ಸಾರಾಂಶ
ಕನ್ನಡಪ್ರಭ ವಾರ್ತೆ ಮೂಲ್ಕಿ
ಸುರತ್ಕಲ್ ಸಮೀಪದ ಚೇಳೈರು, ಖಂಡಿಗೆಯಲ್ಲಿ ನಂದಿನಿ ನದಿ ಕಲುಷಿತವಾಗುತ್ತಿದ್ದು, ಸೂಕ್ತ ಕ್ರಮಕ್ಕೆ ಆಗ್ರಹಿಸಿ ಬೃಹತ್ ಹೋರಾಟ ಸಂಘಟಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.ನದಿ ಕಲುಷಿತ ಸಮಸ್ಯೆ ಬಗ್ಗೆ ನಂದಿನಿ ನದಿ ಸಂರಕ್ಷಣಾ ಸಮಿತಿ ಖಂಡಿಗೆ ಚೇಳೈರು ಮೂಲಕ ಜಿಲ್ಲೆಯ ಸಂಸದರು, ಕ್ಷೇತ್ರದ ಶಾಸಕರಿಗೆ, ಮಂಗಳೂರು ಮಹಾನಗರ ಪಾಲಿಕೆ ಮೇಯರ್, ಜಿಲ್ಲಾಧಿಕಾರಿ, ನಗರ ಪಾಲಿಕೆ ಅಧಿಕಾರಿಗಳಿಗೆ, ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಮಾ.4ರಂದು ನಂದಿನಿ ನದಿ ಸಂರಕ್ಷಣಾ ಸಮಿತಿ ಹಾಗೂ ಗ್ರಾಮಸ್ಥರ ನೇತೃತ್ವದಲ್ಲಿ ಬೃಹತ್ ಹೋರಾಟ ನಡೆಸಲು ಚೇಳೈರು ಖಂಡಿಗೆ ದೈವಸ್ಥಾನದ ವಠಾರದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಮುಂಚೂರು ವೆಟ್‌ವೆಲ್ ಹತ್ತಿರದ ಒಳಚರಂಡಿಯ ಕೊಳಚೆ ನೀರು, ಕೊಡಿಪಾಡಿಯಲ್ಲಿ ನಿರ್ಮಾಣವಾಗಿರುವ ತ್ಯಾಜ್ಯ ಸಂಸ್ಕರಣಾ ಘಟಕದ ನೀರು, ಚೊಕ್ಕಬೆಟ್ಟು ಪರಿಸರದ ಮನೆಯ ತ್ಯಾಜ್ಯ ನೀರು, ಮುಕ್ಕದ ಖಾಸಗಿ ಆಸ್ಪತ್ರೆ, ಕಾಲೇಜು, ವಸತಿ ಗೃಹ ಮತ್ತು ಹೊಟೇಲ್‌ಗಳ ತ್ಯಾಜ್ಯ ನೀರು ನಂದಿನಿ ನದಿಗೆ ಬೀಡುವುದರಿಂದ ನಂದಿನಿ ನದಿ ಸಂಪೂರ್ಣ ಕಲುಷಿತಗೊಂಡಿದೆ. ಇದರಿಂದಾಗಿ ಚೇಳೈರು, ಖಂಡಿಗೆ ಭಾಗದ ಅನೇಕ ಕೃಷಿಯನ್ನೇ ಅವಲಂಬಿತ ಕುಟುಂಬಗಳು ಕೃಷಿ ಮಾಡದ ಪರಿಸ್ಥಿತಿ ಹಾಗೂ ಕುಡಿಯುವ ನೀರಿಗೂ ಸಮಸ್ಯೆಯಾಗಿದ್ದು ಬಾವಿಗಳು ಮಲಿನಗೊಂಡಿವೆ. ಇತಿಹಾಸ ಪ್ರಸಿದ್ಧ ಖಂಡಿಗೆ ದೈವಸ್ಥಾನದ ಮೀನು ಹಿಡಿಯುವ ವಿಶೇಷ ಜಾತ್ರೆ ನಿಲ್ಲುವ ಹಂತಕ್ಕೆ ತಲುಪಿದೆ .ಜಾನುವಾರುಗಳಿಗೆ ನೀರು ಕುಡಿಯಲು ಮತ್ತು ಮೇವು ತಿನ್ನದ ಹೀನಾಯ ಪರಿಸ್ಥಿತಿ ಎದುರಾಗಿದ್ದು ಬಾವಿಯ ನೀರು ಕುಡಿದ ಅನೇಕ ಜನರು ಆಸ್ಪತ್ರೆಯಲ್ಲಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಚೇಳೈರು ಗ್ರಾ.ಪಂ. ಅಧ್ಯಕ್ಷ ಜಯಾನಂದ ಮಾತನಾಡಿ, ನಂದಿನಿ ನದಿ ಕಲುಷಿತಗೊಂಡ ಸಮಸ್ಯೆ ಬಗ್ಗೆ ಗ್ರಾಮ ಪಂಚಾಯಿತಿ ಮತ್ತು ಸಂರಕ್ಷಣಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿ, ನಗರ ಪಾಲಿಕೆ, ಪರಿಸರ ಇಲಾಖೆ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ನೀಡಿದ್ದು ಸರಿಪಡಿಸುವ ಭರವಸೆ ನೀಡಿದ್ದಾರೆ. ಆದರೆ ಈವರೆಗೆ ಸರಿಪಡಿಸಿಲ್ಲ. ಆದುದರಿಂದ ಈ ಸಮಸ್ಯೆಗೆ ಜಿಲ್ಲಾಡಳಿತ ಮತ್ತು ಪರಿಸರ ಇಲಾಖೆಯ ವೈಪಲ್ಯ ನೇರ ಕಾರಣವಾಗಿದ್ದು ಜನಾಂದೋಲನ ಮತ್ತು ಕಾನೂನು ಹೋರಾಟದ ಮೂಲಕ ಈ ಸಮಸ್ಯೆಗೆ ಪರಿಹಾರ ಒದಗಿಸುವ ಅಗತ್ಯವಿದೆ ಎಂದರು.
ಸ್ಥಳೀಯರಾದ ದಿವಾಕರ ಸಾಮಾನಿ ಚೇಳೈರುಗುತ್ತು ಮಾತನಾಡಿ ಮಾ.4ರಂದು ಬೆಳಗ್ಗೆ 10ಕ್ಕೆ ಚೇಳೈರು ನಂದಿನಿ ಮಿತ್ರ ಮಂಡಳಿಯಲ್ಲಿ ಎಲ್ಲಾ ಗ್ರಾಮಸ್ಥರು ಒಟ್ಟು ಸೇರಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದ್ದು ಎಲ್ಲರ ಸಹಕಾರ ಅಗತ್ಯ ಎಂದರು.ಸುಕೇಶ್ ಶೆಟ್ಟಿ ಖಂಡಿಗೆ ಮಾತನಾಡಿದರು.
ರಾಜಕೀಯ ರಹಿತ ಹೋರಾಟ ನಡೆಸಲು ನಿರ್ಣಯಿಸಲಾಯಿತು. ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಾದ ಸತೀಶ್ ಮುಂಚೂರು, ಚಿತ್ತರಂಜನ್ ಭಂಡಾರಿ, ಉದಯಕುಮಾರ್ ಶೆಟ್ಟಿ ತೋಕೂರುಗುತ್ತು, ವಕೀಲರಾದ ರವೀಂದ್ರನಾಥ್ ಶೆಟ್ಟಿ, ದಯಾನಂದ ಶೆಟ್ಟಿ ಖಂಡಿಗೆ, ಸುಧಾಕರ ಶೆಟ್ಟಿ ಖಂಡಿಗೆ, ವೀಣಾ ಟಿ ಶೆಟ್ಟಿ ಚೇಳ್ಳೆರುಗುತ್ತು, ಪುಷ್ಪರಾಜ್ ಶೆಟ್ಟಿ ಮಧ್ಯ, ಪ್ರತಿಮಾ ಶೆಟ್ಟಿ ಮಧ್ಯ, ರಮೇಶ್ ಪೂಜಾರಿ ಚೇಳ್ಳರು, ಬಾಲಕೃಷ್ಣ ಶೆಟ್ಟಿ ಚೇಳೊರು, ಸುರೇಶ್ ಶೆಟ್ಟಿ ಕಾಲನಿ, ಪ್ರಮೋದ್ ಶೆಟ್ಟಿ ಸುರತ್ಕಲ್, ಕಿರಣ್ ಶೆಟ್ಟಿ ಕೆರೆಮನೆ,ಲಕ್ಷ್ಮಣ ಪೂಜಾರಿ, ಮೋಹನ್ ಚೇಳ್ಳೆರು, ಮುದ್ದು ಸುವರ್ಣ, ಚರಣ್ ಕುಮಾರ್,ನಾಗೇಶ್ ಖಂಡಿಗೆ ಮತ್ತಿತರರು ಇದ್ದರು.