ಅರ್ಹರಿಗೆ ಗ್ಯಾರಂಟಿ ತಲುಪಿಸುವಲ್ಲಿ ವಿಫಲ

| Published : Oct 31 2025, 01:15 AM IST

ಸಾರಾಂಶ

ಸಭೆ ಕರೆದು ಸರ್ಕಾರದ ನಿಯಮಾನುಸಾರ ಪಡಿತರ ವಿತರಣೆ ಮಾಡುವಂತೆ ಕ್ರಮ ಕೈಗೊಳ್ಳಬೇಕೆಂ

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ಕೆಲವು ಅಧಿಕಾರಿಗಳು ವಿಫಲರಾಗಿದ್ದು, ಇದೇ ಚಾಳಿ ಮುಂದುವರಿದರೆ ಅಂತಹವರ ವಿರುದ್ದ ಕಠಿಣ ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕಾಗುತ್ತದೆ ಎಂದು ಎರಡು ತಾಲೂಕುಗಳ ಅನುಷ್ಠಾನ ಸಮಿತಿಗಳ ಅಧ್ಯಕ್ಷರಾದ ಎಂ.ಎಸ್. ಮಹದೇವ್ ಮತ್ತು ಉದಯಶಂಕರ್ ಎಚ್ಚರಿಕೆ ನೀಡಿದರು.ಪಟ್ಟಣದ ತಾಪಂ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ಗುರುವಾರ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಕೆ.ಆರ್‌. ನಗರ ತಾಲೂಕು ಸಮಿತಿ ಅಧ್ಯಕ್ಷ ಎಂ.ಎಸ್. ಮಹದೇವ್ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್, ಹುಟ್ಟೂರಾದ ಅಡಗೂರು ಗ್ರಾಮದ ಅವರ ತೋಟದ ಬಳಿ ಟ್ರಾನ್ಸ್ ಫಾರ್ಮರ್ ಕಂಬಗಳು ವಾಲಿಕೊಂಡಿದ್ದು, ಕೂಡಲೇ ಅವುಗಳನ್ನು ಬದಲಾಯಿಸಬೇಕೆಂದು ಸೂಚಿಸಿದರು.ಆಹಾರ ಇಲಾಖೆಯ ಅಧಿಕಾರಿಗಳು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳ ಅಧ್ಯಕ್ಷರುಗಳ ಸಮ್ಮುಖದಲ್ಲಿ ನ್ಯಾಯಬೆಲೆ ಅಂಗಡಿಗಳ ಮಾಲೀಕರ ಸಭೆ ಕರೆದು ಸರ್ಕಾರದ ನಿಯಮಾನುಸಾರ ಪಡಿತರ ವಿತರಣೆ ಮಾಡುವಂತೆ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.ಸಾಲಿಗ್ರಾಮ ತಾಲೂಕು ಅಧ್ಯಕ್ಷ ಉದಯಶಂಕರ್ ಮಾತನಾಡಿ, ಸಾಲಿಗ್ರಾಮದ ಸೆಸ್ಕಾಂ ಕಚೇರಿಯ ಕೆಲವು ಲೈನ್ ಮ್ಯಾನ್ ಗಳು ಸಾರ್ವಜನಿಕರಿಗೆ ಸೇವೆ ನೀಡುವ ಸಮಯದಲ್ಲಿ ಉಡಾಫೆಯಿಂದ ವರ್ತಿಸುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬರುತ್ತಿದ್ದು, ಅಂತಹವರನ್ನು ಬೇರೆಡೆಗೆನಿಯೋಜನೆ ಮಾಡಬೇಕೆಂದು ತಾಕೀತು ಮಾಡಿದರು. ಆಹಾರ ಇಲಾಖೆಯ ನಿಯಮಾನುಸಾರ ನ್ಯಾಯಬೆಲೆ ಅಂಗಡಿಗಳ ಮಾಲೀಕರು ಪ್ರತಿ ತಿಂಗಳು 15 ರಿಂದ 30ರೊಳಗೆ ಪಡಿತರ ವಿತರಣೆ ಮಾಡಬೇಕೆಂಬ ನಿಯಮವಿದ್ದರು ಯಾರು ಅದನ್ನು ಪಾಲಿಸುತ್ತಿಲ್ಲ ಎಂದಾಗ, ಮಧ್ಯ ಪ್ರವೇಶಿಸಿದ ಸಮಿತಿಯ ಸದಸ್ಯ ಸಿ.ಎಸ್. ಮೂರ್ತಿ ಆಹಾರ ಶಿರಸ್ತೇದಾರ್ ಅವರನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ನೀವು ಸಭೆಗೆ ಸರಿಯಾದ ಮಾಹಿತಿ ನೀಡದೆ ನಮ್ಮನ್ನು ದಿಕ್ಕು ತಪ್ಪಿಸುತ್ತಿದ್ದು, ಈ ವರ್ತನೆ ಸರಿಯಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ಸಾಲಿಗ್ರಾಮ ತಾಲೂಕು ಅಧ್ಯಕ್ಷ ಉದಯಶಂಕರ್ ಮಾತನಾಡಿ, ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರುಗಳಿಗೆ ನೋಟೀಸ್ ನೀಡದೆ ಕರ್ತವ್ಯ ಲೋಪವೆಸಗಿ ಸಭೆ ನಡೆಯುವಾಗ ಅಧ್ಯಕ್ಷರನ್ನುಮುಜುಗರಕ್ಕೀಡು ಮಾಡುವ ತಾಪಂ ಸಿಬ್ಬಂದಿಗಳ ವಿರುದ್ದ ಕಠಿಣ ಕ್ರಮಕ್ಕೆ ಶಿಫಾರಸ್ಸು ಮಾಡಿ ಎಂದು ಅಧಿಕಾರಿಗಳಿಗೆ ಹೇಳಿದರು.ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ಕೆಲವು ಸಾರಿ ರಸ್ತೆಗಳಲ್ಲಿಯೇ ಕೆಟ್ಟು ನಿಲ್ಲುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದ್ದು ಈ ಬಗ್ಗೆ ಗಮನಹರಿಸಿ ಬಸ್ಸುಗಳನ್ನು ಸುಸ್ಥಿತಿಯಲಿಡಿ ಎಂದು ಸಲಹೆ ನೀಡಿದ ಸಾಲಿಗ್ರಾಮ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಉದಯಶಂಕರ್ ಅವರಿಗೆ ಸಹಾಯಕ ಸಂಚಾರ ನಿಯಂತ್ರಕ ರಸ್ತೆಗಳನ್ನು ದುರಸ್ಥಿ ಪಡಿಸಿ, ಹೊಸ ಬಸ್ಸುಗಳನ್ನು ಕೊಡಿಸಿ ಎಂದು ಸಲಹೆ ನೀಡಿ ಸಭೆಯ ಕೆಂಗಣ್ಣಿಗೆ ಗುರಿಯಾದರು.ಕೆ.ಆರ್‌. ನಗರ ತಾಲೂಕು ತಾಪಂ ಇಒ ವಿ.ಪಿ. ಕುಲದೀಪ್, ಸಾಲಿಗ್ರಾಮ ತಾಪಂ ಇಒ ಎ.ಎನ್. ರವಿ, ಸಿಡಿಪಿಒ ಸಿ.ಎಂ. ಅಣ್ಣಯ್ಯ, ಆಹಾರ ಇಲಾಖೆಯ ಶಿರಸ್ತೇದ್ದಾರ್, ಸೆಸ್ಕ್‌ ಎಇಇ ಅರ್ಕೇಶ್ ಮೂರ್ತಿ, ಸಮಿತಿಯ ಸದಸ್ಯರಾದ ಸೈಯದ್ ಜಾಬೀರ್, ಕೆಂಚಿಮಂಜು, ಜಿ.ಎಂ. ಹೇಮಂತ್, ಯತೀರಾಜ್, ನಂದೀಶ್, ಕುಮಾರ್, ಚೇತನ್, ಗಂಗಾಧರ್, ಮಹಲಿಂಗಯ್ಯ, ಮೋಹನ್, ಲೋಕೇಶ್, ಕಾಂತರಾಜು, ಅನಿಲ್, ರಂಗಸ್ವಾಮಿ, ರವಿ, ಉಷಾ ಇದ್ದರು.