ಯೋಧ, ರೈತನೇ ನಿಜವಾದ ಹೀರೋಗಳು: ಕೆ.ಟಿ.ಹನುಮಂತು

| Published : Feb 12 2024, 01:36 AM IST / Updated: Feb 12 2024, 04:32 PM IST

ಸಾರಾಂಶ

ಜಗತ್ತಿನಲ್ಲಿ ಭಾರತದ ಸೈನ್ಯ ೪ನೇ ಅತಿದೊಡ್ಡ ಸ್ಥಾನ ಪಡೆದಿದೆ, ದೇಶವು ಪ್ರತಿ ವರ್ಷ ಸೈನ್ಯ ನಿರ್ವಹಣೆಗಾಗಿ ೭೬ ಸಾವಿರ ಕೋಟಿ ರು.ಖರ್ಚು ಮಾಡುತ್ತಿದೆ, ಯೋಧರನ್ನು ಗೌರವಿಸ ಕಾರ್ಯ ಸದಾ ನಡೆಯಬೇಕು, ಅವರ ತ್ಯಾಗ, ಹೋರಾಟದ ಫಲದಿಂದ ನಾವು ನೆಮ್ಮದಿಯಾಗಿದ್ದೇವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಗಡಿಕಾಯುವ ಯೋಧರು ಮತ್ತು ಅನ್ನ ನೀಡುವ ರೈತರು ದೇಶದ ಬೆನ್ನೆಲುಬು ಎಂದು ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ. ಹನುಮಂತು ಹೇಳಿದರು.

ನಗರದಲ್ಲಿರುವ ಸೇವಾ ಕಿರಣ ವೃದ್ಧಾಶ್ರಮ ಸಭಾಂಗಣದಲ್ಲಿ ಕೃಷಿಕ ಲಯನ್ಸ್ ಸಂಸ್ಥೆ ಹಾಗೂ ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಆಯೋಜಿಸಿದ್ದ ರಾಷ್ಟ್ರೀಯ ವೀರ ಯೋಧರ ದಿನಾಚರಣೆ ಪ್ರಯುಕ್ತ ಹುತಾತ್ಮ ವೀರಯೋಧರಿಗೆ ಗೌರವ ನಮನ, ಸಾಧಕರಿಗೆ ಅಭಿನಂದನೆ, ದೇಶಭಕ್ತಿ ಗೀತೆ ಗಾಯನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಜೈ ಜವಾನ್ ಜೈ ಕಿಸಾನ್’ ನಮ್ಮಲ್ಲಿ ರಕ್ತಗತವಾಗಿದೆ. ಜಗತ್ತಿನಲ್ಲಿ ನಿಜವಾದ ಹೀರೋಗಳು ಸಿನಿಮಾ ನಟರಲ್ಲ. ದೇಶ ಕಾಯುವ ಸೈನಿಕರು ಮತ್ತು ದೇಶಕ್ಕೆ ಅನ್ನ ನೀಡುವ ರೈತರು. ಜಗತ್ತಿನಲ್ಲಿ ಭಾರತದ ಸೈನ್ಯ ೪ನೇ ಅತಿದೊಡ್ಡ ಸ್ಥಾನ ಪಡೆದಿದೆ.

ದೇಶವು ಪ್ರತಿ ವರ್ಷ ಸೈನ್ಯ ನಿರ್ವಹಣೆಗಾಗಿ ೭೬ ಸಾವಿರ ಕೋಟಿ ರು.ಖರ್ಚು ಮಾಡುತ್ತಿದೆ, ಯೋಧರನ್ನು ಗೌರವಿಸ ಕಾರ್ಯ ಸದಾ ನಡೆಯಬೇಕು, ಅವರ ತ್ಯಾಗ, ಹೋರಾಟದ ಫಲದಿಂದ ನಾವು ನೆಮ್ಮದಿಯಾಗಿದ್ದೇವೆ ಎಂದು ಹೇಳಿದರು.

ಯೋಧರ ದಿನವನ್ನು ಪ್ರತಿ ವರ್ಷ ಜ.೧೪ ರಂದು ಆಚರಿಸಲಾಗುತ್ತದೆ, ೧೯೫೩ರಲ್ಲಿ ಇದೇ ದಿನದಂದು ಭಾರತೀಯ ಸೇನೆಯ ಮೊದಲ ಕಮಾಂಡ-ಇನ್-ಚೀಫ್, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರು ಔಪಚಾರಿಕವಾಗಿ ಆಚರಿಸಿದ್ದರು. 

ಈ ದಿನವನ್ನು ಮೊದಲು ೨೦೧೬ ರಲ್ಲಿ ಆಚರಿಸಲಾಯಿತು, ಈಗ ಪ್ರತಿ ವರ್ಷ ಸ್ಮರಿಸಲಾಗುತ್ತಿದೆ ಎಂದು ತಿಳಿಸಿದರು.

ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ ಪ್ರೊ. ಡೇವಿಡ್ ಮಾತನಾಡಿ, ಇಂದು ನಾವು ನಿವೃತ್ತ ಯೋಧರನ್ನು ಗೌರವಿಸಿ ಅವರಿಗೆ ಮತ್ತಷ್ಟು ಉತ್ತೇಜನ ನೀಡುತ್ತಿದ್ದೇವೆ. 

ರಾಷ್ಟ್ರೀಯ ಗಣರಾಜ್ಯೋತ್ಸವ ಪಥಸಂಚನದಲ್ಲಿ ಪಾಲ್ಗೊಂಡು ಕೀರ್ತಿ ತಂದ ಯುವ ವಿದ್ಯಾರ್ಥಿನಿಯರಾದ ಆರ್.ಮಮತಾ ಮತ್ತು ಡಿ.ಎಂ.ವಿನುತಾರನ್ನು ಅಭಿನಂದಿಸಿ, ಮಿಲಿಟರಿ ಸೇರುವಂತೆ ಅವರಿಗೆ ಪ್ರೇರಣೆ ನೀಡೋಣ ಎಂದರು.

ನಿವೃತ್ತ ಯೋಧ ಸಂತೆಕಸಲಗೆರೆ ರವಿ, ರಾಷ್ಟ್ರೀಯ ಗಣರಾಜ್ಯೋತ್ಸವ ಪಥಸಂಚಲನಕ್ಕೆ ಆಯ್ಕೆಯಾಗಿದ್ದ ಆರ್.ಮಮತಾ ಮತ್ತು ಡಿ.ಎಂ. ವಿನುತಾರನ್ನು ಅಭಿನಂದಿಸಲಾಯಿತು. ದೇಶಭಕ್ತಿ ಗೀತ ಗಾಯನ ನಡೆಯಿತು.

ಕಾರ್ಯಕ್ರಮದಲ್ಲಿ ಮಾಂಡವ್ಯ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಡಾ ಶಿವಕುಮಾರ್, ಕೃಷಿಕ ಲಯನ್ಸ್ ಸಂಸ್ಥೆ ನಿರ್ದೇಶಕಿ ನೀನಾ ಪಟೇಲ್, ಸೇವಕಿರಣ ಆಶ್ರಮದ ಮೇಲ್ವಿಚಾರಕ ರಾಜಣ್ಣ ಇತರರಿದ್ದರು.