ಜೀವನದಿ ನೇತ್ರಾವತಿಯನ್ನು ಸೇರುತ್ತಿದೆ ತ್ಯಾಜ್ಯ: ಅಧಿಕಾರಿಗಳೇ, ಜನಪ್ರತಿನಿಧಿಗಳೇ ಇನ್ನಾದರೂ ಎಚ್ಚೆತ್ತುಕೊಳ್ಳಿ...

| Published : Apr 02 2025, 01:00 AM IST

ಜೀವನದಿ ನೇತ್ರಾವತಿಯನ್ನು ಸೇರುತ್ತಿದೆ ತ್ಯಾಜ್ಯ: ಅಧಿಕಾರಿಗಳೇ, ಜನಪ್ರತಿನಿಧಿಗಳೇ ಇನ್ನಾದರೂ ಎಚ್ಚೆತ್ತುಕೊಳ್ಳಿ...
Share this Article
  • FB
  • TW
  • Linkdin
  • Email

ಸಾರಾಂಶ

ಬಂಟ್ವಾಳ ಪುರಸಭಾ ವ್ಯಾಪ್ತಿಯ ಸುಮಾರು 12 ಕಡೆಗಳಲ್ಲಿ ಕಣ್ಣಿಗೆ ರಾಚುವಂತೆ ಕೊಳಕು ನೀರು ನೇರವಾಗಿ ಜೀವನದಿ‌ ನೇತ್ರಾವತಿಯ ಒಡಲಿಗೆ ಸೇರುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಆತಂಕಕ್ಕೆ ಕಾರಣವಾಗಿದೆ. ಆದರೆ ಈ ಕುರಿತಾಗಿ ಬಂಟ್ವಾಳ ಪುರಸಭೆ, ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕೆಯ ಆಡಳಿತ ವರ್ಗ ಯಾಕೆ ಮೌನ ವಹಿಸಿದೆ ಎನ್ನುವುದೇ ಯಕ್ಷ ಪ್ರಶ್ನೆ.

ವಿಶೇಷ ವರದಿಕನ್ನಡಪ್ರಭ ವಾರ್ತೆ ಬಂಟ್ವಾಳ

ಜೀವನದಿ ನೇತ್ರಾವತಿಯನ್ನೇ ನಂಬಿಕೊಂಡು ಇಡೀ ದಕ್ಷಿಣ ಕನ್ನಡ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಕುಡಿಯುವ ನೀರಿನ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಮತ್ತೊಂದೆಡೆ ಸ್ಮಾರ್ಟ್‌ ಸಿಟಿಯೆಂಬ ಹೆಗ್ಗಳಿಕೆಯಲ್ಲಿ ಬೀಗುತ್ತಿರುವ ಮಂಗಳೂರಿನ ಜನತೆಗೆ ಈ ನೇತ್ರಾವತಿ ನದಿಯ ನೀರೇ ಆಧಾರ. ಆದರೆ ಸದ್ಯದ ಮಟ್ಟಿಗೆ ನೇತ್ರಾವತಿ ನದಿಯ ಸ್ಥಿತಿ ನೋಡಿದರೆ ಅಯ್ಯೋ... ಎನ್ನುವಂತಿದೆ.ಬಂಟ್ವಾಳ ಪುರಸಭಾ ವ್ಯಾಪ್ತಿಯ ಸುಮಾರು 12 ಕಡೆಗಳಲ್ಲಿ ಕಣ್ಣಿಗೆ ರಾಚುವಂತೆ ಕೊಳಕು ನೀರು ನೇರವಾಗಿ ಜೀವನದಿ‌ ನೇತ್ರಾವತಿಯ ಒಡಲಿಗೆ ಸೇರುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಆತಂಕಕ್ಕೆ ಕಾರಣವಾಗಿದೆ. ಆದರೆ ಈ ಕುರಿತಾಗಿ ಬಂಟ್ವಾಳ ಪುರಸಭೆ, ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕೆಯ ಆಡಳಿತ ವರ್ಗ ಯಾಕೆ ಮೌನ ವಹಿಸಿದೆ ಎನ್ನುವುದೇ ಯಕ್ಷ ಪ್ರಶ್ನೆ. ಬಂಟ್ವಾಳದಿಂದ ಹರಿಯುವ ನೇತ್ರಾವತಿ ನದಿ ನೀರು ತುಂಬೆಯಲ್ಲಿ ಫೀಲ್ಟರ್ ಆಗಿ ಶುದ್ಧೀಕರಣಗೊಳಿಸಿ ಬಳಿಕ ಪೂರೈಕೆ ಮಾಡಲಾಗುತ್ತಿದೆ, ಆದರೆ ಬಂಟ್ವಾಳದ ವಿವಿಧೆಡೆಯಲ್ಲಿ ತ್ಯಾಜ್ಯರಾಶಿ ನೇರವಾಗಿ ನೇತ್ರಾವತಿ ನದಿ ಸೇರುವ ದೃಶ್ಯವನ್ನು ಜಿಲ್ಲಾಧಿಕಾರಿ ಸಹಿತ ಪಾಲಿಕೆ ಆಯುಕ್ತರು, ಜನಪ್ರತಿನಿಧಿಗಳು ನೋಡಿದರೆ ಮಾತ್ರ ಸತ್ಯದರ್ಶನವಾಗುತ್ತದೆ.ಎಲ್ಲೆಲ್ಲಿ ಕೊಳಚೆ ನೀರು ನದಿ ಸೇರುತ್ತದೆ:

ಬಂಟ್ವಾಳ ತಾಲೂಕಿನ ಹೃದಯ ಭಾಗ ಪುರಸಭಾ ವ್ಯಾಪ್ತಿಯ ಬಿ.ಮೂಡ ಗ್ರಾಮದ‌ ಅತೀ ಹೆಚ್ಚು ಕಡೆಗಳಲ್ಲಿ ಮಲಿನ ನೀರು, ಕೊಳೆತ ತ್ಯಾಜ್ಯ ವಸ್ತುಗಳನ್ನು ನೇತ್ರಾವತಿ ತನ್ನ ಒಡಲಿಗೆ ಅನಿವಾರ್ಯವಾಗಿ ಸೇರಿಸಿಕೊಂಡು ಮಲಿನವಾಗಿದ್ದಾಳೆ. ಬಿ.ಸಿ.ರೋಡು ನಗರದಲ್ಲಿ ಅತೀ ಹೆಚ್ಚು ವಸತಿ ಸಂಕೀರ್ಣ, ಮನೆಗಳು, ಹೊಟೇಲ್‌ಗಳು ಇದ್ದು, ಇವುಗಳ ಮಲೀನ ನೀರು ಚರಂಡಿಯ ಮೂಲಕ ನದಿ ಸೇರುತ್ತಿದೆ. ತ್ಯಾಜ್ಯ ವಸ್ತುಗಳು, ಬಾಟಲ್ ಸಹಿತ ಇನ್ನಿತರ ವಸ್ತುಗಳು ನದಿ ನೀರಿನಲ್ಲಿ ತೇಲಾಡುತ್ತಿರುತ್ತದೆ. ಬಿ.ಸಿ. ರೋಡಿನ ಮಪತ್ ಲಾಲ್ ಲೇಔಟ್, ಆರಾಧ್ಯ ಲೇಔಟ್ ಬಳಿ, ಬಸ್ತಿಪಡ್ಪು, ಕಂಚಿಕಾರಪೇಟೆ, ಗೂಡಿನ ಬಳಿ ಹಾಗೂ ಬಂಟ್ವಾಳ ಬಡ್ಡಕಟ್ಟೆ ಮಟನ್ ಸ್ಟಾಲ್ ಹಿಂಭಾಗ, ತಿರುಮಲ ವೆಂಕಟರಮಣ ದೇವಾಲಯದ ನದಿಕಿನಾರೆ ಬಳಿ ಸೇರಿದಂತೆ ಪಾಣೆಮಂಗಳೂರಿನ ವಿವಿಧ ಕಡೆಗಳಲ್ಲಿ ಹೀಗೆ ಸದ್ಯಕ್ಕೆ ಸುಮಾರು12 ಕಡೆಗಳಲ್ಲಿ ಕೊಳಚೆ ನೀರು ನೇತ್ರಾವತಿ ನದಿ ಸೇರುತ್ತಿದೆ. ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿ ಸಹಿತವಾಗಿ ಬಂಟ್ವಾಳ ಪುರಸಭಾ ವ್ಯಾಪ್ತಿಯ ಲಕ್ಷಾಂತರ ಮಂದಿ ಈ ಕೊಳಕು, ತ್ಯಾಜ್ಯದಿಂದ ತೇಲಾಡುವ ನದಿ ನೀರನ್ನು ಬಳಕೆ ಮಾಡುತ್ತಿದ್ದರೂ ಈ ನದಿಯ ಸ್ವಚ್ಛತೆಗೆ ಯಾರೂ ಮುಂದಾಗದಿರುವುದು ವಿಪರ್ಯಾಸವೇ ಸರಿ.ಒಳಚರಂಡಿ ಯೋಜನೆ ನನೆಗುದಿಗೆ:

ಬಂಟ್ವಾಳ ಪುರಸಭೆಗೆ 2011ರಲ್ಲಿ ಮೊದಲ ಹಂತವಾಗಿ 16.62 ಕೋಟಿ ರು. ವೆಚ್ಚದ ಒಳಚರಂಡಿ ಯೋಜನೆಗೆ ಮಂಜೂರಾತಿ ದೊರೆತು‌ ಕಾಮಗಾರಿಯು ಆರಂಭಗೊಂಡಿತ್ತು. ಪುರಸಭೆಯ ಬೌಗೋಳಿಕ ಸ್ಥಿತಿಗನುಸಾರವಾಗಿ 7 ವೆಟ್ ವೆಲ್ ಹಾಗೂ 2 ಮಲಿನ ನೀರು ಶುದ್ಧೀಕರಣ ಘಟಕ ನಿರ್ಮಾಣವಾಗಬೇಕು, ಇದನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಗತಗೊಳಿಸಬೇಕಾಗಿದ್ದು, ಗುತ್ತಿಗೆ ವಹಿಸಿಕೊಂಡವರು ಕಾಮಗಾರಿಯನ್ನು ಆರಂಭಿಸಿದ್ದರು. ವೆಟ್ ವೆಲ್ ಮತ್ತು ಮಲೀನ ನೀರು ಶುದ್ಧೀಕರಣ ಘಟಕಕ್ಕೆ ಜಮೀನು ಕೂಡ ಗುರುತಿಸಲಾಗಿತ್ತು. ಈ ಪೈಕಿ ವೆಟ್ ವೆಲ್ ನಿರ್ಮಾಣಕ್ಕೆ ಐದು ಕಡೆ ಜಮೀನು ಸಂಬಂಧಪಟ್ಟವರಿಗೆ ಹಸ್ತಾಂತರವಾದರೆ, ಎರಡು ಕಡೆ ಜಮೀನು ಹಸ್ತಾಂತರವಾಗಿಲ್ಲ. ಒಂದು ಕಡೆ ನ್ಯಾಯಾಲಯದ ತಡೆಯಾಜ್ಞೆ ಇದ್ದರೆ, ಮತ್ತೊಂದು ಕಡೆ ಜಮೀನಿನಲ್ಲಿ ದೊಡ್ಡಮಟ್ಟದ ಗೋಲ್ ಮಾಲ್ ನಡೆದಿದೆ ಎಂದು ಇತ್ತೀಚೆಗೆ ಪುರಸಭೆಯ ಸಾಮಾನ್ಯಸಭೆಯಲ್ಲಿ ಗಂಭೀರವಾದ ಚರ್ಚೆ ನಡೆದಿತ್ತು.ಸಭೆಯಲ್ಲಿ ಹಿರಿಯ ಸದಸ್ಯ ಗೋವಿಂದಪ್ರಭು, ಕೆಲ ದಾಖಲೆಯನ್ನು ಮುಂದಿಟ್ಟು ಈ ವಿಚಾರವಾಗಿ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದ್ದರು. ಕಂದಾಯ ಇಲಾಖೆಯು ಇದರಲ್ಲಿ ಶಾಮೀಲಾಗಿದೆ ಎಂದು ಆರೋಪಿಸಿದ್ದರು. ಆದರೆ ಆಡಳಿತಪಕ್ಷದಿಂದ ಅಥವಾ ಅಧಿಕಾರಿಗಳಿಂದ ಸ್ಪಷ್ಟ ಉತ್ತರ ಮಾತ್ರ ಸಿಕ್ಕಿರಲಿಲ್ಲ.ಮೊದಲ ಹಂತದ ಒಳಚರಂಡಿ ಯೋಜನೆಯ ಕಾಮಗಾರಿ ಬಿ.ಮೂಡ ಗ್ರಾಮದಲ್ಲಿ ಏನೋ ಕಾರ್ಯರೂಪಕ್ಕೆ ಬಂದಿತ್ತಾದರೂ, ಬಂಟ್ವಾಳ ಕಸ್ಬ ಗ್ರಾಮದತ್ತ‌ ಸುಳಿಯಲೇ‌ ಇಲ್ಲ. ಅದಾಗಲೇ ಕಾಮಗಾರಿಯ ಗುಣಮಟ್ಟದ ಬಗ್ಗೆ ಅನುಮಾನಗಳು ಉಂಟಾಗಿ ಲೋಕಾಯುಕ್ತಕ್ಕೂ ದೂರು ಸಲ್ಲಿಕೆಯಾಗಿತ್ತು.ಪ್ರಸ್ತುತ ರಸ್ತೆ ಅಗೆದು ನಿರ್ಮಿಸಲಾದ ವೆಟ್ ವೆಲ್‌ಗಳನ್ನು ಟಾರ್ಚ್‌ ಲೈಟ್ ಹಾಕಿ ಹುಡುಕಬೇಕಾದ ಪರಿಸ್ಥಿತಿ ಉಂಟಾಗಿದೆ. ಒಂದೆರಡು ವೆಟ್ ವೆಲ್ ಕಾಣಲು ಸಿಗತ್ತದೆಯಾದರೂ ಅದನ್ನು ಪೊದೆಗಳು ಅವರಿಸಿದ್ದು, ಸದ್ಯ‌ ಊಟಕ್ಕಿಲ್ಲದ ಉಪ್ಪಿನ ಕಾಯಿಯಂತಾಗಿದೆ.ಈ ಮಧ್ಯೆ ಎರಡನೇ ಹಂತದ ಒಳಚರಂಡಿ ಯೋಜನೆಗೆ 56.54 ಕೋಟಿ ರು. ಮಂಜೂರುಗೊಂಡು ವರ್ಷವೇ ಉರುಳಿದೆ. ಆದರೂ ಬಂಟ್ವಾಳ ಪುರವಾಸಿಗೆ ಒಳಚರಂಡಿ ಯೋಜನೆಯ ಕನಸು ಕನಸಾಗಿಯೇ ಉಳಿದಿದೆ. ತ್ಯಾಜ್ಯ ವಸ್ತು, ಕೊಳಚೆ ನೀರು ನೇರ ನದಿಗೆ ಸೇರಿ ಮಲೀನವಾಗಿರುವ ನೇತ್ರಾವತಿ ಶುಭ್ರ ನೀಲಿ ಬಣ್ಣದಲ್ಲಿ ಕಾಣಬೇಕಾಗುವ ಬದಲು ದಪ್ಪ ಹಸಿರು ಬಣ್ಣಕ್ಕೆ ತಿರುಗಿದ್ದಾಳೆ. ಅದನ್ನೇ ಬಂಟ್ವಾಳ ಮತ್ತು ಮಂಗಳೂರು ಮನಪಾ ಜನತೆ ಕುಡಿಯುತ್ತಿದ್ದಾರೆ. ಮುಂದೆ ಪುತ್ತೂರು ಹಾಗೂ ಸುಳ್ಯ ಭಾಗದವರೂ ಇದೇ ನೇತ್ರಾವತಿಯ ನೀರು ಕುಡಿಯಲು ಕಾಯುತ್ತಿದ್ದಾರೆ!ಈ ನೀರನ್ನು ಪರೀಕ್ಷೆಗೊಳಪಡಿಸಿದರೆ ಉಪಯೋಗಕ್ಕೆ ಬಳಸುವುದೇ ಅಪಾಯ ಎಂಬ ವರದಿ ಬಂದರೂ ಅಚ್ಚರಿ ಪಡಬೇಕಾಗಿಲ್ಲ.

............

ಮಂಗಳೂರು ಸ್ಮಾರ್ಟ್ ಸಿಟಿ‌ ಎನ್ನುತ್ತಾರೆ, ಅಲ್ಲಿನ ಜನತೆ ಬಂಟ್ವಾಳದಲ್ಲಿ ಹರಿಯುವ ನೇತ್ರಾವತಿ ನದಿಯ ಮಲಿನ ನೀರನ್ನು ಕುಡಿಯುವ ಪರಿಸ್ಥಿತಿ ಇದೆ. ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಸಮರ್ಪಕವಾದ ಒಳಚರಂಡಿ ಇಲ್ಲದ ಪರಿಣಾಮ ಸುಮಾರು 12 ಕಡೆಗಳಲ್ಲಿ ಕೊಳಚೆ ನೀರು ನೇರವಾಗಿ ನೇತ್ರಾವತಿ ನದಿಯ ಒಡಲು ಸೇರುತ್ತಿದೆ. ಇದನ್ನೇ ಮಂಗಳೂರು, ಬಂಟ್ವಾಳದ ಜನತೆ ಕುಡಿಯಲು ಬಳಕೆ ಮಾಡುತ್ತಿದ್ದಾರೆ।‌ ಎ.ಗೋವಿಂದಪ್ರಭು, ಹಿರಿಯ ಸದಸ್ಯರು, ಬಂಟ್ವಾಳ ಪುರಸಭೆ