ಸಾರಾಂಶ
ಮಾಣಿಕನಗರ ಹಳ್ಳಕ್ಕೆ ರಾಸಾಯನಿಕ ತ್ಯಾಜ್ಯ ಸಿಎಂಗೆ ದೂರು ರವಾನೆ. ಗ್ರಾಮಸ್ಥರು ಆತಂಕ, ಜಲಚರಗಳ ಜೀವಕ್ಕೆ ಕುತ್ತು, ಅಧಿಕಾರಿಗಳು ಮೌನ. ಕೂಡಲೆ ತನಿಖೆ ನಡೆಸಿ ತಪ್ಪಿತಸ್ಥ ಕಾರ್ಖಾನೆಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಗಡವಂತಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಹುಮನಾಬಾದ್
ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ತವರಲ್ಲೇ ಪದೇ ಪದೇ ಪರಿಸರ ಮಾಲಿನ್ಯವಾಗುತ್ತಿದೆ. ಹುಮನಾಬಾದ್ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳು ರಾಸಾಯನಿಕ ತ್ಯಾಜ್ಯವನ್ನು ಸಂಗ್ರಹಿಸಿ ಹಳ್ಳಗಳ ಮೂಲಕ ಸೋಮವಾರ ರಾತ್ರಿ ನೀರಲ್ಲಿ ಹರಿಬಿಟ್ಟಿರುವ ಹಿನ್ನೆಲೆಯಲ್ಲಿ ರಾಸಾಯನಿಕ ತ್ಯಾಜ್ಯ ಮಾಣಿಕನಗರ ಹಳ್ಳಕ್ಕೆ ಹರಿದು ಮಾಣಿಕನಗರ ಹುಮನಾಬಾದ ಮಾರ್ಗದ ಸೇತುವೆ ಬಳಿ ದುರ್ನಾತ ಬೀರುತ್ತಿದೆ. ಅಲ್ಲದೆ ಜಿಲ್ಲೆಯ ವಿವಿಧ ನಗರ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಕಾರಂಜಾ ಜಲಾಶಯಕ್ಕೆ ಸೇರಲಿದೆ.ತಹಸೀಲ್ದಾರ್ ಅಂಜುಮ್ ತಬಸುಮ್ ಮೂಲಕ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಗಡವಂತಿ ಗ್ರಾಮಸ್ಥರು, ಈ ಕುರಿತು ಮಾಲಿನ್ಯ ಅಧಿಕಾರಿಗಳ ಹಾಗೂ ಜಿಲ್ಲಾಧಿಕಾರಿಗಳ ಸಂಪೂರ್ಣ ನಿರ್ಲಕ್ಷವೇ ಕಾರಣವಾಗಿದೆ. ಹೀಗಾಗಿ ಈ ಕುರಿತು ತಾವು ತನಿಖೆ ನಡೆಸಿ ತಪ್ಪಿತಸ್ಥ ಕಾರ್ಖಾನೆಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.
ಕೆಲ ದಿನಗಳ ಹಿಂದೆ ಹುಡಗಿ ಗ್ರಾಮದ ಹಳ್ಳಗಳಲ್ಲಿ ಮೀನು ಸೇರಿದಂತೆ ನೀರಿನಲ್ಲಿರುವ ಜಲಚರಗಳು ಸಾವನ್ನಪ್ಪಿದ್ದವು. ಇದೀಗ ಹುಮನಾಬಾದ್, ಬೀದರ್, ಭಾಲ್ಕಿ ಪಟ್ಟಣಕ್ಕೆ ಸರಬರಾಜು ಆಗುತ್ತಿರುವ ಕಾರಂಜಾ ಜಲಾಶಯದ ನೀರಿಗೆ ಕೈಗಾರಿಕಾ ಪ್ರದೇಶದ ಹಳ್ಳಗಳ ಮೂಲಕ ಗಡವಂತಿ, ಮಾಣಿಕನಗರ, ಧುಮ್ಮನಸೂರ, ಹುಡಗಿ ಗ್ರಾಮಗಳ ಹಳ್ಳಗಳ ಮೂಲಕ ಹರಿಯುತ್ತಿರುವ ರಾಸಾಯನಿಕ ತ್ಯಾಜ್ಯ ಜಲಾಶಯಕ್ಕೆ ಸೇರುತ್ತಿದೆ.ಈಗಾಗಲೆ ಎಲ್ಲಾ ಕಡೆ ಡೆಂಘೀ, ಮಲೇರಿಯಾ ಅಂತಹ ರೋಗಗಳು ಬರುತ್ತಿದ್ದು, ಇದೀಗ ಗಡವಂತಿ ಮಾಣಿಕನಗರ, ಧುಮ್ಮನಸೂರ ಗ್ರಾಮದ ಹಳ್ಳಕ್ಕೆ ರಾಸಾಯನಿಕ ತ್ಯಾಜ್ಯ ಬಂದಾಗಿದೆ. ಈ ಗ್ರಾಮಗಳಲ್ಲಿನ ಗ್ರಾಮಸ್ಥರು ಅನಾರೋಗ್ಯಕ್ಕೆ ಪೀಡಿತವಾಗುವ ಸಾಧ್ಯತೆಗಳು ದಟ್ಟವಾಗಿದ್ದರಿಂದ ಇತ್ತ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.
ಈ ಕುರಿತು ತಕ್ಷಣ ಸಂಭಂಧಿತ ಅಧಿಕಾರಿಗಳ ತಂಡ ರಚಿಸಿ ತನಿಖೆ ನಡೆಸುವ ಮೂಲಕ ತಪ್ಪಿತಸ್ಥ ಕಾರ್ಖಾನೆಯ ಮಾಲೀಕರ ವಿರುದ್ಧು ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಗಡವಂತಿ, ಮಾಣಿಕನಗರ ಗ್ರಾಮಸ್ಥರ ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು.ರವಿಕುಮಾರ ಹೊಸಳ್ಳಿ, ರಮೇಶ ಕಲ್ಲೂರ, ಸಂದೀಪ ಮುಗಳಿ, ಮಿಲನ್ ಮೈಸಲಗೆ, ಸತ್ಯಶೀಲ ಈರುಳೆ, ಸತೀಷ ಪವಾರ ಸೇರಿದಂತೆ ಅನೇಕರು ಇದ್ದರು.