ಸಿಂಡಿಕೇಟ್‌ ಸಭೆಯಲ್ಲಿ ಭಾಗವಹಿಸದಂತೆ ವಿಶ್ವವಿದ್ಯಾಲಯಗಳ 9 ನಾಮ ನಿರ್ದೇಶಕರಿಗೆ ಸೂಚನೆ

| Published : Sep 05 2024, 02:24 AM IST / Updated: Sep 05 2024, 07:18 AM IST

ಸಾರಾಂಶ

ಸಿಂಡಿಕೇಟ್‌ ಸಭೆಯಲ್ಲಿ ಭಾಗವಹಿಸದಂತೆ ಬೆಂಗಳೂರು ನಗರ, ಬೆಂಗಳೂರು, ಉತ್ತರ ವಿವಿಗಳ ನಾಮ ನಿರ್ದೇಶಿತರಿಗೆ ಹೈಕೋರ್ಟ್‌ ಸೂಚನೆ ನೀಡಿದೆ.

 ಬೆಂಗಳೂರು : ಬೆಂಗಳೂರು ವಿಶ್ವವಿದ್ಯಾಲಯಗಳಿಗೆ ನೂತನವಾಗಿ ನಾಮನಿರ್ದೇಶನಗೊಂಡಿರುವ ಒಂಬತ್ತು ಮಂದಿ ಸಿಂಡಿಕೇಟ್‌ ಸದಸ್ಯರು ಆ ಸ್ಥಾನದಲ್ಲಿ ಕಾರ್ಯನಿರ್ವಹಿಸದಂತೆ ಹಾಗೂ ಸಿಂಡಿಕೇಟ್ ಸಭೆಯಲ್ಲಿ ಭಾಗವಹಿಸದಂತೆ ಹೈಕೋರ್ಟ್‌ ಬುಧವಾರ ಮೌಖಿಕವಾಗಿ ಸೂಚಿಸಿದೆ.

ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ನಗರ ವಿಶ್ವವಿದ್ಯಾಲಯ ಮತ್ತು ಬೆಂಗಳೂರು ಉತ್ತರ ವಿಶ್ವವಿದ್ಯಾಲಯಗಳಿಗೆ ಒಂಬತ್ತು ಸಿಂಡಿಕೇಟ್‌ ಸದಸ್ಯರ ನಾಮನಿರ್ದೇಶನ ಮಾಡಿ ರಾಜ್ಯ ಉನ್ನತ ಶಿಕ್ಷಣ ಇಲಾಖೆ ಆ.27ರಂದು ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ ಶಿಕ್ಷಣ ತಜ್ಞರಾದ ಡಾ.ಪಿ.ಬಿ. ಜಯಕೃಷ್ಣ ಸೇರಿ ನಾಲ್ವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್‌ ಚಂದನಗೌಡರ್‌ ಅವರ ಪೀಠ ಈ ಸೂಚನೆ ನೀಡಿದೆ

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರಾದ ಬಿ.ಎಸ್‌. ನಂದಿನಿ ಹಾಜರಾಗಿ, ನಾಮನಿರ್ದೇಶಿತ ಸಿಂಡಿಕೇಟ್‌ ಸದಸ್ಯರು ತಮ್ಮ ಸ್ಥಾನದಲ್ಲಿ ಕಾರ್ಯನಿರ್ವಹಣೆ ಮಾಡದಂತೆ ಹಿಂದಿನ ವಿಚಾರಣೆ ವೇಳೆ ನ್ಯಾಯಪೀಠ ಮೌಖಿಕವಾಗಿ ಸೂಚಿಸಿತ್ತು. ಆದರೆ, ಇತ್ತೀಚೆಗೆ ನಡೆದ ಬೆಂಗಳೂರು ಉತ್ತರ ವಿವಿಯ ಘಟಿಕೋತ್ಸವದಲ್ಲಿ ನಾಮನಿರ್ದೇಶಿತ ಸಿಂಡಿಕೇಟ್‌ ಸದಸ್ಯರು ಭಾಗವಹಿಸಿದ್ದಾರೆ ಎಂದು ತಿಳಿಸಿ ಫೋಟೋಗಳ ಸಹಿತ ಮೆಮೊ ಸಲ್ಲಿಸಿದರು.

ಅದನ್ನು ಪರಿಗಣಿಸಿದ ನ್ಯಾಯಪೀಠ, ಕೋರ್ಟ್‌ ಸೂಚನೆಯಿದ್ದರೂ ನಾಮನಿರ್ದೇಶಿತ ಸದಸ್ಯರು ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ. ಸಿಂಡಿಕೇಟ್‌ ಸದಸ್ಯರಿಗೆ ಆ ಸ್ಥಾನದಲ್ಲಿ ಕಾರ್ಯ ನಿರ್ವಹಿಸದಂತೆ ಸೂಚನೆ ನೀಡುವಂತೆ ಸರ್ಕಾರದ ಪರ ವಕೀಲರಿಗೆ ಮೌಖಿಕವಾಗಿ ಸೂಚಿಸಿತು.

ವಿಚಾರಣೆಗೆ ಹಾಜರಿದ್ದ ಸರ್ಕಾರದ ಪರ ವಕೀಲರು, ಪ್ರತಿವಾದಿಗಳಾಗಿರುವ ಸಿಂಡಿಕೇಟ್‌ ಸದಸ್ಯರು ಶೈಕ್ಷಣಿಕ ಕ್ಷೇತ್ರದಲ್ಲಿ ಪರಿಣಿತರಾಗಿದ್ದಾರೆ. ಅವರ ನಾಮನಿರ್ದೇಶನ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಹಾಗೆಯೇ, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲಾಗುವುದು. ಅದಕ್ಕಾಗಿ ಕಾಲಾವಕಾಶ ನೀಡಬೇಕು ಎಂದು ಕೋರಿದರು.ಮತ್ತೊಂದೆಡೆ ಪ್ರತಿವಾದಿಗಳಾಗಿರುವ ಸಿಂಡಿಕೇಟ್‌ ಸದಸ್ಯರ ಪರ ವಕೀಲರು ಹಾಜರಾಗಿ, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದರು. ಆ ಮನವಿಗೆ ಒಪ್ಪಿದ ನ್ಯಾಯಪೀಠವು ಅರ್ಜಿ ವಿಚಾರಣೆಯನ್ನು ಮುಂದೂಡಿತು.

ಪ್ರಕರಣದ ಹಿನ್ನೆಲೆ

ಡಾ। ಜಯಶ್ರೀ ಹೆಗ್ಡೆ, ಎಂ.ಎ. ಮಹದೇವ ನಾಯ್ಕ, ರಮೇಶ್‌ ಬಾಬು, ಆಯೇಷಾ ಫರ್ಜಾನಾ, ವಿ.ಶಿವಕುಮಾರ್‌, ಎಸ್‌.ಆರ್‌. ಸಹನಾ, ಜೈದೀಪ್‌, ಅರ್ಬಾಜ್‌ ಪಾಷಾ ಮತ್ತು ಎಂ.ಗೋಪಾಲ ಗೌಡ ಅವರನ್ನು ಬೆಂಗಳೂರು ವಿ.ವಿ., ಬೆಂಗಳೂರು ನಗರ ವಿ.ವಿ. ಮತ್ತು ಬೆಂಗಳೂರು ಉತ್ತರ ವಿ.ವಿ ಸಿಂಡಿಕೇಟ್‌ ಸದಸ್ಯರ ಸ್ಥಾನಕ್ಕೆ ನಾಮ ನಿರ್ದೇಶನ ಮಾಡಿ ರಾಜ್ಯ ಉನ್ನತ ಶಿಕ್ಷಣ (ವಿಶ್ವವಿದ್ಯಾಲಯಗಳು-2) ಇಲಾಖೆಯ ಅಧೀನ ಕಾರ್ಯದರ್ಶಿ 2024ರ ಆ.27ರಂದು ಅಧಿಸೂಚನೆ ಹೊರಡಿಸಿದ್ದರು. ಈ ಅಧಿಸೂಚನೆ ಪ್ರಶ್ನಿಸಿರುವ ಅರ್ಜಿದಾರರು, ನಿಗದಿತ ಅರ್ಹತೆ ಇಲ್ಲದಿದ್ದರೂ ಈ ಒಂಬತ್ತು ಮಂದಿಯನ್ನು ಸಿಂಡಿಕೇಟ್‌ ಸದಸ್ಯರಾಗಿ ಸರ್ಕಾರ ನಾಮನಿರ್ದೇಶನ ಮಾಡಿದೆ ಎಂದು ಆಕ್ಷೇಪಿಸಿದ್ದಾರೆ.