ಹಾರನಹಳ್ಳಿಯಲ್ಲಿ ತ್ಯಾಜ್ಯ ವಿಲೇವಾರಿ ಆಟೋಗೆ ತುಕ್ಕು

| Published : Feb 12 2024, 01:31 AM IST / Updated: Feb 12 2024, 03:57 PM IST

ಹಾರನಹಳ್ಳಿಯಲ್ಲಿ ತ್ಯಾಜ್ಯ ವಿಲೇವಾರಿ ಆಟೋಗೆ ತುಕ್ಕು
Share this Article
  • FB
  • TW
  • Linkdin
  • Email

ಸಾರಾಂಶ

ಹಾರನಹಳ್ಳಿ ಗ್ರಾಮ ಪಂಚಾಯತಿ ವತಿಯಿಂದ ಗ್ರಾಮದ ಸ್ವಚ್ಛತೆಗೆ ೪ ಲಕ್ಷ ರುಪಾಯಿಗಳ ವೆಚ್ಚದಲ್ಲಿ ಖರೀದಿ ಮಾಡಿದ ಸ್ವಚ್ಛ ವಾಹಿನಿ (ಆಪೇ ಆಟೋ) ವಾಹನ ಸಾರ್ವಜನಿಕ ಕೆಲಸಕ್ಕೆ ಬಳಕೆಯಾಗದೆ ಬಿಸಿಲು ಮಳೆಗೆ ನೆನೆದು ತುಕ್ಕು ಹಿಡಿಯುತ್ತಿದೆ.

ಕನ್ನಡಪ್ರಭ ವಾರ್ತೆ ಹಾರನಹಳ್ಳಿ

ಇಲ್ಲಿನ ಗ್ರಾಮ ಪಂಚಾಯತಿ ವತಿಯಿಂದ ಗ್ರಾಮದ ಸ್ವಚ್ಛತೆಗೆ ೪ ಲಕ್ಷ ರುಪಾಯಿಗಳ ವೆಚ್ಚದಲ್ಲಿ ಖರೀದಿ ಮಾಡಿದ ಸ್ವಚ್ಛ ವಾಹಿನಿ (ಆಪೇ ಆಟೋ) ವಾಹನ ಸಾರ್ವಜನಿಕ ಕೆಲಸಕ್ಕೆ ಬಳಕೆಯಾಗದೆ ಬಿಸಿಲು ಮಳೆಗೆ ನೆನೆದು ತುಕ್ಕು ಹಿಡಿಯುತ್ತಿದೆ. 

ಗ್ರಾಮ ಪಂಚಾಯಿತಿ ಆಡಳಿತ ಹಾಗೂ ಸಿಬ್ಬಂದಿ ಕಂಡರೂ ಕಾಣದ ಹಾಗೆ ಕಣ್ಣು ಮುಚ್ಚಿ ತಿರುಗುತ್ತಿದ್ದಾರೆ ಎಂದು ಹಾರನಹಳ್ಳಿ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಕೃಷ್ಣಪ್ಪ ಹಾಗೂ ಗ್ರಾಮಸ್ಥರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮದ ಸ್ವಚ್ಛತೆಗೆ ಆದ್ಯತೆ ನೀಡುವ ಉದ್ದೇಶದಿಂದ ಸರ್ಕಾರ ಸ್ವಚ್ಛ ಭಾರತ್ ಮಿಷನ್ ಯೋಜನೆ ಮೂಲಕ ಗ್ರಾಮಗಳಲ್ಲಿ ತ್ಯಾಜ್ಯ ಘಟಕಗಳನ್ನು ಆರಂಭಿಸಿ ಮನೆಯಿಂದ ಕಸಗಳನ್ನು ವಿಲೇವಾರಿ ಮಾಡಿ ಗ್ರಾಮ ಸ್ವಚ್ಛತೆಗೆ ಸರ್ಕಾರಗಳು ಯೋಜನೆ ರೂಪಿಸಿವೆ.

 ಉನ್ನತ ಅಧಿಕಾರಿಗಳ ನಿರ್ಲಕ್ಷ್ಯ, ಗ್ರಾಮ ಪಂಚಾಯಿತಿ ಸದಸ್ಯರ ಬೇಜವ್ದಾರಿಯಿಂದ ಕಳೆದ ೫ ವರ್ಷದಿಂದ ಯೋಜನೆ ಹಾಗೆಯೇ ಉಳಿದಿದೆ. 

ಗ್ರಾಮದ ಹೊರಭಾಗದಲ್ಲಿ ತ್ಯಾಜ್ಯ ಘಟಕ ಯೋಜನೆಗೆ ಜಾಗ ನೀಡಿ ರಸ್ತೆ ಮಾಡಿದ್ದನ್ನು ಬಿಟ್ಟರೆ ಮುಂದೆ ಯಾವುದೇ ಕಾರ್ಯಗಳು ವ್ಯವಸ್ಥಿತವಾಗಿ ಆಗಿಲ್ಲ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನಸ್ವಾಮಿ ಬೆಸರ ವ್ಯಕ್ತಪಡಿಸಿದ್ದಾರೆ.

ಗ್ರಾಮ ತ್ಯಾಜ್ಯ ವಿಲೇವಾರಿ ಮಾಡಿ ಗ್ರಾಮದ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕಾಗಿದೆ. ಗ್ರಾಮದಲ್ಲಿ ಪ್ರತಿ ಮನೆಗಳಿಗೆ ಕಸ ವಿಲೇವಾರಿ ಮಾಡುವ ಬಕೆಟ್‌ಗಳು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಧೂಳು ಹಿಡಿಯುತ್ತಿವೆ. 

ಗ್ರಾಮದಲ್ಲಿ ಸಾರ್ವಜನಿಕ ಸಮಸ್ಯೆಗಳು ಇದ್ದರೂ ಗ್ರಾಮದ ಪಂಚಾಯಿತಿ ಅಧಿಕಾರಿಗಳು ಜಡ ಹಿಡಿದು ಕುಳಿತಿದ್ದಾರೆ. ಸ್ವಚ್ಛ ವಾಹಿನಿ ಬಿಸಿಲು, ಮಳೆಗೆ ತುಕ್ಕು ಹಿಡಿಯುತ್ತಿದ್ದು ವಾಹನ ಬಿಡಿ ಭಾಗಗಳನ್ನು ಕದ್ದರೆ ಯಾರು ಹೊಣೆ? ಸಾರ್ವಜನಿಕರ ತೆರಿಗೆ ಹಣ ಫೋಲು ಆಗುತ್ತಿದೆ. 

ಸ್ವಚ್ಛವಾಹಿನಿ ತಂದು ನಿಲ್ಲಿಸಿದ್ದು ಬಿಟ್ಟರೆ ಇಲ್ಲಿಯವರೆಗೂ ಈ ವಾಹನ ಉಪಯೋಗಿಸಿಲ್ಲ. ಪಂಚಾಯಿತಿ ವತಿಯಿಂದ ಸ್ವಚ್ಛವಾಹಿನಿ ನಿಲ್ಲಿಸಲು ಕೊಠಡಿ ನಿರ್ಮಾಣ, ಉಳಿದ ತ್ಯಾಜ್ಯ ಘಟಕ ಯೋಜನೆ ಕಮಾಗಾರಿಗೆ ಚಾಲನೆ ನೀಡಬೇಕು. 

ತಕ್ಷಣ ಉನ್ನತ ಅಧಿಕಾರಿಗಳು ಸ್ಥಳ ಪರಿಶೀಲಿಸಿ ತ್ಯಾಜ್ಯ ಘಟಕ ಯೋಜನೆ ಕಾರ್ಯಗತ ಮಾಡುವಂತೆ ಸ್ಥಳಿಯ ಗ್ರಾಮಸ್ಥರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ. 

ಹಾರನಹಳ್ಳಿ ಗ್ರಾಮ ಪಂಚಾಯಿತಿ ಸ್ವಚ್ಛವಾಹಿನಿ ಬಿಸಿಲು ಮಳೆಗೆ ತುಕ್ಕು ಹಿಡಿಯುತ್ತಿರುವುದು.