ಸಾರಾಂಶ
ಗೋಕರ್ಣ: ಪ್ರವಾಸಿ ತಾಣದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಮುಕ್ತಿ ನೀಡಲು ನಾಲ್ಕು ಕೋಟಿ ರುಪಾಯಿಯ ವೆಚ್ಚದ ಎಂಆರ್‌ಎಫ್ ಘಟಕ ನಿರ್ಮಾಣದ ಕಾಮಗಾರಿ ಶೀಘ್ರವೇ ಪೂರ್ಣಗೊಳಿಸಲಾಗುವುದು ಎಂದು ಜಿಪಂ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಶ ಶಶಿ ಹೇಳಿದ್ದಾರೆ.
ಅಧಿಕಾರ ವಹಿಸಿಕೊಂಡ ನಂತರ ಪ್ರಥಮ ಬಾರಿ ಇಲ್ಲಿನ ಗ್ರಾಪಂಗೆ ಭೇಟಿ ನೀಡಿ ಈ ಮಾಹಿತಿ ನೀಡಿದ್ದಾರೆ. ಪ್ರವಾಸಿ ತಾಣದಲ್ಲಿ ಸ್ವಚ್ಛತೆಯ ಸಲುವಾಗಿ ವಿಶೇಷ ಕಾರ್ಯನುಷ್ಠಾನ ಮಾಡುವ ಕುರಿತು, ಪ್ರವಾಸಿ ಮಂದಿರದಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು.ಆನಂತರ ಅಶೋಕೆಯಲ್ಲಿರುವ ಗ್ರಾಪಂ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಪ್ರಸ್ತುತ ತೆಗೆದುಕೊಂಡಿರುವ ಕ್ರಮಗಳ ಕುರಿತು ಸ್ಥಳೀಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಯಾವುದೇ ತೊಂದರೆಯಾಗದಂತೆ ಸಮರ್ಪಕ ರೀತಿಯಲ್ಲಿ ಕಸ ವಿಂಗಡಣೆ ಮಾಡುವಂತೆ ಸೂಚಿಸಿದರು. ಅಲ್ಲದೆ ಹಲವು ಸಲಹೆ ನೀಡಿದರು.
ಇದಾದ ಬಳಿಕ ಸಂಗಮ ನಾಲಾ ವೀಕ್ಷಿಸಿ, ವಿವಿಧೆಡೆಯ ತ್ಯಾಜ್ಯ ನೀರು ಈ ನಾಲಾದಲ್ಲಿ ಸೇರುವುದು, ಕಸಗಳನ್ನು ಎಸೆಯುವುದು ಸೇರಿದಂತೆ ಹೊಲಸು ತುಂಬಿತ್ತಿರುವ ಬಗ್ಗೆ ಮಾಹಿತಿ ಪಡೆದು, ಕಸ ಎಸೆಯುವುದು, ತ್ಯಾಜ್ಯ ನೀರು ಬಿಡುವವರ ವಿರುದ್ಧ ನೋಟಿಸ್ ಜಾರಿ ಮಾಡಲು ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು.ಇನ್ನೂ ಸಂಗಮ ನಾಲಾ ಹೂಳು ತೆಗೆದು ಸ್ವಚ್ಛಗೊಳಿಸುವ ಬಗ್ಗೆ ರೂಪುರೇಷೆ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾಪನೆ ಸಲ್ಲಿಸಿದ್ದು, ಮಂಜೂರಿ ಹಂತದಲ್ಲಿರುವ ಈ ಯೋಜನೆಯ ವಿವರವನ್ನು ಅಧಿಕಾರಿಗಳಿಂದ ಪಡೆದು, ವಿವಿಧ ಸ್ಥಳ, ಅಲ್ಲಿನ ಪ್ರಸ್ತುತ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದರು.
ಪಂಚಾಯಿತಿಯಲ್ಲಿ ಸಭೆ: ಗ್ರಾಪಂ ಸಭಾಭವನದಲ್ಲಿ ಸಭೆ ನಡೆಸಿ, ಇಲ್ಲಿನ ಉಳಿದ ಸಮಸ್ಯೆಗಳ ಕುರಿತು ಚರ್ಚಿಸಿದರು. ಹಿರಿಯ ಗ್ರಾಪಂ ಸದಸ್ಯ ಪ್ರಭಾಕರ ಪ್ರಸಾದ ಮಾತನಾಡಿ, ಮುಖ್ಯ ಕಡಲತೀರದಲ್ಲಿ ಖಾಸಗಿಯವರ ಬಳಿ ಇದ್ದ ಗ್ರಾಪಂ ಜಾಗ ಮರಳಿ ಪಡೆದು ಹಲವು ವರ್ಷ ಕಳೆದಿದ್ದು, ಇಲ್ಲಿ ಕಾಂಪೌಂಡ್ ನಿರ್ಮಿಸಿ, ಜಾಗ ಅತಿಕ್ರಮಿಸದಂತೆ ರಕ್ಷಿಸಲು ಕ್ರಮವಾಗಬೇಕು ಎಂದರು.ಹಲವಾರ ಪರವಾನಗಿರಹಿತ ಹೋಟೆಲ್, ರೆಸಾರ್ಟ್‌ಗಳಿದ್ದು, ಅವುಗಳಿಗೆ ತಾತ್ಕಾಲಿಕ ಪರವಾನಗಿ ನೀಡುವಂತಾದರೆ ಗ್ರಾಪಂಗೂ ಆದಾಯ ಬರುತ್ತದೆ. ಇಲ್ಲವಾದರೆ ಅವರು ಬಿಸಾಡಿದ ಕಸ ಮಾತ್ರ ಪಂಚಾಯಿತಿ ತೆಗೆಯುತ್ತಿರಬೇಕಾಗುತ್ತದೆ ಎಂದರು. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅನುಕೂಲ ಒದಗಿಸದೆ ವಸತಿಗೃಹ ನಿರ್ಮಾಣ ಮಾಡಿ ವಾಣಿಜ್ಯೋದ್ಯಮ ನಡೆಸುತ್ತಿದ್ದು, ಈ ಬಗ್ಗೆ ಕ್ರಮವಾಗಬೇಕು ಎಂದರು.
ಗ್ರಾಪಂ ಸದಸ್ಯ ಗಣಪತಿ ನಾಯ್ಕ ಮಾತನಾಡಿ, ಜೆಜೆಎಂ ಯೋಜನೆಯಿಂದ ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗದಿರುವುದರಿಂದ ಸ್ಥಳೀಯ ಜಲಮೂಲಗಳನ್ನು ಬಳಸಿ ನೀರು ಪೂರೈಕೆಗೆ ಕ್ರಮ ತೆಗೆದುಕೊಳ್ಳುವಂತೆ, ಒಳಚರಂಡಿ ವ್ಯವಸ್ಥೆಯ ಬಗ್ಗೆ ಯೋಜನೆ ಜಾರಿಗೊಳಿಸುವಂತೆ ಮನವಿ ಮಾಡಿದರು.ಗ್ರಾಪಂ ಸದಸ್ಯ ರವಿಕಿರಣ ನಾಯ್ಕ ಮಾತನಾಡಿ, ಎಲ್ಲ ಕಡಲತೀರದಲ್ಲಿ ಬೋಟಿಂಗ್ ನಡೆಸಲು ಪ್ರವಾಸೋದ್ಯಮ ಇಲಾಖೆ ಟೆಂಡರ್ ನೀಡಿ ಹಣ ಪಡೆಯುತ್ತಿದೆ. ಆದರೆ ಇಲ್ಲಿ ರಾಶಿ ಬಿದ್ದ ಕಸ ವಿಲೇವಾರಿಯನ್ನು ಗ್ರಾಪಂ ಮಾಡಬೇಕಿದೆ. ಈ ನಿರ್ವಹಣೆ ಟೆಂಡರ್ ಪಡೆದವರೇ ಮಾಡಲಿ ಎಂದರು.
ಗ್ರಾಪಂ ಅಧ್ಯಕ್ಷೆ ಸುಮನಾ ಗೌಡ, ಜಿಪಂ ಸ್ವಚ್ಛ ಭಾರತ ಮಿಷನ್ ಮುಖ್ಯಸ್ಥ ಸೂರ್ಯನಾರಾಯಣ ಭಟ್, ನೀರಾವರಿ ಇಲಾಖೆ ಎಂಜಿನಿಯರ್ ರಾಘವೇಂದ್ರ ನಾಯ್ಕ ಉಪಸ್ಥಿತರಿದ್ದರು.