ಮುರೇಗಾರ್ ಗ್ರಾಮದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕರ ನಿಧಿಯಿಂದ ಮಂಜೂರಾದ ಲಕ್ಷಾಂತರ ರೂ. ಅನುದಾನ ಗುತ್ತಿಗೆದಾರರ ನಿಷ್ಕಾಳಜಿಯಿಂದಾಗಿ ವ್ಯರ್ಥವಾಗುತ್ತಿದ್ದು, ಶಾಸಕರು ಕೂಡಲೇ ಕಾಮಗಾರಿ ನಿಲ್ಲಿಸಿ ಸೂಕ್ತ ಸ್ಥಳದಲ್ಲಿ ರಸ್ತೆ ನಿರ್ಮಿಸಲು ಸೂಚಿಸಬೇಕೆನ್ನುವ ಆಗ್ರಹ ಮುರೇಗಾರ ಗ್ರಾಮಸ್ಥರಿಂದ ಕೇಳಿಬಂದಿದೆ.
ಕನ್ನಡಪ್ರಭ ವಾರ್ತೆ ಶಿರಸಿ
ಮುರೇಗಾರ್ ಗ್ರಾಮದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕರ ನಿಧಿಯಿಂದ ಮಂಜೂರಾದ ಲಕ್ಷಾಂತರ ರೂ. ಅನುದಾನ ಗುತ್ತಿಗೆದಾರರ ನಿಷ್ಕಾಳಜಿಯಿಂದಾಗಿ ವ್ಯರ್ಥವಾಗುತ್ತಿದ್ದು, ಶಾಸಕರು ಕೂಡಲೇ ಕಾಮಗಾರಿ ನಿಲ್ಲಿಸಿ ಸೂಕ್ತ ಸ್ಥಳದಲ್ಲಿ ರಸ್ತೆ ನಿರ್ಮಿಸಲು ಸೂಚಿಸಬೇಕೆನ್ನುವ ಆಗ್ರಹ ಮುರೇಗಾರ ಗ್ರಾಮಸ್ಥರಿಂದ ಕೇಳಿಬಂದಿದೆ.ಹಲವು ವರ್ಷಗಳ ನಂತರ ಗ್ರಾಮಕ್ಕೆ ಶಾಸಕರ ಅನುದಾನದಡಿ ₹15 ಲಕ್ಷ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಂಜೂರಾಗಿದೆ. ಆದರೆ ಮಂಜೂರಾದ ಹಣವನ್ನು ತೀರಾ ಕಡಿಮೆ ಜನ ಸಂಚಾರ ಇರುವ ಮುರೇಗಾರ ಮುದ್ದಿನಪಾಲ ರಸ್ತೆ ಅಭಿವೃದ್ಧಿಗೆ ಬಳಕೆ ಮಾಡಲಾತ್ತಿದೆ.ಯಾಕೆ ಮನೆಗಳೇ ಇಲ್ಲದ ಗ್ರಾಮದ ಒಳ ರಸ್ತೆಯನ್ನೇಕೆ ಡಾಂಬರೀಕರಣ ಮಾಡುತ್ತಿದ್ದಾರೆ ಎನ್ನುವ ಅನುಮಾನ ಗ್ರಾಮಸ್ಥರನ್ನು ಕಾಡುತ್ತಿದೆ.
ಮುಖ್ಯರಸ್ತೆಯನ್ನೇ ಅಭಿವೃದ್ಧಿ ಪಡಿಸಿ ಮುರೇಗಾರ ಗ್ರಾಮಕ್ಕೆ ಎರಡು ಸಂಪರ್ಕ ರಸ್ತೆಗಳಿದ್ದು, ಮುದ್ದಿನಪಾಲ-ಮುರೇಗಾರ ರಸ್ತೆಗಿಂತ ಸಾಲಕಣಿ-ಮುರೇಗಾರ ರಸ್ತೆ ಹೆಚ್ಚು ಜನ ಬಳಕೆಯ ಮುಖ್ಯರಸ್ತೆಯಾಗಿದೆ.ನಾಲ್ಕು ಕಿಮೀ ಇರುವ ಈ ರಸ್ತೆಗೆ ಈಗಾಗಲೇ 2 ಕಿಮೀ ಡಾಂಬರೀಕರಣವಾಗಿದೆ. ಈಗಾಗಲೇ ಸಂಪೂರ್ಣ ಮೆಟ್ಲಿಂಗ್ ಆಗಿರುವ ಈ ರಸ್ತೆಯನ್ನು ಬಿಟ್ಟು, ಯಾವುದೋ ಅಪ್ರಯೋಜಕ ರಸ್ತೆ ಅಭಿವೃದ್ಧಿಗೆ ಹಣ ವಿನಿಯೋಗಿಸುತ್ತಿರುವುದಕ್ಕೆ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.ಶಾಸಕರ ಅನುದಾನ ಸದ್ಬಳಕೆ ಆಗಲಿ:
ಶಾಸಕರ ಅನುದಾನದಲ್ಲಿ ಗ್ರಾಮದ ರಸ್ತೆ ಅಭಿವೃದ್ಧಿಗೆಂದು ₹15 ಲಕ್ಷ ಮಂಜೂರಾಗಿರುವುದು ಸಂತೋಷದ ಸಂಗತಿ. ಆದರೆ ಹಣ ಯಾವುದೋ ದುರುದ್ದೇಶಕ್ಕೋ ಅಥವಾ ಗುತ್ತಿಗೆದಾರರ ನಿಷ್ಕಾಳಜಿಗೋ ವ್ಯರ್ಥವಾಗುತ್ತಿರುವುದು ಬೇಸರದ ಸಂಗತಿ. ಇದು ಶಾಸಕರ ಗಮನಕ್ಕೆ ಇದ್ದಂತಿಲ್ಲ. ಕೂಡಲೇ ಶಾಸಕರು ಇದನ್ನು ಗಮನಿಸಿ ತಮ್ಮ ಅನುದಾನ ಸದ್ಬಳಕೆಯಾಗುವಂತೆ ಮಾಡಲಿ. ಹಾಲಿ ಆರಂಭವಾದ ಕಾಮಗಾರಿಯನ್ನು ನಿಲ್ಲಿಸಿ ಸೂಕ್ತ ಸ್ಥಳದಲ್ಲಿ ರಸ್ತೆ ಅಭಿವೃದ್ಧಿ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಲಿ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.