ.ಟಿ. ಹೆಗಡೆ ಮಾತನಾಡಿ, ದೇಹಳ್ಳಿ ಕ್ರಾಸಿನಿಂದ ಬಿಸಗೋಡಿಗೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದೆ. ತಕ್ಷಣ ತಾತ್ಕಾಲಿಕ ರಿಪೇರಿ ಮಾಡಬೇಕು ಎಂದು ಆಗ್ರಹಿಸಿದರು.


ಪ್ರಮುಖರಾದ ವಿಶ್ವನಾಥ ಹಳೆಮನೆ, ಸದಾಶಿವ ಚಿಕ್ಕೊತ್ತಿ ಇದ್ದರು.